ವಿಐಎಸ್‌ಎಲ್ ಶತಮಾನೋತ್ಸವ ನೆಪದಲ್ಲಿ ಹಣ ವಸೂಲಿ: ಅಧ್ಯಕ್ಷ ಸುರೇಶ್ ಆರೋಪ
KannadaprabhaNewsNetwork | Published : Oct 29 2023, 01:00 AM IST
ವಿಐಎಸ್‌ಎಲ್ ಶತಮಾನೋತ್ಸವ ನೆಪದಲ್ಲಿ ಹಣ ವಸೂಲಿ: ಅಧ್ಯಕ್ಷ ಸುರೇಶ್ ಆರೋಪ
ಸಾರಾಂಶ
ಸಂಘಟನೆಗಳ ಹೊರಗಿಟ್ಟು ಸಮಿತಿ ರಚಿಸಿರುವ ನಟ ದೊಡ್ಡಣ್ಣ
- ಸಂಘಟನೆಗಳ ಹೊರಗಿಟ್ಟು ಸಮಿತಿ ರಚಿಸಿರುವ ನಟ ದೊಡ್ಡಣ್ಣ: ಟೀಕೆ - - - ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಆಚರಣೆಯಲ್ಲಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಅವರು ತಮ್ಮ ಹೆಸರು ಹಾಗೂ ರಾಜ್ಯ ಸರ್ಕಾರದ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರು ಎಚ್ಚೆತ್ತುಕೊಳ್ಳಬೇಕೆಂದು ವಿಐಎಸ್‌ಎಲ್ ಉಳಿಸಿ ಭದ್ರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್‌ಎಲ್ ಕಾರ್ಖಾನೆ ನಷ್ಟದಲ್ಲಿದ್ದು, ಗುತ್ತಿಗೆ ಕಾರ್ಮಿಕರು ತಿಂಗಳಿಗೆ ಕೇವಲ 13 ದಿನ ಕೆಲಸ ಮಾಡುವಂತಾಗಿದೆ. ಭದ್ರಾ ಜಲಾಶಯದಲ್ಲಿ ನೀರು ಇಲ್ಲದ ಪರಿಣಾಮ ಭತ್ತ, ಅಡಕೆ ಹಾಗೂ ತರಕಾರಿ ಬೆಳೆಗಳಿಗೆ ನೀರು ನಿಲ್ಲಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ವಿಪರ್ಯಾಸ ಎಂದರು. ಚಲನಚಿತ್ರ ನಟ ಎಸ್. ದೊಡ್ಡಣ್ಣ ಅವರು ಕ್ಷೇತ್ರದಲ್ಲಿರುವ ಪ್ರಗತಿಪರ ಸಂಘಟನೆಗಳು, ಕಾರ್ಮಿಕ, ದಲಿತ, ಧಾರ್ಮಿಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಹಾಗೂ ರೈತ ಸಂಘಟನೆಗಳನ್ನು ಹೊರಗಿಟ್ಟು ತಮ್ಮ ಮೂಗಿನ ನೇರಕ್ಕೆ ಶತಮಾನೋತ್ಸವ ಸಮಿತಿ ರಚಿಸಿಕೊಂಡಿದ್ದಾರೆ. ಅದಕ್ಕೆ ತಾವೇ ಅಧ್ಯಕ್ಷರಾಗಿದ್ದು, ಎಂ.ವಿ. ರೇವಣ್ಣಸಿದ್ದಯ್ಯ ಎಂಬವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರು ಹಾಗೂ ಮಾಜಿ ಸಿಎಂಗಳ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಲವಾರು ಉದ್ಯಮಿದಾರರು, ಗುತ್ತಿಗೆದಾರರು, ಬಿಲ್ಡರ್‌ಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ, ಅಪಾರ ಪ್ರಮಾಣದಲ್ಲಿ ದೇಣಿಗೆ ಪಡೆದಿದ್ದಾರೆ ಎಂಬ ಮಾಹಿತಿ ಜನರಿಂದ ಕೇಳಿಬರುತ್ತಿದೆ. ಇದು ಕೇವಲ ಹಣ ವಸೂಲಿ ಕಾರ್ಯಕ್ರಮವಲ್ಲದೇ ಬೇರೆನೂ ಅಲ್ಲ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಮುಖಂಡರಾದ ನಗರಸಭೆ ಮಾಜಿ ಸದಸ್ಯ ಮಹೇಶ್, ಪ್ರೇಮ್ ಕುಮಾರ್, ವೆಂಕಟೇಶ್, ಚಂದ್ರಶೇಖರ್, ದೇವರಾಜ್, ಭಾಸ್ಕರ್ ಬಾಬು ಇನ್ನಿತರರು ಉಪಸ್ಥಿತರಿದ್ದರು.