ಸಾರಾಂಶ
ಕೋಲಾರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರಸ್ತುತ ಭೀಕರ ಬರದ ನಡುವೆಯೂ ಅವಿಭಜಿತ ಜಿಲ್ಲೆಯ ೧೯೨೮ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ದಿನಕ್ಕೆ ಸರಾಸರಿ ೧೦ ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಕಳೆದ ಸಾಲಿಗಿಂತ ಶೇ.೮.೫ ರಷ್ಟು ಸಂಗ್ರಹಣೆ ಹೆಚ್ಚಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಿನವಹಿ ಸರಾಸರಿ ೧೦.೦೦ ಲಕ್ಷ ಲೀ.ಗೂ ಮೇಲ್ಪಟ್ಟು ಸಮೃದ್ಧಿಯಾಗಿ ಹಾಲು ಶೇಖರಣೆಯಾಗುತ್ತಿದೆ. ಪ್ರಸ್ತುತ ಶೇಖರಣೆಯಾಗುತ್ತಿರುವ ಹಾಲಿನ ಪೈಕಿ ದಿನವಹಿ ಸುಮಾರು ೫.೦ ಲಕ್ಷ ಕೆ.ಜಿ. ಸ್ಯಾಚೆ ಹಾಲು, ೧.೦ ಲಕ್ಷ ಕೆ.ಜಿ. ಮೊಸರು, ೨.೫ ಲಕ್ಷ ಲೀ. ಗುಡ್‌ಲೈಫ್ ಹಾಲು ಮತ್ತು ನಂದಿನಿ ಉತ್ಪನ್ನಗಳನ್ನು ತಯಾರಿಸಿ ರಾಜ್ಯ ಮತ್ತು ಹೊರ ರಾಜ್ಯದ ಮಾರುಕಟ್ಟೆಗೆ ವಿತರಿಸಲಾಗುತ್ತಿದೆ.ಇದರ ಜೊತೆಗೆ ಘನ ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ೦೧ ರಿಂದ ೧೦ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅವಳಿ ಜಿಲ್ಲೆಯ ರೈತರ ಜೀವನಾಡಿಯಾಗಿ ಕೆಲಸ ನಿರ್ವಹಿಸುವಲ್ಲಿ ಒಕ್ಕೂಟವು ಪ್ರಮುಖ ಪಾತ್ರವಹಿಸಿಸುತ್ತಿದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ರು. ೩೪.೪೦ ಗಳಂತೆ ದರ ಪಾವತಿಸಿ ಘನ ರಾಜ್ಯ ಸರ್ಕಾರದ ಪ್ರೋತ್ಸಾಹಧನ ೫ ರು. ಸೇರಿ ಒಟ್ಟು ೩೯.೪೦ ರು.ಗಳನ್ನು ಪಾವತಿ ಮಾಡುತ್ತಿದ್ದು, ರಾಜ್ಯದ ಇತರೆಲ್ಲಾ ಒಕ್ಕೂಟಗಳಿಗಿಂತ ಹೆಚ್ಚಿನ ದರ ನೀಡುತ್ತಿದೆ ಮತ್ತು ಉತ್ಪಾದಕ ರೈತರಿಗೆ ತಾಂತ್ರಿಕ ಸೌಲಭ್ಯ ಒದಗಿಸುವಲ್ಲೂ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.ಪ್ರಸ್ತುತ ಬರಗಾಲ ಪರಿಸ್ಥಿತಿಯನ್ನು ಮನಗಂಡು ಉತ್ಪಾದಕರ ರಾಸುಗಳಿಗೆ ಮೇವಿನ ಕೊರತೆ ನೀಗಿಸಲು ಯೋಜನೆಗಳನ್ನು ರೂಪಿಸಿ ನೀರಾವರಿ ಹೊಂದಿರುವ ರೈತರಿಗೆ ಶೇ.೫೦ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಿ ಪ್ರತಿ ಎಕರೆಗೆ ೩ ಸಾವಿರ ರು. ಪ್ರೋತ್ಸಾಹಧನ ಪಾವತಿಸುವ ರಾಜ್ಯದ ಏಕೈಕ ಒಕ್ಕೂಟವಾಗಿದೆ. ಈಗಾಗಲೇ ೨೦೦೦ ಎಕರೆಗೆ ಬಹುವಾರ್ಷಿಕ ಮೇವಿನ ಬೆಳೆ ಬೀಜಗಳನ್ನು ಮತ್ತು ಸೂಪರ್ ನೇಪಿಯರ್ ಹುಲ್ಲಿನ ಕಡ್ಡಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಕ್ಕೂಟ ರಸಮೇವು ಘಟಕಗಳ ನಿರ್ಮಾಣಕ್ಕೆ ಪ್ರತಿ ಘಟಕಕ್ಕೆ ೧೫ ಸಾವಿರ ರು. ಅನುದಾನ ಹಾಗೂ ರಸಮೇವು ಚೀಲಗಳನ್ನು ಶೇ.