ಹೈನುಗಾರರಿಗೆ 5 ರು. ಹೆಚ್ಚುವರಿ ಮೊತ್ತ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ: ದ.ಕ. ಹಾಲು ಒಕ್ಕೂಟ

| Published : Jul 23 2024, 12:38 AM IST

ಹೈನುಗಾರರಿಗೆ 5 ರು. ಹೆಚ್ಚುವರಿ ಮೊತ್ತ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ: ದ.ಕ. ಹಾಲು ಒಕ್ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೆ 5 ರು. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ, ಅಧಿಕ ಹಾಲು ಉತ್ಪಾದನೆಯನ್ನು ನಿರೀಕ್ಷಿಸಲು ಸಾಧ್ಯವಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡ ಹೈನುಗಾರರಿಗೆ ಕನಿಷ್ಠ 3 ರು. ಪ್ರೋತ್ಸಾಹಧನ ನೀಡಿದರೆ ಹೈನುಗಾರರಿಗೆ ಇನ್ನಷ್ಟು ಪ್ರಯೋಜನಕಾರಿಯಾಗಲು ಸಾಧ್ಯ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅವಿಭಜಿತ ದ.ಕ.ಜಿಲ್ಲೆಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಉತ್ಪಾದಕರಿಗೆ 5 ರು. ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದ್ದಾರೆ.

ಕುಲಶೇಖರದ ಹಾಲು ಒಕ್ಕೂಟ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ 36 ರು. ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ ಮೊತ್ತ 5 ರು. ಸೇರಿ ಒಟ್ಟು 41 ರು. ನೀಡಲಾಗುತ್ತಿದೆ. ಇದರಲ್ಲಿ 1 ರು. ಮೊತ್ತವನ್ನು ಸಂಘಕ್ಕೆ ಪ್ರೋತ್ಸಾಹಧನವಾಗಿ ಒಕ್ಕೂಟ ನೀಡುತ್ತಿದೆ. ಸರ್ಕಾರದ ಪ್ರೋತ್ಸಾಹಧನ ಏಪ್ರಿಲ್‌ನಿಂದ ಜೂನ್‌ ವರೆಗಿನ ಮೊತ್ತ ಬಿಡುಗಡೆಯಾಗಿದೆ. ಇಷ್ಟಾದರೂ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಬೇಕಾಗಿದೆ. ಅದಕ್ಕಾಗಿ ಮತ್ತೆ 5 ರು. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ, ಅಧಿಕ ಹಾಲು ಉತ್ಪಾದನೆಯನ್ನು ನಿರೀಕ್ಷಿಸಲು ಸಾಧ್ಯವಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡ ಹೈನುಗಾರರಿಗೆ ಕನಿಷ್ಠ 3 ರು. ಪ್ರೋತ್ಸಾಹಧನ ನೀಡಿದರೆ ಹೈನುಗಾರರಿಗೆ ಇನ್ನಷ್ಟು ಪ್ರಯೋಜನಕಾರಿಯಾಗಲು ಸಾಧ್ಯ ಎಂದರು.

ಪಶು ಆಹಾರಕ್ಕೆ 25 ರು. ಸಬ್ಸಿಡಿ:

ನಂದಿನಿ ಪಶು ಆಹಾರ ಚೀಲಕ್ಕೆ 1,350 ರು. ಬೆಲೆ ಇದೆ. ಹಾಲು ಒಕ್ಕೂಟ ಆಗಸ್ಟ್‌ 1ರಿಂದ ಹೈನುಗಾರರಿಗೆ ಪ್ರತಿ ಚೀಲಕ್ಕೆ 25 ರು. ಸಬ್ಸಿಡಿ ಮೊತ್ತ ನೀಡಲಿದೆ. ಇದರಿಂದಾಗಿ ಒಕ್ಕೂಟಕ್ಕೆ 30 ಲಕ್ಷ ರು. ಹೊರೆಯಾಗಲಿದೆ. ಇದಲ್ಲದೆ ಪಶು ಸಾಕಣೆ, ಮೇವು ಮುಂತಾದವುಗಳಿಗೆ ಸಬ್ಸಿಡಿ ಯೋಜನೆ ರೂಪಿಸಲಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದರು.

