ಸಾರಾಂಶ
619 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮಹಾವಿದ್ಯಾಲಯವು ಶೇ. 100ರಷ್ಟು ಸಾಧನೆ ಮಾಡಿದೆ.
ಹುಬ್ಬಳ್ಳಿ:
ಈಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಭೈರಿದೇವರಕೊಪ್ಪದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜು ಶೇ. 100ರಷ್ಟು ಫಲಿತಾಂಶ ಪಡೆದಿದೆ. ಕಾಲೇಜಿನ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯಸ್ಥ ಅನಿಲಕುಮಾರ ಚೌಗಲಾ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 619 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮಹಾವಿದ್ಯಾಲಯವು ಶೇ. 100ರಷ್ಟು ಸಾಧನೆ ಮಾಡಿದೆ. 2019ರಿಂದ ಸತತ 5 ವರ್ಷಗಳಿಂದ ಕಾಲೇಜು ಶೇ.100ರಷ್ಟು ಸಾಧನೆ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಲೇಜಿನ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮೀ ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅದರಂತೆ ಕಾಲೇಜಿನ ಆದಿತ್ಯಾ ಅವಸೇರಕರ(594) ಮತ್ತು ಸಹನಾ ಇಳಗೇರ (594) 5ನೇ ರ್‍ಯಾಂಕ್, ಕೃಪಾ ವಡೊನಿ (593) ಹಾಗೂ ಸಂಕಲ್ಪ ಕುಂತೆ (593) 6ನೇ ರ್‍ಯಾಂಕ್, ಅನಿರುದ್ಧ ಕುಲಕರ್ಣಿ (591), ಶ್ರೇಯಾ ಗೌಡರ (591) ಹಾಗೂ ವೈಷ್ಣವಿ ಕುರಿ (591) 8ನೇ ರ್‍ಯಾಂಕ್ , ಕಿರಣ ತೊಳೆ ಮತ್ತು ಸಮೀದ್ ಟಕ್ಕೆ (590) 9ನೇ ರ್‍ಯಾಂಕ್, ರಮ್ಯಾ ಕಾಕೋಳ ಮತ್ತು ಸಾಗರ ಗೌರನ್ನವರ (598) 10ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ರಾಜ್ಯಕ್ಕೆ 10 ಸ್ಥಾನಗಳಲ್ಲಿ ಕಾಲೇಜಿನ ಒಟ್ಟು 12 ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಸಂತಸ ತಂದಿದೆ. ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿಯ ಶ್ರಮ ಹಾಗೂ ಆಸಕ್ತಿಯಿಂದಾಗಿ ನಮ್ಮ ಕಾಲೇಜು ಈ ಸಾಧನೆ ಮಾಡುವಂತಾಗಿದೆ ಎಂದರು.ಈ ವೇಳೆ ಸಂಸ್ಥೆಯ ಚೇರ್‌ಮನ್ ಶ್ರೀದೇವಿ ಚೌಗಲಾ, ಪ್ರಾಚಾರ್ಯ ಡಾ. ಆನಂದ ಮುಳಗುಂದ, ನಿರ್ದೇಶಕ ಗಂಗಾಧರ ಕುಮಡೊಳ್ಳಿ, ಡಾ. ರಮೇಶ ಬಂಡಿವಾಡ ಸೇರಿದಂತೆ ಹಲವರಿದ್ದರು.