ವಿಜಯನಗರ ಜಿಲ್ಲೆಯಲ್ಲಿ 21 ಡೆಂಘೀ ಪ್ರಕರಣ ದೃಢ

| Published : Jun 30 2024, 12:49 AM IST

ಸಾರಾಂಶ

ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ದೊರೆತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಡೆಂಘೀ ಜ್ವರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿರುವ ಮಧ್ಯೆಯೂ ಜಿಲ್ಲೆಯಲ್ಲಿ 21 ಪ್ರಕರಣ ದೃಢಪಟ್ಟಿವೆ. ಜಿಲ್ಲೆಯಲ್ಲಿ ಡೆಂಘೀ ಜ್ವರ ಹಾವಳಿ ನಿಯಂತ್ರಣಕ್ಕೆ ಲಾರ್ವಾ ಸರ್ವೆ ಕಾರ್ಯ ಕೈಗೊಳ್ಳಲಾಗಿದ್ದು, ಜಾಗೃತಿ ಅಭಿಯಾನದ ಮೊರೆ ಹೋಗಲಾಗಿದೆ.

ಈಗಾಗಲೇ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ, ಮನೆಗೆ ತೆರಳಿ ಲಾರ್ವಾ ಸರ್ವೆ ಕಾರ್ಯ ಕೈಗೊಂಡಿದ್ದಾರೆ. ಡೆಂಘೀ ಜ್ವರ ಹಾವಳಿ ತಾರಕಕ್ಕೆ ಏರದಂತೆ ಆರಂಭದಲ್ಲೇ ಚಿವುಟಿ ಹಾಕುವ ಕಾರ್ಯ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.

21 ಡೆಂಘೀ ಪ್ರಕರಣ:

ಜಿಲ್ಲೆಯಲ್ಲಿ 21 ಡೆಂಘೀ ಪ್ರಕರಣಗಳು ದೃಢಪಟ್ಟಿವೆ. ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯ ಪ್ರಯೋಗಾಲಯದಲ್ಲೇ ಸ್ಯಾಂಪಲ್‌ಗಳನ್ನು ಪರೀಕ್ಷಿಸಿ ದೃಢಪಡಿಸಲಾಗುತ್ತಿದೆ. ಈ ಹಿಂದೆ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಜಿಲ್ಲೆಯಲ್ಲಿ 164 ಶಂಕಿತ ಡೆಂಘೀ ಜ್ವರದ ಸ್ಯಾಂಪಲ್‌ಗಳಲ್ಲಿ 21 ಪ್ರಕರಣಗಳಲ್ಲಿ ದೃಢಪಟ್ಟಿದೆ. ಗ್ರಾಮೀಣ ಹಾಗೂ ನಗರ ಭಾಗದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯ ಕೂಡ್ಲಿಗಿಯಲ್ಲಿ ಆರು, ಹೊಸಪೇಟೆ ತಾಲೂಕಿನಲ್ಲಿ ಐದು, ಹಗರಿಬೊಮ್ಮನಹಳ್ಳಿಯಲ್ಲಿ ಮೂರು, ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ತಲಾ ಎರಡು, ಕೊಟ್ಟೂರಿನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ. ಮತ್ತೆ ಹೊಸದಾಗಿ ಎರಡು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 21 ಡೆಂಘೀ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ.

ಮನೆ ಮನೆಗೆ ತೆರಳಿ ಲಾರ್ವಾ ಸರ್ವೆ:

ಜಿಲ್ಲೆಯ ನಗರಸಭೆ, ಪುರಸಭೆ, ಪಪಂ, ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಲಾರ್ವಾ ಸರ್ವೆ ನಡೆಸಲಾಗುತ್ತಿದೆ. ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಕೂಡಲೇ ನಾಶಪಡಿಸಲಾಗುತ್ತಿದೆ. ಈಗಾಗಲೇ ಆಯಾ ಗ್ರಾಪಂಗಳ ಪಿಡಿಒ, ನಗರಸಭೆ ಪೌರಾಯುಕ್ತರು, ಪುರಸಭೆ, ಪಪಂ ಮುಖ್ಯಾಧಿಕಾರಿಗಳಿಗೂ ಈ ಕುರಿತು ಆರೋಗ್ಯ ಇಲಾಖೆಯಿಂದ ಜ್ಞಾಪನಾ ಪತ್ರ ಕಳುಹಿಸಲಾಗಿದೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಾಗೃತಿ ಕೂಡ ಮೂಡಿಸಲಾಗಿದೆ.

