ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಸಕ್ತ ಸಾಲಿನಲ್ಲಿ ವನ್ಯಜೀವಿ-ಮಾನವ ಸಂಘರ್ಷದಿಂದ 55 ಜನ ಸಾವಿಗೀಡಾಗಿದ್ದು, ಆನೆ ದಾಳಿಗೆ ಅತಿ ಹೆಚ್ಚು 39 ಜನ ಬಲಿಯಾಗಿದ್ದಾರೆ. ಆನೆ ದಾಳಿ ನಿಯಂತ್ರಿಸಲು 186 ಕಿ.ಮೀ ಉದ್ದದಷ್ಟು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ನಿಯಮ 330ರ ಮೇರೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆನೆಗಳು ಕಾಡಿನಿಂದ ಹೊರ ಬರುವುದನ್ನು ತಡೆಯಲು 640 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಪ್ರಸ್ತಾವನೆ ಇತ್ತು. ಪರಿಷ್ಕರಣೆಗೊಂಡು 730 ಕಿ.ಮೀಗೆ ಏರಿದೆ. ಅದರಲ್ಲಿ 311 ಕಿ.ಮೀ ಬ್ಯಾರಿಕೇಡ್ ಹಾಕಲಾಗಿದೆ. ಉಳಿದ ಕಾಮಗಾರಿಗೆ ಅಯವ್ಯಯದಲ್ಲಿ 100 ಕೋಟಿ ರೂ. ಮಾತ್ರ ಇತ್ತು. ಆ ಮೊತ್ತ ಸಾಲುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ.ಯನ್ನು ಮುಖ್ಯಮಂತ್ರಿಯವರು ಮಂಜೂರು ಮಾಡಿದ್ದಾರೆ. ಹಾಲಿ 186 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಉಳಿದ ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ 500 ಕೋಟಿ ರೂ.ಯನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ. ಆನೆಗಳು ನಾಡಿಗೆ ಬರುವುದನ್ನು ತಪ್ಪಿಸಲು ಆನೆ ಕ್ಯಾಂಪ್ ನಿರ್ಮಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕಾಡಿನಲ್ಲಿ ಸಮರ್ಪಕ ಆಹಾರ ಮತ್ತು ನೀರಿನ ಲಭ್ಯತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂದಕ ನಿರ್ಮಾಣ, ಸೋಲಾರ್ ಫೆನ್ಸಿಂಗ್ ಸೇರಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು, ವನ್ಯಜೀವಿ ಸಂಘರ್ಷ ತಪ್ಪಿಸಲು ತಜ್ಞರ ಸಮಿತಿಯಿಂದ ಪರಿಶೀಲನೆಗೂ ಸೂಚಿಸಲಾಗಿದೆ ಎಂದು ಸಚಿವ ಖಂಡ್ರೆ ಮಾಹಿತಿ ನೀಡಿದರು.ರಾಮನಗರ ಪ್ರಾದೇಶಿಕ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವಿಭಾಗಗಳಲ್ಲಿ ಕಾಡಾನೆ ದಾಳಿಯಿಂದ ಜೀವಹಾನಿ ಮತ್ತು ಬೆಳೆಹಾನಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರು ಜೀವ ಕೈಯಲ್ಲಿಡಿದುಕೊಂಡು ವ್ಯವಸಾಯ ಮಾಡುವಂತಹ ಪರಿಸ್ಥಿತಿ ಇದೆ ಎಂದು ಪರಿಷತ್ ಸದಸ್ಯ ಎಸ್.ರವಿ ಅವರು ಸಚಿವರ ಗಮನ ಸೆಳೆದರು.
ರಾಜ್ಯದಲ್ಲಿ 6,385 ಆನೆಗಳು:ಕರ್ನಾಟಕದಲ್ಲಿ ಒಟ್ಟು 6,385 ಆನೆಗಳಿವೆ. ಇದು ದೇಶದಲ್ಲೇ ಅತ್ಯಧಿಕ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.