ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಕ್ರೀಡಾಭಿವೃದ್ಧಿಗೆ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ೫೫ ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕೊಳ್ಳೇಗಾಲದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣದ ಅಭಿವೃದ್ಧಿ ಯಳಂದೂರು ತಾಲೂಕಿಗೆ ನೂತನ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಇತರೆ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಲು ಪ್ರಸ್ತಾವನೆ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಯಳಂದೂರಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಸೂಕ್ತ ಸ್ಥಳವನ್ನು ಹುಡುಕುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಗ್ರಾಮೀಣ ಮಕ್ಕಳು ಕ್ರೀಡಾಕೂಟದಲ್ಲಿ ಹೆಚ್ಚು ಭಾಗವಹಿಸಬೇಕು. ಇಂದು ದೇಸಿ ಕ್ರೀಡೆಗಳಾದ ಕಬಡ್ಡಿ ಹಾಗೂ ಖೋಖೋ ಕ್ರೀಡೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ್ದು ಭಾರತ ಕ್ರೀಡಾಪಟುಗಳು ಇದನ್ನು ಜಯಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕುರುಬೂರಿನ ಶಾಲೆಯ ಶಿಕ್ಷಕರು ಇಲ್ಲಿನ ಮಕ್ಕಳಿಗೆ ಖೋಖೋ ಹೇಳಿಕೊಡುವ ಮೂಲಕ ದೇಶದಲ್ಲೇ ಸದ್ದು ಮಾಡಿದ್ದಾರೆ. ಚೈತ್ರಾ ಎಂಬ ಪ್ರತಿಭೆ ಇದಕ್ಕೆ ಸಾಕ್ಷಿಯಾಗಿ ನಿಂತಿದ್ದು ಇಂತಹ ಅನೇಕ ಪ್ರತಿಭೆಗಳನ್ನು ಈ ಶಾಲೆಯ ಮೂಲಕ ನೀಡಿದ್ದಾರೆ. ಇಂತಹ ತರಬೇತುದಾರರ ಸಂಖ್ಯೆ ಹೆಚ್ಚಬೇಕು. ಗ್ರಾಮೀಣ ಮಕ್ಕಳು ಕ್ರೀಡೆಗೆ ಹೆಚ್ಚು ಆಸಕ್ತಿ ನೀಡಬೇಕು. ಇದರಲ್ಲಿ ಮನಸ್ಸು, ದೇಹ ಎರಡೂ ಸದೃಢವಾಗುತ್ತದೆ ಎಂದರು. ನಾನು ಕೂಡ ಖೋಖೋ, ಬಾಸ್ಕೆಟ್ ಬಾಲ್ ಆಟ ಆಡುತ್ತಿದ್ದೆ ಎಂದು ನೆನಪಿಸಿಕೊಂಡರು.ಪಪಂ ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ. ರವಿ, ಮಂಜು ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್‌ಬೇಗ್ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಸದಸ್ಯ ಗುಂಬಳ್ಳಿ ರಾಜಣ್ಣ, ಚಾಮುಲ್ ನಿರ್ದೇಶಕ ರೇವಣ್ಣ, ಪಿಎಸ್‌ಐ ಕರಿಬಸಪ್ಪ, ದೈಹಿಕ ಪರಿವೀಕ್ಷಕ ಶಾಂತರಾಜು, ಪ್ರಾಂಶುಪಾಲ ಎಲ್. ಮಹೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್ ಸೇರಿದಂತೆ ಅನೇಕರು ಇದ್ದರು.