ಸಾರಾಂಶ
ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆಯಿಂದ ಧಾರವಾಡ ಜಿಲ್ಲೆ ಮೂರ್ನಾಲ್ಕು ತಾಲೂಕು ವ್ಯಾಪ್ತಿಯಲ್ಲಿ ಅಂದಾಜು 1 ಲಕ್ಷ ಹೆಕ್ಟರ್‌ನಷ್ಟು ಬೆಳೆಹಾನಿಯಾಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವ ಮೂಲಕ ಸೂಕ್ತ ಪರಿಹಾರಕ್ಕೆ ಸಿಎಂಗೆ ಆಗ್ರಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅಣ್ಣಿಗೇರಿ ತಾಲೂಕಿನ ಮಣಕವಾಡ, ಶಿಶುವಿನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಶನಿವಾರ ಬೆಳೆ ಹಾನಿ ಪ್ರದೇಶ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಮುಂಗಾರಿನ ಪ್ರಮುಖ ಬೆಳೆಯಾದ ಹೆಸರು 80 ಸಾವಿರ ಹೆಕ್ಟರ್‌ನಷ್ಟು ಹಾನಿಯಾಗಿದ್ದರೆ, 6.5 ಸಾವಿರ ಹೆಕ್ಟೇರ್ ಉದ್ದು, 7.5 ಸಾವಿರ ಹೆಕ್ಟೇರ್ ಸೋಯಾ, 50 ಹೆಕ್ಟೇರ್ ಮೆಕ್ಕೆಜೋಳ ಹಾಗೂ ಈರುಳ್ಳಿ, ಬೆಳ್ಳುಳ್ಳಿ, ಮೆಣಸು 7 ಸಾವಿರ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಆ ಮೂಲಕ ಸರಿಸುಮಾರು ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹೆಕ್ಟೇರ್‌ನಷ್ಟು ಬೆಳೆಯಾಗಿದೆ ಎಂದರು.
ಈಗಾಗಲೇ ಜಿಲ್ಲಾಡಳಿತ, ತಾವು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಬೆಳೆಹಾನಿ ಉಂಟಾದ ರೈತರು ಹೆಚ್ಚಿನ ಪರಿಹಾರಕ್ಕೆ ರೈತರು ಆಗ್ರಹಿಸಿದ್ದು, ಈ ಬಗ್ಗೆ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಶೀಘ್ರವೇ ಹೆಚ್ಚಿನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗುವುದು ಎಂದರು.ಖರೀದಿ ಕೇಂದ್ರ ಸ್ಥಾಪನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಚಿವರೊಂದಿಗೆ ಮಾತನಾಡಿದ್ದು, ಈ ನಿಟ್ಟಿನಲ್ಲಿ ಖರೀದಿ ಕೇಂದ್ರ ಸ್ಥಾಪನೆಯಿಂದ ರೈತರಿಗೆ ಆಗುವ ಲಾಭದ ಕುರಿತು ಮನವರಿಕೆ ಮಾಡುವ ಜತೆಗೆ ಆಗ್ರಹಿಸಲಾಗುವುದು. ಇನ್ನು ಬೆಳೆವಿಮೆ ವಿಚಾರವನ್ನು ಎರಡೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿವೆ. ಈ ಹಿಂದೆ ಪ್ರೈವೆಟ್ ಸೆಕ್ಟರ್ ಕಂಪನಿಯಿಂದ ಬೆಳೆವಿಮೆ ವಿತರಣೆಯಿಂದ ತೊಂದರೆಗಳು ಆಗುತ್ತಿದ್ದವು. ಆದರೀಗ ಸರ್ಕಾರಿ ಸ್ವಾಮ್ಯದ ಕಂಪನಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಸದ್ಯ ಇನ್ಸೂರೆನ್ಸ್ ತುಂಬಿದ ರೈತರಿಗೆ ಪರಿಹಾರ ಯಾವುದೇ ತೊಡಕುಗಳಿಲ್ಲದೇ, ಬೆಳೆವಿಮೆ ದೊರಕುವ ನಿರೀಕ್ಷೆ ಹೊಂದಲಾಗಿದೆ. ಸದ್ಯ ಮಳೆಯಿಂದ ಹಾನಿಗೊಳದ ಬೆಳೆಗಳಿಗೆ ಸರ್ಕಾರದಿಂದ ರೈತರಿಗೆ ಅಗತ್ಯ ಪರಿಹಾರ ಒದಗಿಸಲಾಗುವುದು ಎಂದರು.ಈ ವೇಳೆ ಶಾಸಕ ಎಚ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್ಪಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಮುಖಂಡರಾದ ಅರ್ಜುನ ಪಾಟೀಲ, ಪ್ರೇಮನಾಥ ಚಿಕ್ಕತುಂಬಳ, ಶ್ರೀಕಾಂತ ಗಾಯಕವಾಡ ಸೇರಿದಂತೆ ಹಲವರಿದ್ದರು.
