ವಿಜ್ಞಾನವನ್ನು ಊಹಿಸಿದಷ್ಟೂ ಅನುಭವಿಸಲು ಸಾಧ್ಯ
KannadaprabhaNewsNetwork | Published : Oct 29 2023, 01:00 AM IST
ವಿಜ್ಞಾನವನ್ನು ಊಹಿಸಿದಷ್ಟೂ ಅನುಭವಿಸಲು ಸಾಧ್ಯ
ಸಾರಾಂಶ
17ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ ಅಭಿಮತ
ಕನ್ನಡಪ್ರಭ ವಾರ್ತೆ, ತುಮಕೂರು ವಿಜ್ಞಾನವನ್ನು ಊಹಿಸಬೇಕು. ಆಸ್ವಾದಿಸಬೇಕು. ಅನುಭವಿಸಬೇಕು. ನಮ್ಮ ಕಲ್ಪನೆಗಳೇ ಆವಿಷ್ಕಾರಗಳಿಗೆ ಮುನ್ನುಡಿಯಾಗುತ್ತವೆ. ಆಗ ಮಾತ್ರ ಬಲಿಷ್ಠ ರಾಷ್ಟ್ರಕಟ್ಟಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ, ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 17ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಶಿಕ್ಞಣದ ಆಯಾಮವೇ ವಿಶ್ಲೇಷಣೆ. ಶಿಕ್ಷಣ ಹಿಂದಿನ ನಾಗರಿಕತೆಯನ್ನು ಪರಿಚಯಿಸಿ, ಸಮಕಾಲೀನ ಬದುಕಿನಲ್ಲಿ ಅಳವಡಿಕೆಯಾಗಿ, ಮುಂದಿನ ಪೀಳಿಗೆಗೆ ಮೆಟ್ಟಿಲಾಗಬೇಕು. ಇಂದ್ರಿಯಗಳಿಗೆ ಜೋತು ಬಿದ್ದರೆ ಮನುಷ್ಯ ಮಾನಸಿಕವಾಗಿ ದುರ್ಬಲನಾಗುತ್ತಾನೆ. ಪ್ರಯತ್ನಗಳ ಬೆನ್ನಟ್ಟಿದರೆ ಯಶಸ್ಸಿನ ಶಿಖರವೇರುತ್ತಾನೆ ಎಂದರು. ತನ್ನನ್ನು ತಾನು ಗಮನಿಸುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಮಾನವ ಜನ್ಮಉಚಿತವಲ್ಲ. ಅದುವೇ ಹೋರಾಟದ ಫಲವೆಂದು ತಿಳಿಸುವ ಜವಾಬ್ದಾರಿ ಶಿಕ್ಷಕರದ್ದು. ಮೌಲ್ಯಗಳಿಂದ ಸಂಪಾದಿಸಿದ ಸ್ಥಾನ ಶಾಶ್ವತ ಎಂದು ತಿಳಿಸಬೇಕು. ಉತ್ತಮ ವ್ಯಕ್ತಿತ್ವವಷ್ಟೇ ನಮ್ಮನ್ನು ಕೊನೆಯವರೆಗೂ ಕಾಪಾಡುವುದು ಎಂದು ತಿಳಿಸಿದರು. ಮೌಲ್ಯಗಳನ್ನು ಗೌರವಿಸುವ ವಿಜ್ಞಾನದ ಅವಶ್ಯಕತೆಯಿದೆ. ಸಂಸ್ಕೃತವೇ ಈಗಿನ ವಿಜ್ಞಾನದ ಆಧುನಿಕ ರೂಪ. ಸಂಸ್ಕೃತ ಹೂರಣದಿಂದ ಹೊರಬಂದ ಭಾಷೆಯೇ ವಿಜ್ಞಾನ. ಭಾಷೆ ಸಾಗರವಿದ್ದಂತೆ. ಅಲ್ಲಿ ಪ್ರಾಂತೀಯ ಭಾಷೆಗಳೆಂಬ ಬೊಗಸೆಗಳನ್ನು ಪಡೆದುಕೊಳ್ಳಬಹುದು. ನಮ್ಮ ವಿದ್ಯೆ-ಜ್ಞಾನ ದೇಶಗಳ ನಡುವಿನ ಮೈತ್ರಿಗೆ ಕಾರಣವಾಗಬೇಕು. ಮನುಷ್ಯನ ಅಭ್ಯುದಯ, ವಿಕಾಸ, ಪ್ರಗತಿ ಎಲ್ಲ ಸಕಾರಾತ್ಮಕ ಅಂಶಗಳು ಜ್ಞಾನದ, ವಿವೇಕದ ಭಾಗವಾಗಬೇಕು. ಆಗ ಮಾತ್ರ ಬದುಕು ಸಾರ್ಥಕ ಎಂದರು. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಜ್ಜನರ ಜೊತೆಗೆ ಕಾಲ ವ್ಯಯಿಸಬೇಕು. ಭವಿಷ್ಯ ಭಾರತದ ಕನಸೆಂದರೆ ವಿಜ್ಞಾನ-ತಂತ್ರಜ್ಞಾನದಲ್ಲಿ ಹೊಸಹೊಸ ಆವಿಷ್ಕಾರಗಳು. ವಿಜ್ಞಾನಿಗಳ ಸಾಮರ್ಥ್ಯ ದೇಶದ ಬಲವನ್ನು ನಿರೂಪಿಸುತ್ತದೆ ಎಂದು ಹೇಳಿದರು. ಸಮ್ಮೇಳನದ ಎರಡನೆಯ ದಿನ ವಿವಿಧ ವಿಷಯಗಳ ವ್ಯಾಪ್ತಿಯಲ್ಲಿ ಗೋಷ್ಠಿಗಳು ನಡೆದವು. ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕದ ಅಧ್ಯಕ್ಷ ಕ್ಯಾಪ್ಟನ್ ಕಾರ್ಣಿಕ್, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಡಾ.ಲೋಕೇಶ್ ಭಾಗವಹಿಸಿದ್ದರು.