ಸಾರಾಂಶ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯಗಳ ಉನ್ನತೀಕರಣಕ್ಕೆ ₹100 ಕೋಟಿ ಅನುದಾನ ಘೋಷಣೆಯಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯಗಳ ಉನ್ನತೀಕರಣಕ್ಕೆ ₹100 ಕೋಟಿ ಅನುದಾನ ಘೋಷಣೆಯಾಗಿದೆ.
ದೇಶದ 1,472 ವಿಶ್ವವಿದ್ಯಾಲಯಗಳ ಪೈಕಿ 26 ವಿಶ್ವವಿದ್ಯಾಲಯಗಳು ಮಾತ್ರ ಈ ಯೋಜನೆಯ ಮಲ್ಟಿ- ಡಿಸಿಪ್ಲೀನರಿ ಎಜುಕೇಶನ್ ಆ್ಯಂಡ್ ರಿಸರ್ಚ್ ಯೂನಿವರ್ಸಿಟಿ ಮಾನದಂಡದ ಅಡಿಯಲ್ಲಿ ಸ್ಥಾನ ಪಡೆದಿದ್ದು, ಇದರಲ್ಲಿ ಬೆಂಗಳೂರು ವಿವಿ ಕೂಡ ಒಂದಾಗಿದೆ.
ನ್ಯಾಕ್ ಎ++ ಮಾನ್ಯತೆ ಪಡೆದಿದ್ದ ಬೆಂಗಳೂರು ವಿವಿ ಈಗ ಪಿಎಂ ಉಷಾ ಯೋಜನೆಯ ಅನುದಾನಕ್ಕೆ ಆಯ್ಕೆಯಾಗುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಕೇಂದ್ರದ ಪ್ರಾಯೋಜಿತ ಅನುದಾನ ನೀಡಲು ರೂಪಿಸಿದ್ದ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ (ರುಸ) ಯೋಜನೆಯನ್ನು ಎನ್‌ಡಿಎ ಸರ್ಕಾರ ಪಿಎಂ ಉಷಾ ಎಂದು ಬದಲಾವಣೆ ಮಾಡಿತ್ತು.
ಬೆಂಗಳೂರು ವಿವಿ ತನ್ನ ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸುಧಾರಿಸಲು ಈ ಯೋಜನೆಯಡಿ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿತ್ತು. ವಿವಿಯ ನ್ಯಾಕ್ ಗ್ರೇಡ್, ವಿದ್ಯಾರ್ಥಿಗಳ ಸಂಖ್ಯೆ, ಬೋಧನೆ ಮತ್ತು ಸಂಶೋಧನಾ ಚಟುವಿಟಿಕೆಗಳಿಗೆ ಅನುಗುಣವಾಗಿ ಈ ಯೋಜನೆಗೆ 530 ಅಂಕಗಳನ್ನು ಗಳಿಸಿ ₹100 ಕೋಟಿ ಅನುದಾನ ಪಡೆದುಕೊಂಡಿದೆ.ಅನುದಾನ ಬಳಕೆ
ವಿವಿಯು ಪ್ರಸ್ತಾವಿತ ಹೊಸ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ಶೈಕ್ಷಣಿಕ ಬ್ಲಾಕ್‌ಗಳು, ಬಯಲು ರಂಗಮಂದಿರ ಮತ್ತು ಹಾಸ್ಟೆಲ್‌ಗಳನ್ನು ನಿರ್ಮಿಸಲು ₹50 ಕೋಟಿ, ಕ್ಯಾಂಪಸ್ ನೆಟ್‌ವರ್ಕಿಂಗ್‌ನ ಉನ್ನತೀಕರಣ, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್ ಕೊಠಡಿಗಳ ಸ್ಥಾಪನೆ, ಆರೋಗ್ಯ ಕೇಂದ್ರದ ಉನ್ನತೀಕರಣ ಮತ್ತಿತರ ಕಾರ್ಯಗಳಿಗೆ ₹30 ಕೋಟಿ ಮತ್ತು ಉಳಿದ ₹20 ಕೋಟಿಗಳನ್ನು ಸುಧಾರಿತ ವೈಜ್ಞಾನಿಕ ಉಪಕರಣಗಳ ಖರೀದಿ ಮತ್ತು ವಿವಿಧ ಸಾಮರ್ಥ್ಯ ನಿರ್ಮಾಣ, ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಬಳಸಲು ಉದ್ದೇಶಿಸಲಾಗಿದೆ ಎಂದು ವಿವಿಯ ಕುಲಪತಿ ಪ್ರೊ. ಜಯಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.