ವಿಪತ್ತು ನಿರ್ವಹಣೆ ಯೋಜನೆಗೆ ₹3500 ಕೋಟಿ ವೆಚ್ಚ

| Published : Jun 21 2024, 02:00 AM IST / Updated: Jun 21 2024, 08:02 AM IST

ಸಾರಾಂಶ

ರಾಜ್ಯದಲ್ಲಿ ನೆರೆ, ಪ್ರವಾಹ ತಡೆಗೆ ವಿಶ್ವ ಬ್ಯಾಂಕ್‌ ಯೋಜನೆ ರೂಪಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರವೂ 1500 ಕೋಟಿ ಹೂಡಿಕೆ ಮಾಡಲಿದೆ.

 ಬೆಂಗಳೂರು: ರಾಜ್ಯದಲ್ಲಿ ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ವ್ಯವಸ್ಥೆ ಉನ್ನತೀಕರಣಕ್ಕಾಗಿ ವಿಶ್ವ ಬ್ಯಾಂಕ್‌ ಹೊಸ ತಂತ್ರಜ್ಞಾನ ಒಳಗೊಂಡ ಹೊಸ ಯೋಜನೆ ರೂಪಿಸಿದ್ದು, ಅದರ ಅನುಷ್ಠಾನಕ್ಕೆ ವಿಶ್ವಬ್ಯಾಂಕ್‌ 2 ಸಾವಿರ ಕೋಟಿ ರು. ಹಾಗೂ ರಾಜ್ಯ ಸರ್ಕಾರ 1,500 ಕೋಟಿ ರು. ಹೂಡಿಕೆ ಮಾಡಲಿದೆ. 2025 ಮಾರ್ಚ್‌ನಿಂದ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಶ್ವ ಬ್ಯಾಂಕ್‌ ಪ್ರತಿನಿಧಿಗಳೊಂದಿಗೆ ಗುರುವಾರ ವಿಕಾಸಸೌಧದಲ್ಲಿ ವರ್ಚ್ಯುವಲ್‌ ಸಭೆ ನಡೆಸಿದರು. ಈ ವೇಳೆ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ತಾವು ಸಿದ್ಧಪಡಿಸಿರುವ ವಿಪತ್ತು ನಿರ್ವಹಣೆ ಯೋಜನೆಯ ನೀಲಿನಕ್ಷೆಯ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ರಾಜ್ಯವು ಪ್ರತಿ ವರ್ಷ ಬರ ಅಥವಾ ನೆರೆ ಪರಿಸ್ಥಿತಿ ಎದುರಿಸುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ವಿಶ್ವ ಬ್ಯಾಂಕ್‌ ನೂತನ ತಂತ್ರಜ್ಞಾನವನ್ನೊಳಗೊಂಡ ಯೋಜನೆ ರೂಪಿಸಿದೆ. ಅದರಂತೆ ರಾಜ್ಯದ ವಿಪತ್ತು ನಿರ್ವಹಣೆಗಾಗಿ ವಿಶ್ವ ಬ್ಯಾಂಕ್‌ 2025ರ ಮಾರ್ಚ್‌ನಿಂದ ಮುಂದಿನ ಏಳು ವರ್ಷಗಳ ಅವಧಿಗೆ 2 ಸಾವಿರ ಕೋಟಿ ರು. ಹೂಡಿಕೆ ಮಾಡಲಾಗುವುದು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ 1,500 ಕೋಟಿ ರು. ವ್ಯಯಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರ ತನ್ನ ಕೆಲಸವನ್ನು ಈಗಾಗಲೇ ಆರಂಭಿಸಿದ್ದು, ತನ್ನ ಪಾಲಿನ ಹಣವನ್ನು ವಿನಿಯೋಗಿಸಿ ನೀರಿನ ಸಂಸ್ಕರಣೆ, ಕೆರೆಗಳ ಜಾಲ ನಿರ್ಮಾಣ ಕಾರ್ಯ ಮಾಡುತ್ತಿದೆ ಎಂದರು.