೫೦ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಿ ಉತ್ಪಾದಕರನ್ನು ಪ್ರೋತ್ಸಾಹಿಸುತ್ತಿದೆ, ಇದರೊಂದಿಗೆ ಶೇ.೫೦ರ ರಿಯಾಯಿತಿ ದರದಲ್ಲಿ ೨೦೦೦೦ ಸಾವಿರ ಸಂಖ್ಯೆಯ ರಾಸುಗಳ ರಬ್ಬರ್ ಮ್ಯಾಟ್, ೬೫೦ ಸಂಖ್ಯೆ ಮೇವು ಕತ್ತರಿಸುವ ಯಂತ್ರಗಳು ಮತ್ತು ೮೫೦ ಸಂಖ್ಯೆ ಹಾಲು ಕರೆಯುವ ಯಂತ್ರಗಳನ್ನು ವಿತರಿಸಿ ಹೈನುಗಾರರನ್ನು ಉತ್ತೇಜಿಸಲಾಗಿದೆ ಎಂದು ವಿವರಿಸಿದ್ದಾರೆ.ಒಕ್ಕೂಟದ ವ್ಯಾಪ್ತಿಯಲ್ಲಿ ೩೭೦ ಬಿ.ಎಂ.ಸಿ. ಘಟಕಗಳನ್ನು ಅಳವಡಿಸಿ ಕಚ್ಚಾ ಹಾಲಿನ ಜೈವಿಕ ಗುಣಮಟ್ಟವನ್ನು ಕಾಪಾಡಲಾಗಿದೆ. ಪ್ರಸ್ತುತ ೧೦.೦೦ ಲಕ್ಷ ಲೀಟರ್ ಹಾಲನ್ನು ಬಿ.ಎಂ.ಸಿ. ಮುಖೇನ ಶೇಖರಣೆ ಮಾಡಿ ಸರಬರಾಜು ಮಾಡಲಾಗುತ್ತಿರುತ್ತದೆ. ಬಿ.ಎಂ.ಸಿ. ಘಟಕಗಳನ್ನು ಅಳವಡಿಸಲು ಸಿವಿಲ್ ಕಾಮಗಾರಿಗಾಗಿ ಪ್ರತಿ ಸಂಘಕ್ಕೆ ರೂ.೧.೦೦ ಲಕ್ಷ ಅನುದಾನ ನೀಡಿದೆ ಮತ್ತು ೧೦ ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ ಫ್ಯಾನಲ್ ಅಳವಡಿಕೆಗೆ, ಸಹಕಾರ ಸಂಘಗಳ ನೂತನ ಕಟ್ಟಡ ನಿರ್ಮಾಣಕ್ಕೂ ೩ ಲಕ್ಷ ನೆರವು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಕೋಮುಲ್ ಡೇರಿ ಆವರಣದಲ್ಲಿ ೨೦೦ ಕೋಟಿ ವೆಚ್ಚದಲ್ಲಿ ಎಂ.ವಿ.ಕೆ. ಗೋಲ್ಡನ್ ಡೇರಿ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಸರ್ಕಾರ ಮಂಜೂರು ಮಾಡಿರುವ ೫೦ ಎಕರೆ ಜಾಗದಲ್ಲಿ ೬೦.೦೦ ಕೋಟಿ ವೆಚ್ಚದಲ್ಲಿ ೧೨ ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ ಘಟಕ ಸ್ಥಾಪಿಸುತ್ತಿದೆ. ಚಿಂತಾಮಣಿಯಲ್ಲಿ ೫೦ ಕೋಟಿ ವೆಚ್ಚದಲ್ಲಿ ಐಸ್‌ಕ್ರೀಂ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.ಹಾಲು ಉತ್ಪಾದಕರ ಕುಟುಂಬಗಳ ರಾಸುಗಳಿಗೆ ಗುಂಪು ವಿಮಾ ಯೋಜನೆ, ಹಾಲು ಉತ್ಪಾದಕರು ಮತ್ತು ಅವಲಂಬಿತರಿಗೆ ಕೋಮುಲ್ ವಿಮಾ ಯೋಜನೆಯನ್ನು ಶೇ.೫೦ ರ ರಿಯಾಯಿತಿ ದರದಲ್ಲಿ ಹಾಗೂ ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿ ವರ್ಗದವರಿಗೆ ಉಚಿತವಾಗಿ ಮೆಡಿಕ್ಲೈಮ್ ಯೋಜನೆ ಜಾರಿ ಮಾಡಿದೆ. ಯನ್ನು ಹಾಗೂ ೬೦ ವರ್ಷ ಪೂರ್ಣಗೊಂಡು ನಿವೃತ್ತಿ ಹೊಂದುವ ಕಾರ್ಯದರ್ಶಿಗಳಿಗೆ ೨.೦೦ ಲಕ್ಷ ರು., ಹಾಲು ಪರೀಕ್ಷಕರಿಗೆ ೧ ಲಕ್ಷ ರು. ಹಾಗೂ ಸಹಾಯಕರಿಗೆ ೭೫೦೦೦ ರು. ಗಳನ್ನು ವಯೋನಿವೃತ್ತಿ ಪರಿಹಾರಧನವನ್ನು ಒಕ್ಕೂಟದ ವತಿಯಿಂದ ನೀಡಲಾಗುತ್ತದೆ. ಅವಿಭಜಿತ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.