ಧರ್ಮಸ್ಥಳ ಯೋಜನೆಗೆ ಮನವಿ:

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೃಷಿ ಮತ್ತು ಹೈನುಗಾರಿಗೆ 20 ಕೋಟಿ ರು.ಗಳ ಯೋಜನೆ ರೂಪಿಸಿರುವುದಾಗಿ ತಿಳಿದುಬಂದಿದೆ. ಇದರಲ್ಲಿ ದ.ಕ.ಜಿಲ್ಲೆಯನ್ನೂ ಪರಿಗಣಿಸುವಂತೆ ಯೋಜನೆಯ ರೂವಾರಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಕೇಳಿಕೊಳ್ಳಲಾಗುವುದು ಎಂದರು.

ಪುತ್ತೂರಿನ ಕೊಟೆಚಾ ಹಾಲ್‌ ಬಳಿ 15 ಎಕರೆ ಜಾಗವನ್ನು ಒಕ್ಕೂಟದ ಚಟುವಟಿಕೆಗೆ ಕಾದಿರಿಸಲಾಗುತ್ತಿದೆ. ಇದರಲ್ಲಿ ಹಾಲಿನ ಮಿನಿ ಡೇರಿ, ಗೋದಾಮು ನಿರ್ಮಾಣ, ಹಸಿರು ಹುಲ್ಲು ಬೆಳೆಸಲು ಅವಕಾಶ ಇದೆ. ಕೊಯ್ಲ ಪಶು ಸಂಗೋಪನಾ ಕ್ಷೇತ್ರದಲ್ಲಿ 20 ಎಕರೆಯನ್ನು ಹಾಲು ಒಕ್ಕೂಟಕ್ಕೆ ಹಸಿರು ಹುಲ್ಲು ಬೆಳೆಸಲು ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಪ್ರಸಕ್ತ ಅಲ್ಲಿ ಅಕೇಶಿಯಾ ಮರಗಳಿದ್ದು, ಅದನ್ನು ಸಾಮಾಜಿಕ ಅರಣ್ಯ ಇಲಾಖೆ ತೆರವುಗೊಳಿಸಿದ ಬಳಿಕ ಹಸ್ತಾಂತರ ನಡೆಯಲಿದೆ ಎಂದರು.

ಸೈಲೇಜ್‌ಗೆ ಪ್ರೋತ್ಸಾಹ:

ಮೆಕ್ಕೆ ಜೋಳವನ್ನು ಸಂಸ್ಕರಿಸಿ ಮೇವಿನ ಹುಲ್ಲು ಸೈಲೇಜ್‌(ರಸ ಮೇವು)ಆಗಿ ಪರಿವರ್ತಿಸಲು ಹೈನುಗಾರರಿಗೆ ಉತ್ತೇಜನ ನೀಡಲಾಗುತ್ತಿದೆ. ಹಾಸನ, ಮಂಡ್ಯಗಳಲ್ಲಿ ಹೈನುಗಾರರೇ ರಸ ಮೇವು ತಯಾರಿಸುತ್ತಾರೆ, ಹಾಗಾಗಿ ಇಲ್ಲಿ ಕೂಡ ಹೈನುಗಾರರಿಗೆ ಸುಲಭವಾಗಿ ರಸಮೇವು ತಯಾರಿಸಲು ಮಾಹಿತಿ ನೀಡಲಾಗುತ್ತಿದೆ ಎಂದರು.

