ಸಾರಾಂಶ
ತುಂಗಭದ್ರಾ ಜಲಾಶಯವು ಬಹುತೇಕ ಭರ್ತಿಯಾದ ಹಿನ್ನೆಲೆ ಬುಧವಾರ ಜಲಾಶಯದ 33 ಗೇಟುಗಳ ಪ್ಯೆಕಿ 10 ಗೇಟುಗಳಿಂದ ನದಿಗೆ 20,000 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಜಲಾಶಯದ ಗೇಟುಗಳ ಸ್ಥಿತಿ-ಗತಿಗಳ ಬಗ್ಗೆ ಮತ್ತೆ ಸಾರ್ವಜನಿಕರಲ್ಲಿ ಅನುಮಾನ
ಎಸ್. ನಾರಾಯಣಕನ್ನಡಪ್ರಭ ವಾರ್ತೆ ಮುನಿರಾಬಾದ
ತುಂಗಭದ್ರಾ ಜಲಾಶಯವು ಬಹುತೇಕ ಭರ್ತಿಯಾದ ಹಿನ್ನೆಲೆ ಬುಧವಾರ ಜಲಾಶಯದ 33 ಗೇಟುಗಳ ಪ್ಯೆಕಿ 10 ಗೇಟುಗಳಿಂದ ನದಿಗೆ 20,000 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಪ್ರತಿ ಗೇಟನ್ನು ಒಂದು ಅಡಿ ಎತ್ತರಕ್ಕೆ ಎತ್ತಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ಜಲಾಶಯ ಪ್ರಸಕ್ತ ಸಾಲಿನಲ್ಲಿ 2ನೇ ಭಾರಿ ಭರ್ತಿಯಾಗಿದೆ. ಈ ರೀತಿ ಭರ್ತಿ ಆಗುತ್ತಿರುವುದು ಜಲಾಶಯದ ಇತಿಹಾಸದಲ್ಲೇ ಅಪರೂಪ.ಪ್ರಸಕ್ತ ಸಾಲಿನಲ್ಲಿ ಜು. 22ರಂದು ತುಂಗಭದ್ರಾ ಜಲಾಶಯವು ಭರ್ತಿಯಾಗಿ ಜಲಾಶಯದ 3 ಗೇಟುಗಳಿಂದ ನದಿಗೆ 8000 ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ತದನಂತರ ಜು. ತಿಂಗಳಲ್ಲಿ ವ್ಯಾಪಕ ಒಳಹರಿವು ಬಂದಿದ್ದರಿಂದ ನದಿಗೆ ಲಕ್ಷ ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಯಿತು.
ಆ. 10ರಂದು ಜಲಾಶಯದ ಗೇಟ್- 19 ಕಿತ್ತು ಹೋದ ಹಿನ್ನೆಲೆಯಲ್ಲಿ ಜಲಾಶಯದಿಂದ ಸುಮಾರು 40 ಟಿಎಂಸಿ ನೀರು ನದಿಗೆ ಹರಿಸಿ ಜಲಾಶಯಕ್ಕೆ ಸ್ಟಾಪ್ ಲಾಗ್ ಗೇಟನ್ನು ಅಳವಡಿಸಲಾಯಿತು. ತದನಂತರ ರೈತರು, ಕಾರ್ಮಿಕರು ಆತಂಕಗೊಂಡಿದ್ದರು. ಆದರೆ ವರುಣನ ಕೃಪೆಯಿಂದ ಜಲಾಶಯ ಮತ್ತೊಮ್ಮೆ ಭರ್ತಿಯಾಗಿದೆ. ಇದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.ಗೇಟುಗಳ ಸ್ಥಿತಿಗತಿಯ ಅನುಮಾನ:
ಸಾಮಾನ್ಯವಾಗಿ ಜಲಾಶಯದಿಂದ ನದಿಗೆ ನೀರು ಬಿಡಬೇಕಾದರೆ ಜಲಾಶಯದ ಮಧ್ಯಭಾಗದಲ್ಲಿರುವ 16ನೇ ಗೇಟಿನ ಬಲಭಾಗಕ್ಕೆ ಹಾಗೂ ಎಡ ಭಾಗಕ್ಕೆ ಸಮಪ್ರಮಾಣದಲ್ಲಿ ಗೇಟುಗಳನ್ನು ತೆರದು ನದಿಗೆ ನೀರನ್ನು ಹರಿಸಲಾಗುತ್ತದೆ. ಇದು ಪ್ರತಿ ಭಾರಿ ಅನುಸರಿಸುತ್ತಿರುವ ಪದ್ದತಿ.ಅದರೆ, ಪ್ರಸಕ್ತ ಸಾಲಿನಲ್ಲಿ ಜಲಾಶಯದ 10 ಗೇಟುಗಳನ್ನು ತೆರೆದಿದ್ದು ಮಧ್ಯದಲ್ಲಿ ಕೆಲವು ಗೇಟುಗಳನ್ನು ಬಿಟ್ಟು ಕೆಲವನ್ನು ತೆರೆದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.
