ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಮೇ 15 ಅಂತ್ಯದವರೆಗೆ 18,96,285 ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 31 ಜಿಲ್ಲೆಗಳಲ್ಲಿ 18,41,258 ಕುಟುಂಬಗಳ ಸಮೀಕ್ಷೆ ನಡೆದಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಕೇವಲ 55,027 ಕುಟುಂಬಗಳ ಸಮೀಕ್ಷೆ ನಡೆದಿದೆ.
ಇದೇ ವೇಳೆ ಪರಿಶಿಷ್ಟ ಜಾತಿ ಅಲ್ಲದ ಒಟ್ಟು 1,10,32,556 ಕುಟುಂಬಗಳನ್ನೂ ಗಣತಿದಾರರು ಭೇಟಿ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ತಿಳಿಸಿದರು.
ಒಳಮೀಸಲಾತಿ ಕುರಿತ ಏಕಸದಸ್ಯ ಆಯೋಗ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2011ರ ಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, 2025ರ ವೇಳೆಗೆ 25,72,050 ಕುಟುಂಬಗಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಲೆಕ್ಕಾಚಾರದಲ್ಲಿ ಸಮೀಕ್ಷೆ ಕಾರ್ಯ ಶೇ.73ರಷ್ಟಾಗಿದೆ, ತ್ವರಿತಗತಿಯಲ್ಲಿ ಸಮೀಕ್ಷೆ ನಡೆಯಲು ಪರಿಶಿಷ್ಟ ಜಾತಿಯವರು ಹೆಚ್ಚಿರುವ ಕಡೆ ಇಬ್ಬರನ್ನು, ಕಡಿಮೆ ಇರುವ ಕಡೆ ಒಬ್ಬ ಗಣತಿದಾರರನ್ನು ನಿಯೋಜಿಸಲಾಗುತ್ತಿದೆ ಎಂದರು.
ಬಿಬಿಎಂಪಿಯಲ್ಲಿ ಶಿಕ್ಷಕೇತರರಿಂದ ಸಮೀಕ್ಷೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲಾ ಶಿಕ್ಷಕರ ಕೊರತೆ ಇರುವ ಕಾರಣ ಪದವೀಧರ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನು ಸಮೀಕ್ಷೆ ಕಾರ್ಯಕ್ಕೆ ನೇಮಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸಮೀಕ್ಷೆಗೆ ಸಂಭಾವನೆ:
ಶಿಕ್ಷಕರಿಗೆ ಸರ್ಕಾರ ನಿಗದಿಪಡಿಸಿದ ರೀತಿಯಲ್ಲಿ ಸಂಭಾವನೆ ನೀಡಲಾಗುವುದು. ಆದರೆ ಶಿಕ್ಷಕೇತರರಿಗೆ ಐದು ಸಾವಿರ ರು. ಸಂಭಾವನೆ ಜೊತೆಗೆ ಪರಿಶಿಷ್ಟ ಜಾತಿಯ ಒಂದು ಕುಟುಂಬದ ಸಮೀಕ್ಷೆಗೆ ಹೆಚ್ಚುವರಿಯಾಗಿ 100 ರು. ನೀಡಲಾಗುವುದು ಎಂದು ರಾಕೇಶ್ ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಹಾಯವಾಣಿ:
ಸಮೀಕ್ಷೆ ವೇಳೆ ಉದ್ಬವಿಸುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ರಾಜ್ಯಮಟ್ಟದ ಸಹಾಯವಾಣಿ (ಸಂಖ್ಯೆ 94813 59000) ಸ್ಥಾಪಿಸಲಾಗಿದೆ, ಇದಲ್ಲದೆ, ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಯಾವ ಜಿಲ್ಲೆಯಲ್ಲಿ ಎಷ್ಟು
ಕುಟುಂಬ ಸಮೀಕ್ಷೆ ಅಂತ್ಯ? (ಮೇ 15)
ಬಾಗಲಕೋಟೆ-61,758. ಬಳ್ಳಾರಿ-46,774. ಬೆಂಗಳೂರು ಗ್ರಾಮೀಣ-43,536. ಬಿಬಿಎಂಪಿ-55,027. ಬೆಳಗಾವಿ-11,5686. ಬೆಂಗಳೂರು-38,769. ಬೀದರ್-61,139. ಚಾಮರಾಜನಗರ-52,860. ಚಿಕ್ಕಬಳ್ಳಾಪುರ-63,879. ಚಿಕ್ಕಮಗಳೂರು-47,527. ಚಿತ್ರದುರ್ಗ-79,313. ದಕ್ಷಿಣ ಕನ್ನಡ-26,262. ದಾವಣಗೆರೆ-74,557. ಧಾರವಾಡ-35,171. ಗದಗ-34,759. ಹಾಸನ-73,910. ಹಾವೇರಿ-49,748. ಕಲಬುರಗಿ-11,5940. ಕೊಡಗು-15,494. ಕೋಲಾರ-80,355. ಕೊಪ್ಪಳ-47,766. ಮಂಡ್ಯ-61,481. ಮೈಸೂರು-10,4939. ರಾಯಚೂರು-79,194. ರಾಮನಗರ-42,044. ಶಿವಮೊಗ್ಗ-54,209. ತುಮಕೂರು-11,0235. ಉಡುಪಿ-14,631. ಉತ್ತರ ಕನ್ನಡ-23,965. ವಿಜಯನಗರ-57,363. ವಿಜಯಪುರ-77,449. ಯಾದಗಿರಿ-50,545
ಇ-ಆಡಳಿತ ನಿರ್ದೇಶಕ ಯತೀಶ್ ಅವರು ಸಮೀಕ್ಷೆ ಅತ್ಯಂತ ಪಾರದರ್ಶಕ, ದತ್ತಾಂಶಗಳ ಸುರಕ್ಷತೆ ಹಾಗೂ ಸಮೀಕ್ಷೆಗಳ ತಾಜಾ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ. ಗಣತಿದಾರರು ಒಟಿಪಿ ಮೂಲಕ ಲಾಗಿನ್ ಆಗಿ ಸಮೀಕ್ಷೆ ನಡೆಸಿ ದತ್ತಾಂಶ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಸಮೀಕ್ಷೆ ಪ್ರಗತಿ ಪರಿಶೀಲಿಸಲು ಡ್ಯಾಶ್ ಬೋರ್ಡ್ ವ್ಯವಸ್ಥೆ ಇದೆ. ಸಂಗ್ರಹವಾಗುವ ಎಲ್ಲ ದತ್ತಾಂಶಗಳನ್ನು ಕರ್ನಾಟಕ ಡಾಟಾ ಸೆಂಟರ್‌ನಲ್ಲಿ ಮೂರು ಬಗೆಯಲ್ಲಿ ಸುರಕ್ಷಿತವಾಗಿರಲಿದೆ. ಆಯೋಗದ ಅಧ್ಯಕ್ಷರು ಮಾತ್ರ ಈ ದತ್ತಾಂಶ ನೋಡುವ ರೀತಿಯಲ್ಲಿ ಸುರಕ್ಷತೆ ಕಲ್ಪಿಸಲಾಗಿದೆ ಎಂದು ಹೇಳಿದರು.