ನಿಯಮ ಸಡಿಲಿಕೆಗೆ ಆಗ್ರಹ:

ಕೇಂದ್ರ ಸರ್ಕಾರದ ಗೋವರ್ಧನ ಯೋಜನೆಯಡಿ 200 ರಾಸುಗಳನ್ನು ಸಾಕಲು 2 ಕೋಟಿ ರು.ಗಳ ಮೊತ್ತ ನೀಡಲಾಗುತ್ತದೆ. ಇದರಲ್ಲಿ 1 ಕೋಟಿ ರು.ವನ್ನು ಹೈನುಗಾರರೇ ಭರಿಸಬೇಕು. ಆದರೆ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಕರಾವಳಿಯಲ್ಲಿ ಹೈನುಗಾರಿಕೆ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಆದ್ದರಿಂದ ಇದರ ನಿಯಮ ಸಡಿಲಿಸಿ 50 ಲಕ್ಷಕ್ಕೆ ಇಳಿಕೆ ಮಾಡಿದರೆ 25 ಲಕ್ಷ ರು. ಮೊತ್ತ ಪಾವತಿಸಲು ಹೈನುಗಾರರು ಸಿದ್ಧರಿದ್ದಾರೆ ಎಂದರು.

ಉಪಾಧ್ಯಕ್ಷ ಎಸ್‌.ಬಿ.ಜಯರಾಮ ರೈ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನಾರಾಯಣ ಪ್ರಕಾಶ್‌, ಪದ್ಮನಾಭ, ಸುಧಾಕರ ರೈ, ಸದಾಶಿವ್‌, ನರಸಿಂಹ ಕಾಮತ್‌, ಕಮಲಾಕ್ಷ, ಸವಿತಾ ಎನ್‌.ಶೆಟ್ಟಿ, ಸ್ಮಿತಾ ಶೆಟ್ಟಿ, ಸುಭದ್ರಾ ರಾವ್‌, ವ್ಯವಸ್ಥಾಪಕ ನಿರ್ದೇಶಕ ವಿವೇಕ್‌, ಡೇರಿ ಮಾರುಕಟ್ಟೆ ಮುಖ್ಯಸ್ಥ ರವಿರಾಜ್‌ ಉಡುಪ ಇದ್ದರು. ಬಾಕ್ಸ್‌----

8.29 ಕೋಟಿ ರು. ನಿವ್ವಳ ಲಾಭ

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕಳೆದ ಸಾಲಿನಲ್ಲಿ 1,108.089 ಕೋಟಿ ರು. ವಹಿವಾಟು ನಡೆಸಿದ್ದು, 8.29 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ಒಕ್ಕೂಟದ ಆಡಳಿತಕ್ಕೆ ಶೇ.15 ಹಾಗೂ ಉಳಿದ ಶೇ.85 ಮೊತ್ತವನ್ನು ಹೈನುಗಾರರಿಗೆ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದರು.

ಹೊರ ಜಿಲ್ಲೆಗಳಿಂದ 1,09,775 ಲೀಟರ್‌ ಹಾಲು ಖರೀದಿಸಲಾಗುತ್ತಿದೆ. ಇಲ್ಲಿ ದಿನವಹಿ 3,91,933 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, 3,93,655 ಲೀಟರ್‌ ಹಾಲು ಮಾರಾಟವಾಗುತ್ತಿದೆ. ಪ್ರಸ್ತುತ ಮಂಗಳೂರಿನಲ್ಲಿ 3.5 ಲಕ್ಷ ಲೀಟರ್‌ ಹಾಗೂ ಉಡುಪಿಯ ಉಪ್ಪೂರಿನಲ್ಲಿ 2.5 ಲಕ್ಷ ಲೀಟರ್‌ ಸಾಮರ್ಥ್ಯದ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಒಕ್ಕೂಟ 4 ಶ್ರೇಣಿಯ ಹಾಲು ಮತ್ತು 20 ವಿಧದ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.ಒಟ್ಟು 1,789 ಡೀಲರ್‌ಗಳಿದ್ದು, 743 ಹಾಲು ಉತ್ಪಾದಕರ ಸಂಘಗಳಿವೆ ಎಂದರು.