ಸಾರಾಂಶ
ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣಿನ ಆರೈಕೆ ನೀಡುವ ಮತ್ತು ಅಂಧತ್ವ ಪ್ರಮಾಣದ ದರವನ್ನು ಇಳಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 14 ದೃಷ್ಟಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಕಾರವಾರ: ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣಿನ ಆರೈಕೆ ನೀಡುವ ಮತ್ತು ಅಂಧತ್ವ ಪ್ರಮಾಣದ ದರವನ್ನು ಇಳಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 14 ದೃಷ್ಟಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಆಶಾಕಿರಣ ಯೋಜನೆಯಡಿ ನೇತ್ರತಜ್ಞರು ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲು ಪ್ರತಿ ಪಿಎಚ್‌ಸಿಗೆ ಹೋಗುವ ಬದಲು, ಎಲ್ಲ ಜಿಲ್ಲೆ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅಗತ್ಯ ಪರೀಕ್ಷೆ ಮಾಡಲಾಗುವುದು. ಅಲ್ಲದೇ ಕ್ಷೇತ್ರ ಸಿಬ್ಬಂದಿಯಾದ ಆಶಾ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಮ್ಮ ದಿನನಿತ್ಯದ ಚಟುವಟಿಕೆ ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ ಶಂಕಿತ ದೃಷ್ಟಿದೋಷ ಪ್ರಕರಣಗಳು ಕಂಡು ಬಂದಲ್ಲಿ, ಹೆಚ್ಚಿನ ಕಣ್ಣಿನ ತಪಾಸಣೆಗೆ ಹತ್ತಿರದ ದೃಷ್ಟಿಕೇಂದ್ರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.ಅಂಧತ್ವ ಮುಕ್ತ ಕರ್ನಾಟಕವನ್ನಾಗಿ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದ್ದು, ಕಣ್ಣಿನ ಪೊರೆ ಮತ್ತು ವಕ್ರೀಕಾರಕ ದೋಷಗಳಿಂದ ದೃಷ್ಟಿ ಸಮಸ್ಯೆಗಳ ಸಂಭವವನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಎಲ್ಲ ಆಶಾಕಿರಣ ದೃಷ್ಟಿಕೇಂದ್ರಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕಗಳ ವಿತರಣೆ, ಶಸ್ತ್ರಚಿಕಿತ್ಸೆಗಳು ಮತ್ತು ಇತರ ಕಣ್ಣಿನ ಚಿಕಿತ್ಸೆಗಳಿಗೆ ಉಚಿತ ವ್ಯವಸ್ಥೆ, ಉತ್ತಮ ದೃಷ್ಟಿಯ ಪ್ರಾಮುಖ್ಯತೆ ಮತ್ತು ಕಣ್ಣುಗಳನ್ನು ಹೇಗೆ ಉತ್ತಮವಾಗಿ ನೋಡಿಕೊಳ್ಳುವುದು ಎಂಬುದರ ಕುರಿತು ಅರಿವು ಮೂಡಿಸಲಾಗುವುದು.ಕಣ್ಣಿನ ಸೋಂಕು ವಿಟಮಿನ್ ಎ ಕೊರತೆ, ಅಪೌಷ್ಟಿಕತೆ, ಅಕ್ಷಿಪಟಲದ ಗಾಯ, ಅನುವಂಶಿಕ ನ್ಯೂನತೆ ಅಂಧತ್ವಕ್ಕೆ ಮೂಲ ಕಾರಣಗಳಾಗಿದ್ದು, ಕಣ್ಣಿನ ವಿವಿಧ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಬಹುತೇಕ ಅಂಧತ್ವದ ಪ್ರಕರಣಗಳನ್ನು ಗುಣಪಡಿಸಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ 14 ದೃಷ್ಟಿ ಕೇಂದ್ರಗಳು ಸಾರ್ವಜನಿಕರ ಸೇವೆಗೆ ಲಭ್ಯವಿದ್ದು, ಅಂಕೋಲಾ, ಭಟ್ಕಳ, ಹಳಿಯಾಳ, ಹೊನ್ನಾವರ, ಕುಮಟಾ, ಮುಂಡಗೋಡು, ಸಿದ್ದಾಪುರ, ಶಿರಸಿ, ಸುಪಾ, ಯಲ್ಲಾಪುರ ತಾಲೂಕು ಆಸ್ಪತ್ರೆಗಳಲ್ಲಿ, ಶಿರಾಲಿ, ದಾಂಡೇಲಿ, ಪಾಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.ಜಿಲ್ಲೆಯ ಸಾರ್ವಜನಿಕರು ಈ ಕೇಂದ್ರಗಳ ಪ್ರಯೋಜನ ಪಡೆದು, ತಮ್ಮ ದೃಷ್ಟಿದೋಷ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಕನ್ನಡಕಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಡಾ. ಶಂಕರ್ ರಾವ್, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ.