ಕೃಷಿ ಭೂಮಿ ಸ್ವಾಧೀನ ವಿರುದ್ಧ ರೈತರ ಆಕ್ರೋಶ

| Published : Jul 09 2024, 12:45 AM IST

ಸಾರಾಂಶ

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು ಹತ್ತು, ಹನ್ನೆರಡು ಗ್ರಾಮಗಳ 2,823 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್‌ ಪಡೆಯಲಿ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಕೈಗಾರಿಕೆ ಪ್ರದೇಶ ವಿಸ್ತರಣೆ ನೆಪದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ಕ್ರಮವನ್ನು ಖಂಡಿಸಿ ಜು. 12 ರ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಎಚ್ಚರಿಸಿದರು. ತಾಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು ಹತ್ತು, ಹನ್ನೆರಡು ಗ್ರಾಮಗಳ 2,823 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ವಿರೋಧಿಸಿ ಜಂಗಮಕೋಟೆ ಕ್ರಾಸ್ ಬಳಿಯಿರುವ ಹೊಸಪೇಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಸೋಮವಾರ ಜಂಗಮಕೋಟೆ ಸುತ್ತಮುತ್ತಲ ಗ್ರಾಮಗಳ ರೈತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಒಗ್ಗಟ್ಟಾಗಿ ಹೋರಾಡಬೇಕು

ಅನ್ನ ನೀಡುವ ಕೃಷಿ ಭೂಮಿಯನ್ನು ಮಾರಿಕೊಂಡ ರೈತ ಬೇರೆ ಎಲ್ಲಿಯೂ ಬದುಕುವುದಕ್ಕೆ ಆಗಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಕೃಷಿ ಮಾಡುವ ಪ್ರತಿಯೊಬ್ಬರೂ ರೈತರೆ. ರೈತರಿಗೆ ಯಾವುದೇ ಜಾತಿಯಿಲ್ಲ, ಪಕ್ಷವಿಲ್ಲ ಪ್ರತಿಯೊಬ್ಬ ರೈತರೂ ಒಗ್ಗಟ್ಟಾಗಿ ಹೋರಾಟ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ನಮ್ಮ ಭೂಮಿ ನಮಗೆ ಉಳಿಯುತ್ತದೆ ಎಂದರು. ಸರ್ಕಾರ ಕೈಗಾರಿಕೆ ಪ್ರದೇಶಗಳನ್ನು ವಿಸ್ತರಿಸಬೇಕು ಎಂದಾದರೆ ಕೃಷಿಯೇತರ ಭೂಮಿಗಳಲ್ಲಿ ಕೈಗಾರಿಕಾ ಕೇಂದ್ರಗಳನ್ನು ತೆರೆಯಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಳ್ಳುವುದನ್ನು ನಾವು ಸಹಿಸುವುದಿಲ್ಲ ಎಂದರು.

ಸರ್ಕಾರ ದುಸ್ಸಾಹಸ ಕೈಬಿಡಲಿ

ರೈತರನ್ನು ಕೆಣಕಿದ ಯಾವುದೇ ಸರ್ಕಾರ ಉಳಿದುಕೊಂಡ ಇತಿಹಾಸವಿಲ್ಲ. ಹಾಗಾಗಿ ಇಂತಹ ದುಸ್ಸಾಹಸವನ್ನು ರಾಜ್ಯ ಸರ್ಕಾರ ಹಾಗು ಕೆಐಎಡಿಬಿ ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರೈತ ಮುಖಂಡರಾದ ಹೆಣ್ಣಂಗೂರು ಅಶ್ವತ್ ನಾರಾಯಣ, ಮಂಜುನಾಥ್ ಬಸವಾಪಟ್ಟಣ ಬೈರೇಗೌಡ, ಹಿತ್ತಲಹಳ್ಳಿ ರಮೇಶ್, ಸುಂಡ್ರಹಳ್ಳಿ ಬೀರಪ್ಪ, ಹಿರೇಬಲ್ಲ ಕೃಷ್ಣಪ್ಪ, ಸೇರಿದಂತೆ ಜಂಗಮಕೋಟೆ ಹೋಬಳಿಯ ನೂರಾರು ರೈತರು ಭಾಗವಹಿಸಿದ್ದರು.