ಸಾರಾಂಶ
ರಾಜು ಕಾಂಬಳೆ
ಬೆಂಗಳೂರು : ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ತಯಾರಿಸಿ ಮಾರಾಟಕ್ಕೆ ಸಿದ್ಧಗೊಂಡಿದ್ದ ಸುಮಾರು 30 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ಬಿಬಿಎಂಪಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪಿಒಪಿ ಮೂರ್ತಿ ತಯಾರಿಕಾ ಘಟಕ ಹಾಗೂ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ ಕೆಎಸ್‌ಪಿಸಿಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಸಿಕೊಂಡು ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರಲ್ಲೇ ಅಧಿಕ ಪಿಒಪಿ ಮೂರ್ತಿ:
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ನಡೆಯುತ್ತಿದೆ. ಜತೆಗೆ, ಮಹರಾಷ್ಟ್ರಸೇರಿದಂತೆ ಹೊರ ರಾಜ್ಯಗಳಿಂದಲೂ ಪಿಒಪಿ ಮೂರ್ತಿಗಳು ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿಯೇ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ. ಉಳಿದ 5 ಸಾವಿರ ಮೂರ್ತಿಗಳನ್ನು ಕೆಎಸ್‌ಪಿಸಿಬಿ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಒಪಿ ತಡೆಯುವಲ್ಲಿ ಅಧಿಕಾರಿಗಳು ವಿಫಲ:
ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಬರದಂತೆ ಕ್ರಮ ವಹಿಸಲು ಕೆಎಸ್‌ಪಿಸಿಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ತಿಂಗಳ ಮೊದಲೇ ಎಚ್ಚೆತ್ತುಕೊಳ್ಳದೇ, ಹಬ್ಬಕ್ಕೆ ಒಂದು ವಾರ ಇರುವಾಗ ಕಸರತ್ತು ಮಾಡುತ್ತಾರೆ. ಯಾವುದೇ ಮಳಿಗೆಗೆ ತೆರಳಿ ಗಣೇಶ ಮೂರ್ತಿ ಕೊಳ್ಳಲು ಮುಂದಾದಲ್ಲಿ ಪಿಒಪಿ ಬೇಕಾ? ಅಥವಾ ಮಣ್ಣಿನದು ಬೇಕಾ ಎಂದು ವ್ಯಾಪಾರಿಗಳು ಕೇಳುತ್ತಾರೆ ಎಂದು ಪರಿಸರವಾದಿಗಳು ದೂರಿದ್ದಾರೆ.
ಪಿಒಪಿ ಜಲಮೂಲದಲ್ಲಿ ವಿಸರ್ಜಿಸಿದರೆ ಕಠಿಣ ಶಿಕ್ಷೆ
ಪಿಒಪಿ ಮೂರ್ತಿ ಮಾರಾಟ ಮತ್ತು ಪ್ರತಿಷ್ಠಾಪನೆ, ಮಾರ್ಗಸೂಚಿ ಉಲ್ಲಂಘನೆ ಇತ್ಯಾದಿಗಳನ್ನು ಮಾಡುವಂತಿಲ್ಲ. ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆ, 1974ರ ಅಡಿಯಲ್ಲಿ ಪಿಒಪಿ ವಿಗ್ರಹಗಳ ಉತ್ಪಾದನಾ ಘಟಕ ಮುಚ್ಚುವ ಮತ್ತು ಮುಟ್ಟುಗೋಲು ಹಾಕುವುದು. ಪಿಒಪಿ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಿದರೆ ಗರಿಷ್ಠ ಆರು ವರ್ಷಗಳ ಕಾರಾಗೃಹ ಶಿಕ್ಷೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಪ್ರಕಾರ ಗರಿಷ್ಟ ಒಂದು ಲಕ್ಷ ರು. ದಂಡ ಹಾಗೂ ಐದು ವರ್ಷ ಕಾರಾಗೃಹ ಶಿಕ್ಷೆ ಇದೆ.ಜಪ್ತಿ ಮೂರ್ತಿಗಳ ವಿಲೇವಾರಿಗೆ ಗೊಂದಲ
ಜಪ್ತಿ ಮಾಡಲಾದ ಪಿಒಪಿ ಮೂರ್ತಿಗಳನ್ನು ಸಂಗ್ರಹಿಸಲು ಯಾವುದೇ ಕ್ರಷಿಂಗ್ ಘಟಕ ಸಿದ್ಧವಿಲ್ಲ. ಹೀಗಾಗಿ ಅವುಗಳನ್ನು ನಗರದ ವಿವಿಧ ಸುಸಜ್ಜಿತ ಸ್ಥಳದಲ್ಲಿ ಇರಿಸಲಾಗಿದ್ದು, ಯಾವಾಗ, ಎಲ್ಲಿ, ಹೇಗೆ ವಿಲೇವಾರಿ ಮಾಡಬೇಕೆಂಬುದರ ಬಗ್ಗೆ ಅಧಿಕಾರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿಲ್ಲ. ವಿಗ್ರಹ ವಿಸರ್ಜನೆಗೆ ಸಂಬಂಧಿಸಿದಂತೆ ಯಾವ ಇಲಾಖೆ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟ ಮಾಹಿತಿ ಇಲ್ಲ. ಆದರೆ ಪಿಒಪಿ ಮೂರ್ತಿಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪಿಒಪಿ ಮೂರ್ತಿಗಳ ಜಪ್ತಿ ವಿವರ
ಗುಡಿಮಾವು (ಕುಂಬಳಗೋಡು)25,000
ವಂಡರ್ ಲಾ (ಹೆಜ್ಜಾಲ)400
ಕೆಂಗೇರಿ800
ಮಾರಸಂದ್ರ451
ಹೆಮ್ಮಿಗೆಪುರ300
ಹುಬ್ಬಳ್ಳಿ400
ಬೆಳಗಾವಿ (ಗೋಕಾಕ್)200
ಯಾದಗಿರಿ (ಚಿತ್ತಾಪುರ ರಸ್ತೆ)150
ದಾವಣಗೆರೆ (ಸಂತೆ ಬೆನ್ನೂರು)150
ಬಳ್ಳಾರಿ240
ವಿವಿಧ ಜಿಲ್ಲೆಗಳಲ್ಲಿ2,300
ಒಟ್ಟು30,391ಕೆಎಸ್‌ಪಿಸಿಬಿ ಮಾರ್ಗಸೂಚಿಗಳು
-ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಿಒಪಿ ಮೂರ್ತಿಗಳ ತನಿಖೆ ಮಾಡಿ ಸುಪರ್ದಿಗೆ ತೆಗೆದುಕೊಳ್ಳುವುದು.
-ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಮೂರ್ತಿಗಳ ಪ್ರತಿಷ್ಠಾಪನೆ.
-ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧ.
-ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿ ವರ್ಧಕಗಳ ಬಳಕೆ ನಿಷೇಧ.
-ಹಸಿರು ಪಟಾಕಿ ಹೊರತುಪಡಿಸಿ ರಾಸಾಯನಿಕಯುಕ್ತ ಪಟಾಕಿ ಬಳಸುವಂತಿಲ್ಲ.
-ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ನಿಗದಿ ಪಡಿಸಿರುವ ಸ್ಥಳದಲ್ಲಿ ಗಣೇಶ ಮೂರ್ತಿ ವಿಸರ್ಜನೆ.
-ಮೊಬೈಲ್ ಟ್ಯಾಂಕ್ ಹಾಗೂ ಕಲ್ಯಾಣಿ ಪಕ್ಕದಲ್ಲಿ ಹಸಿಕಸ ಹಾಗೂ ಒಣಕಸ ಪ್ರತ್ಯೇಕಿಸಿ ಗಣೇಶ ಮೂರ್ತಿ ನೀರಿಗೆ ಬಿಡಬೇಕು.