ಗೇಟ್ ನಂ. 9 ಮತ್ತು 10 ತೆರೆಯಲಾಗಿದೆ, ಆದರೆ ಗೇಟ್ -11 ಅನ್ನು ತೆರೆದಿಲ್ಲ. ಗೇಟ್ -12 ಮತ್ತು 13 ಅನ್ನು ತೆರೆಯಲಾಗಿದ್ದು, ಗೇಟ್- 14 ಅನ್ನು ತೆರೆದಿರುವುದಿಲ್ಲ. ಮತ್ತೆ ಗೇಟ್- 15, 16, 17 ಗೇಟುಗಳನ್ನು ತೆರೆದು ನೀರನ್ನು ಹರಿಸಲಾಗುತ್ತಿದ್ದು, ಗೇಟ್- 18 , 20ರಿಂದ ನೀರನ್ನು ಹರಿಸಲಾಗುತ್ತಿಲ್ಲ. ಗೇಟ್- 19ಕ್ಕೆ ಸ್ಟಾಪ್ ಲಾಗ್‌ಗೇಟ್ ಅಳವಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ಗೇಟ್ ತೆರೆಯಲು ಸಾಧ್ಯವಿಲ್ಲ. ಅಧಿಕಾರಿಗಳು ಹೀಗೇಕೆ ಮಾಡುತ್ತಿದ್ದಾರೆ. ಈ ಗೇಟುಗಳು ಸುಸ್ಥಿತಿಯಲ್ಲಿಯೋ ಅಥವಾ ಇಲ್ಲವೋ? ಇದರ ಬಗ್ಗೆ ಸ್ಪಷ್ಟಿಕರಣ ನೀಡಬೇಕೆಂದು ರೈತರು ಹಾಗೂ ಸಾರ್ವಜನಿಕರು ಅಗ್ರಹಿಸಿದ್ದಾರೆ.2022ರಲ್ಲಿ ಅಧಿಕಾರಿಗಳು ಗೇಟ್-32 ಹೊರತುಪಡಿಸಿ ಎಲ್ಲ ಗೇಟುಗಳನ್ನು ತೆರೆಯಲಾಗಿತ್ತು. ಮಾಧ್ಯಮದವರು ಪ್ರಶ್ನಿಸಿದಾಗ ಉಡಾಫೆಯ ಉತ್ತರ ನೀಡಲಾಗಿತ್ತು. ಆದರೆ ವಾಸ್ತವ ಸ್ಥಿತಿಯಲ್ಲಿ ಗೇಟ್-32 ಆಪರೇಟ್ ಮಾಡಲು ಅಗುತ್ತಿರಲಿಲ್ಲ. ಮಾಧ್ಯಮದವರ ಒತ್ತಡ ಜಾಸ್ತಿಯಾದಾಗ ತಜ್ಞರನ್ನು ಕರೆಯಿಸಿ ಅದನ್ನು ದುರಸ್ತಿ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಯಾರೂ ದೂರವಾಣಿ ಕರೆ ಸ್ವೀಕರಿಸಲಿಲ್ಲ.