ಬೆಂಗಳೂರು : ಆಸ್ತಿ ತೆರಿಗೆ ಪಾವತಿ ಮಾಡದ 240ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳ ಸೀಜ್‌

| Published : Jan 09 2025, 12:46 AM IST / Updated: Jan 09 2025, 09:16 AM IST

ಬೆಂಗಳೂರು : ಆಸ್ತಿ ತೆರಿಗೆ ಪಾವತಿ ಮಾಡದ 240ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳ ಸೀಜ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಒನ್‌ ಟೈಮ್‌ ಸೆಟಲ್‌ ಮೆಂಟ್‌’ (ಒಟಿಎಸ್‌) ಯೋಜನೆಯಡಿ ಬಡ್ಡಿ ಮತ್ತು ದಂಡ ಮನ್ನಾ ಮಾಡಿದರೂ ಆಸ್ತಿ ತೆರಿಗೆ ಪಾವತಿ ಮಾಡದ 240ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳನ್ನು ಸೀಜ್‌ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

 ಬೆಂಗಳೂರು : ‘ಒನ್‌ ಟೈಮ್‌ ಸೆಟಲ್‌ ಮೆಂಟ್‌’ (ಒಟಿಎಸ್‌) ಯೋಜನೆಯಡಿ ಬಡ್ಡಿ ಮತ್ತು ದಂಡ ಮನ್ನಾ ಮಾಡಿದರೂ ಆಸ್ತಿ ತೆರಿಗೆ ಪಾವತಿ ಮಾಡದ 240ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳನ್ನು ಸೀಜ್‌ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಕಳೆದ ನವೆಂಬರ್‌ ಅಂತ್ಯದ ವರೆಗೆ ಒಟಿಎಸ್‌ ಯೋಜನೆ ಮೂಲಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಬಡ್ಡಿ ಹಾಗೂ ದಂಡ ಪಾವತಿಯ ರಿಯಾಯಿತಿ ನೀಡಲಾಗಿತ್ತು. ಆದರೂ ಸುಮಾರು 2 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳನ್ನು ಸೀಜ್‌ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಪ್ರತಿ ವಲಯದಿಂದ ತಲಾ 30 ವಾಣಿಜ್ಯ ಕಟ್ಟಡ ಸೀಜ್‌ ಮಾಡಬೇಕೆಂದು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.ತೆರಿಗೆ ವ್ಯಾಪ್ತಿಯಿಂದ ಇನ್ನೂ 2 ಲಕ್ಷ ಆಸ್ತಿ ಹೊರಗೆ:

ನಗರದಲ್ಲಿ 23 ಲಕ್ಷ ಆಸ್ತಿಗಳಿಗೆ ಖಾತಾ ನೀಡಲಾಗಿದೆ. ಆದರೆ, ತೆರಿಗೆ ವ್ಯಾಪ್ತಿಗೆ ಕೇವಲ 21 ಲಕ್ಷ ಆಸ್ತಿ ಮಾತ್ರ ಇವೆ. ಇನ್ನೂ ಎರಡು ಲಕ್ಷ ಆಸ್ತಿ ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಇನ್ನೂ ಬೆಸ್ಕಾಂ ದಾಖಲೆಗಳು ಹಾಗೂ ಬಿಬಿಎಂಪಿ ದಾಖಲೆಗಳನ್ನು ಹೋಲಿಕೆ ಮಾಡಿದರೆ 7 ಲಕ್ಷ ಆಸ್ತಿಗಳು ಖಾತಾ ಹೊಂದಿಲ್ಲ. ಈ ಎಲ್ಲಾ ವಿಷಯದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ತುಷಾರ್‌ ಗಿರಿನಾಥ್‌ ವಿವರಿಸಿದರು.

ದೊಡ್ಡ ಬಾಕಿ ಇರುವ ವಾಣಿಜ್ಯ ಕಟ್ಟಡಗಳು ಮಾತ್ರ ಹರಾಜು:

ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ಮಾಡಿಕೊಂಡು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಹಾಕುವುದಕ್ಕೆ ಅವಕಾಶ ಪಡೆಯಲಾಗಿದೆ. ಅವಕಾಶ ಇದೆ ಎಂದು ಸಣ್ಣ ಪುಟ್ಟ ಬಾಕಿ ಇರುವ ಕಟ್ಟಡಗಳನ್ನು ಹರಾಜು ಹಾಕುವುದಕ್ಕೆ ಮುಂದಾಗುವುದಿಲ್ಲ. ದೊಡ್ಡ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಇರುವ ವಾಣಿಜ್ಯ ಕಟ್ಟಡವನ್ನು ಅಗತ್ಯವಿದ್ದರೆ ಹರಾಜು ಹಾಕುವ ಕಾರ್ಯ ಮಾಡಲಾಗುವುದು. ಜತೆಗೆ, ಹರಾಜು ಹಾಕುವುದಕ್ಕೆ ಸಾಕಷ್ಟು ನಿಯಮ ಪಾಲನೆ ಮಾಡಬೇಕು ಎಂದು ತುಷಾರ್‌ ಸ್ಪಷ್ಟಪಡಿಸಿದರು.

ಎಲ್ಲಾ ಆಸ್ತಿ ಮಾಲೀಕರು ಇ-ಖಾತಾ ಪಡೆಯಬೇಕು:

ಈವರೆಗೆ ಆಸ್ತಿ ಮಾರಾಟವಿದ್ದರೆ ಮಾತ್ರ ಇ-ಖಾತಾ ಪಡೆಯುವಂತೆ ಸೂಚಿಸಲಾಗಿತ್ತು. ಇದೀಗ ಎಲ್ಲಾ ಆಸ್ತಿ ಮಾಲೀಕರು ಇ-ಖಾತಾ ಪಡೆಯಬೇಕು. ಇ-ಖಾತಾ ನೀಡುವ ವ್ಯವಸ್ಥೆ ಇದೀಗ ಸಂಪೂರ್ಣವಾಗಿ ಸಿದ್ಧವಾಗಿದೆ. ಸದ್ಯಕ್ಕೆ ಇ-ಖಾತಾ ಕಡ್ಡಾಯವಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಡ್ಡಾಯವಾಗಲಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.ಬಿಬಿಎಂಪಿಯ ಕಾಮಗಾರಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚಿನ ದಾಖಲೆ ಪಡೆಯುವುದಕ್ಕೆ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಅಗತ್ಯವಿರುವ ದಾಖಲೆಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ.

-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ.