ಸಾರಾಂಶ
ಕೇಂದ್ರ ಸರ್ಕಾರದ ಜೆಜೆಎಂ ಯೋಜನೆಯಡಿ ಪ್ರತಿ ಮನೆಗಳಿಗೆ ಶುದ್ಧ ಕುಡಿವ ನೀರಿನ ಯೋಜನೆಗೆ ₹150 ಕೋಟಿ ಮಂಜೂರಾಗಿದೆ. ಇದರೊಂದಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹354 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಈ ಕ್ಷೇತ್ರದ ವಿವಿದ ಕಾಮಗಾರಿಗಳಿಗೆ ₹3200 ಕೋಟಿ ಅನುದಾನ ತಂದಿದ್ದೇನೆ. ಈ ಸರ್ಕಾರ ಬಂದು ಹನ್ನೆರಡು ತಿಂಗಳು ಕಳೆದಿದ್ದರೂ ಹನ್ನೆರಡು ಪೈಸೆ ಅನುದಾನ ತರಲು ಸಾಧ್ಯವಾಗಿಲ್ಲಾ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.ಮಂಡಗದ್ದೆಯಲ್ಲಿ ನಿರ್ಮಿಸಲಾದ ಮಿನಿ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ, ಈ ಭಾಗದ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿದ್ದು ಹಲವಾರು ಕಾಮಗಾರಿ ಮಂಜೂರು ಮಾಡಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರ್ತಿಯಾದರೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಬಿಡುಗಡೆಯಾಗುತ್ತಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರದ ಜೆಜೆಎಂ ಯೋಜನೆಯಡಿ ಪ್ರತಿ ಮನೆಗಳಿಗೆ ಶುದ್ಧ ಕುಡಿವ ನೀರಿನ ಯೋಜನೆಗೆ ₹150 ಕೋಟಿ ಮಂಜೂರಾಗಿದೆ. ಇದರೊಂದಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹354 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ಅಂಗನವಾಡಿ ಕೇಂದ್ರಗಳು ಗರ್ಭೀಣಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಸೇರಿ ಚಟುವಟಿಕೆ ಕೇಂದ್ರವಾಗಿದೆ. ಮಹಿಳೆಯರು ಇದರಿಂದ ದೂರವಿರದೇ ಇದನ್ನು ಪೂರ್ಣ ಸದ್ಬಳಕೆ ಮಾಡಿಕೊಳ್ಳಬೇಕಿದೆ. ತಾಲೂಕಿನ 12 ಹನ್ನೆರಡು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಹಾಗೂ ವಿವೇಕ ಯೋಜನೆಯಡಿ 52 ಶಾಲಾ ಕೊಠಡಿ ನಿರ್ಮಿಸಲಾಗಿದ್ದು ಕೇವಲ ಬೆರಳೆಣಿಕೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಮಾತ್ರ ನಿರ್ಮಿಸಬೇಕಿದೆ ಎಂದು ಹೇಳಿದರು.
ಮಂಡಗದ್ದೆ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಸುನಿತಾ ನಾಯಕ್, ಸದಸ್ಯರಾದ ಸುನಿಲ್ ಶೆಟ್ಟಿ, ಸತೀಶ್, ಮೂರ್ತಿ ಭಟ್, ಪ್ರಸಾದ್ ಶೆಟ್ಟಿ, ಮಧುಶೆಟ್ಟಿ, ಅಕ್ಷರ ದಾಸೋಹದ ಅಧಿಕಾರಿ ಪ್ರವೀಣ್ ಇದ್ದರು.