ಡೆಂಘೀ ಜ್ವರ ಕಂಡುಬಂದ ಪ್ರದೇಶದಲ್ಲಿ ಲಾರ್ವಾ ಸರ್ವೆ ಕಾರ್ಯ ಚುರುಕುಗೊಳಿಸಲಾಗಿದೆ. ಈ ಮೂಲಕ ಡೆಂಘೀ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಜತೆಗೆ ಜಿಲ್ಲೆಯ ಉಳಿದ ಪ್ರದೇಶಗಳಲ್ಲೂ ಲಾರ್ವಾ ಸರ್ವೆ ಜೊತೆ ಜೊತೆಗೆ ಡೆಂಘೀ ಜ್ವರದ ಕುರಿತು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಆರೋಗ್ಯ ಸಿಬ್ಬಂದಿಗೆ ಲಾರ್ವಾ ಸರ್ವೆ ನಡೆಸಲು ಸೂಚಿಸಲಾಗಿದೆ.

ಮಳೆಗಾಲ ಇರುವುದರಿಂದ ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆಯ ಲಾರ್ವಾ ಉತ್ಪತ್ತಿಯಾಗುತ್ತದೆ. ಸಾರ್ವಜನಿಕರು ಮನೆಯಲ್ಲಿ ಹೆಚ್ಚು ದಿನಗಳ ಕಾಲ ನೀರನ್ನು ಶೇಖರಣೆ ಮಾಡಬಾರದು. ಮನೆಯ ಅಕ್ಕ ಪಕ್ಕ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಾಹನಗಳ ಖಾಲಿ ಟೈಯರ್‌, ಟೆಂಗಿನಕಾಯಿ ಚಿಪ್ಪು ಸೇರಿದಂತೆ ನೀರು ಶೇಖರಣೆಯಾಗುವ ಸ್ಥಳಗಳಲ್ಲಿ ಡೆಂಘೀ ಸೊಳ್ಳೆ ಲಾರ್ವಾ ಉತ್ಪತ್ತಿಯಾಗುತ್ತದೆ. ಇದನ್ನು ನಾಶಪಡಿಸಬೇಕು ಎಂದು ಹೇಳುತ್ತಾರೆ ಡಿಎಚ್‌ಒ ಡಾ.ಎಲ್‌.ಆರ್‌. ಶಂಕರ್‌ ನಾಯ್ಕ.

ಜಿಲ್ಲೆಯ ಹಳ್ಳಿ, ತಾಂಡಾ, ಕ್ಯಾಂಪ್‌, ಕಾಲೋನಿಗಳಲ್ಲೂ ಜಾಗೃತಿ ಮೂಡಿಸಬೇಕು. ಜತೆಗೆ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ. ಇಲ್ಲದಿದ್ದರೆ ಸೊಳ್ಳೆಗಳ ತಾಣವಾಗಿ ಮಾರ್ಪಾಡಾಗಲಿದೆ. ಹೊಸಪೇಟೆ ನಗರದಲ್ಲಿ ನಗರಸಭೆ, ಕಮಲಾಪುರದಲ್ಲಿ ಪುರಸಭೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ 21 ಡೆಂಘೀ ಪ್ರಕರಣ ದೃಢಪಟ್ಟಿವೆ. ಈ ಹಿಂದೆ ಬಳ್ಳಾರಿಗೆ ಸ್ಯಾಂಪಲ್‌ ಕಳುಹಿಸಲಾಗುತ್ತಿತ್ತು. ಈಗ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲೇ ಪರೀಕ್ಷಿಸಿ ದೃಢಪಡಿಸಲಾಗುತ್ತಿದೆ. ಲಾರ್ವಾ ಸರ್ವೆ ಕೂಡ ನಡೆಸಲಾಗುತ್ತಿದೆ ಎನ್ನುತ್ತಾರೆ ಡಿಎಚ್‌ಒ ವಿಜಯನಗರ ಡಾ.ಎಲ್‌.ಆರ್‌. ಶಂಕರ್‌ ನಾಯ್ಕ.