148 ಮನೆಗಳ ಕುಸಿತ: ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ 148 ಮನೆಗಳು ಬಿದ್ದಿವೆ. ಇದರಲ್ಲಿ ಶೇ. 70-80ರಷ್ಟು ಬಿದ್ದ ಮನೆಗಳಿಗೆ ಸರ್ಕಾರದಿಂದ ₹1.20 ಲಕ್ಷ ಪರಿಹಾರ ವಿತರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕಾರ್ಯೋನ್ಮುಖವಾಗಿದ್ದು, ಶೀಘ್ರವೇ ಪರಿಹಾರ ವಿತರಣೆಯಾಗಲಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಕುಸಿದ ಮನೆಗಳಿಗೆ ಸಚಿವರ ಭೇಟಿ: ಅಣ್ಣಿಗೇರಿ ತಾಲೂಕಿನ ಶಿಶುವಿನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಕುಸಿತವಾದ ಶಿವಾನಂದ ಕೌಜಗೇರಿ ಎಂಬವರ ಮನೆಗೆ ಸಚಿವ ಸಂತೋಷ ಲಾಡ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಸರ್ಕಾರದಿಂದ ಶೀಘ್ರವೇ ₹1.20 ಲಕ್ಷ ಪರಿಹಾರ ಒದಗಿಸಲಾಗುವುದು ಮತ್ತು ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ. ಹೀಗಾಗಿ, ತಾವು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು. ಇದೇ ವೇಳೆ ಕೌಜಗೇರಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ₹25 ಸಾವಿರ ಧನಸಹಾಯ ನೀಡಿದರು.ಇನ್ನು ಅದೇ ಮಾರ್ಗದಲ್ಲಿ ಬರುತ್ತಿದ್ದ ವೇಳೆ ಶಿಶುವಿನಹಳ್ಳಿ ಗ್ರಾಮದ ವಯೋವೃದ್ಧೆ ನಿಂಗಮ್ಮ ಕರಡಿಯವರ ಎಂಬುವರು ಮನೆ ಬೀಳುವ ಸ್ಥಿತಿಯಲ್ಲಿದೆ. ಹಾಗಾಗಿ ಸೂಕ್ತ ಸಹಾಯ ನೀಡುವಂತೆ ಕೋರಿದರು. ಅವರ ಮನವಿಗೆ ಸ್ಪಂದಿಸಿದ ಸಚಿವ ಲಾಡ್, ವೈಯಕ್ತಿಕವಾಗಿ ₹25 ಸಾವಿರ ಧನಸಹಾಯ ಮಾಡಿದರಲ್ಲದೇ, ಸುಸಜ್ಜಿತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಮಣಕವಾಡ ಗ್ರಾಮ ವ್ಯಾಪ್ತಿಯಲ್ಲಿ ಉದ್ದಿನ ಬೆಳೆ, ಹೆಸರು, ಮೆಣಸಿನ ಬೆಳೆ ವೀಕ್ಷಣೆ ಮಾಡಿದರಲ್ಲದೇ, ಸೂಕ್ತ ಸಮೀಕ್ಷೆಗೆ ಅಧಿಕಾರಿಗಳಿಗೆ ಸೂಚಿಸಿದರು. ಆಗ ಮೇಲ್ನೋಟಕ್ಕೆ ಬೆಳೆ ಹಸಿರು ಕಾಣುತ್ತಿದೆಯಾದರೂ, ಸಂಪೂರ್ಣವಾಗಿ ಹಾನಿಯಾಗಿದೆ. ಹೀಗಾಗಿ ಸೂಕ್ತವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕೆಂದು ರೈತರು ಆಗ್ರಹಿಸಿದರು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಸಮೀಕ್ಷೆ ನಡೆಸಬೇಕು. ಅಗತ್ಯ ಬಿದ್ದರೆ, ಡ್ರೋನ್ ಸಮೀಕ್ಷೆ ನಡೆಸಿ ಸೂಕ್ತ ವರದಿ ಮತ್ತು ದಾಖಲೆಗಳನ್ನು ಸಂಗ್ರಹಿಸಬೇಕು ಎಂದು ಹೇಳಿದರು.