ನೀರಿನ ಆಡಿಟ್‌ಗೆ ಮನವಿ:

ಸಭೆಯಲ್ಲಿ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳಿಗೆ, ಕರ್ನಾಟಕದಲ್ಲಿ ಅಧ್ಯಯನ ಭಾಗವಾಗಿ ಮೊದಲ ನೀರಿನ ಲೆಕ್ಕಪರಿಶೋಧನೆ ನಡೆಯಬೇಕು ಎಂದು ಕೃಷ್ಣ ಬೈರೇಗೌಡ ಅವರು ವಿಶ್ವಬ್ಯಾಂಕ್ ಪ್ರತಿನಿಧಿಗಳನ್ನು ಮನವಿ ಮಾಡಿದರು.

ರಾಜ್ಯದಲ್ಲಿ ಶೇ. 20ರಷ್ಟು ನೀರು ಕುಡಿಯಲು ಬಳಕೆಯಾದರೆ, ಶೇ. 80ರಷ್ಟು ನೀರು ಕೃಷಿ ಸೇರಿದಂತೆ ಇನ್ನಿತರ ಕೆಲಸಕ್ಕೆ ಬಳಕೆಯಾಗುತ್ತಿದೆ. ಆ ಪೈಕಿ ಹೆಚ್ಚಿನ ನೀರು ಭತ್ತ ಮತ್ತು ಕಬ್ಬು ಬೆಳೆಗೆ ಬಳಸಲಾಗುತ್ತಿದೆ. ಆದರೆ, ಯಾವ ರೈತ ಎಷ್ಟು ನೀರು ಬಳಸುತ್ತಿದ್ದಾರೆ, ಯಾರಿಗೆ ನೀರು ಸಿಗುತ್ತಿಲ್ಲ, ಯಾವ ಭಾಗದಲ್ಲಿ ಹೆಚ್ಚಿನ ನೀರಿನ ಸಮಸ್ಯೆಯಿದೆ, ಅಂತರ್ಜಲ ಬಳಕೆ ಪ್ರಮಾಣ ಎಷ್ಟು ಎಂಬ ಬಗ್ಗೆ ಈವರೆಗೆ ಅಧ್ಯಯನ ಮಾಡಿಲ್ಲ. ಅಂತಹ ಅಧ್ಯಯನ ಅಥವಾ ಸಂಶೋಧನೆ ನಡೆದರೆ ಅದನ್ನಾಧರಿಸಿ ಕಾನೂನು ರೂಪಿಸಲು ನೆರವಾಗಲಿದೆ. 

ಹೀಗಾಗಿ ವಿಶ್ವ ಬ್ಯಾಂಕ್‌ ಕೈಗೊಳ್ಳುತ್ತಿರುವ ಹೊಸ ಯೋಜನೆಯಲ್ಲಿ ನೀರಿನ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಹೇಳಿದರು.ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್‌, ವಿಶ್ವ ಬ್ಯಾಂಕ್ ಯೋಜನೆ ಮುಖ್ಯಸ್ಥ ಕ್ರಿಸ್ಟೋಫರ್‌ ವೆಲ್ಸಿನ್‌, ವಿಪತ್ತು ಅಪಾಯದ ಹಣಕಾಸು ತಜ್ಞ ವಿಜಯಶೇಖರ ಕಳವಳಗೊಂಡ, ನಗರಾಭಿವೃದ್ಧಿ ತಜ್ಞೆ ಪೂನಮ್‌ ಅಹಲುವಾಲಿಯಾ, ವಿಪತ್ತು ನಿರ್ವಹಣೆ ತಜ್ಞ ಅನೂಪ್‌ ಕಾರಂತ್‌ ಇತರರಿದ್ದರು.ನೆರೆಗಿಂತ ಬರದ್ದೇ ಚಿಂತೆ

ರಾಜ್ಯದಲ್ಲಿ ನೆರೆ ಪರಿಸ್ಥಿತಿಗಿಂತ ಬರವೇ ದೊಡ್ಡ ಸಮಸ್ಯೆಯಾಗಿದೆ. ಬರ ಪರಿಸ್ಥಿತಿ ಎದುರಿಸುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಶಾಶ್ವತ ಮತ್ತು ಸುಸ್ಥಿರ ಪರಿಹಾರ ಹುಡಕಲು ಆಧುನಿಕ ತಂತ್ರಜ್ಞಾನ ಅಭಿವೃದ್ಧಿಗೆ ಅಧ್ಯಯನ ನಡೆಸಬೇಕಿದೆ ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.