ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಫೆ.೧೭ರಂದು ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ೫ ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ೫ ಗ್ಯಾರಂಟಿ ಅನುಷ್ಠಾನದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಪಡುಬಿದ್ರಿಯಲ್ಲಿ ಜೊತೆಯಾಗಿ ರ‍್ಯಾಲಿಯೊಂದಿಗೆ ಸಮಾವೇಶದ ಮೈದಾನದಕ್ಕೆ ತೆರಳುವ ಬಗ್ಗೆ ತಯಾರಿ ನಡೆದಿದೆ ಎಂದರು.ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇಪರ್ಡೆಯ ಕುರಿತು ಕೊನೆಗೂ ಮೌನ ಮುರಿದ ಗೋಪಾಲ ಪೂಜಾರಿ, ಸುಕುಮಾರ್ ಶೆಟ್ಟಿ ಅವರ ಪಕ್ಷ ಸೇರ್ಪಡೆಯ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಅವರು ಹೈಕಮಾಂಡ್ ಜೊತೆ ಮಾತನಾಡಿದ್ದಾರೆ. ಸ್ಥಳೀಯ ಕಾರ್ಯಕರ್ತರ ಬಳಿ ಸೇರ್ಪಡೆಯ ಬಗ್ಗೆ ಹೇಳಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ನನ್ನ ತಕರಾರಿಲ್ಲ, ಅವರಿಗೆ ಸ್ವಾಗತವಿದೆ. ಈಗಾಗಲೇ ಹೈಕಾಂಡ್‌ಗೆ ನನ್ನ ಈ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಸಮಿತಿ ಅಧ್ಯಕ್ಷ ಅರವಿಂದ ಪೂಜಾರಿ ಇದ್ದರು. ಜೆ.ಪಿ. ಹೆಗ್ಡೆಯವರ ಕಾರ್ಯ-ವೈಖರಿ ಖುಷಿ ಇದೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧೆಯ ಕುರಿತ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಗೋಪಾಲ ಪೂಜಾರಿ, ಶಿವಮೊಗ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹಲವರಿದ್ದಾರೆ. ಲೋಕಸಭಾ ಟಿಕೆಟ್ ಹಂಚಿಕೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಪಕ್ಷ ಯಾರನ್ನೇ ಆಯ್ಕೆ ಮಾಡಿದರೂ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ವಯಕ್ತಿಕವಾಗಿ ನನಗೂ ಕೆ. ಜಯಪ್ರಕಾಶ ಹೆಗ್ಡೆಯವರಿಗೂ ಉತ್ತಮ ಬಾಂಧವ್ಯವಿದೆ. ಜೆ.ಪಿ ಹೆಗ್ಡೆಯವರ ಕಾರ್ಯ ವೈಖರಿಯ ಬಗ್ಗೆ ನನಗೆ ಖುಷಿ ಇದೆ ಎಂದರು.ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಗೆ ಬಿಜೆಪಿ ಮತ್ತೆ ಅಡ್ಡಗಾಲು ಹಾಕಿದೆ. ಬಿಜೆಪಿಗೆ ಅಧಿಕಾರ ದಾಹ ಎಷ್ಟಿದೆ ಎನ್ನುವುದನ್ನು ಈ ಮೂಲಕ ಜಗಜ್ಜಾಹೀರಾಗಿದೆ ಎಂದು ಗೋಪಾಲ ಪೂಜಾರಿ ಟೀಕಿಸಿದರು.