ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ನಾಮಫಲಕಗಳ ಅಳವಡಿಸಿ

| Published : Mar 07 2024, 01:47 AM IST

ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ನಾಮಫಲಕಗಳ ಅಳವಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಜಿಲ್ಲೆಯ್ಲಲಿ ಶೇ.60 ರಷ್ಟು ಕಡ್ಡಾಯ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರ ನೇತೃತ್ವದಲ್ಲಿ ನಗರದ ಮೈಲಾಪೂರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ್ಲಲಿ ಶೇ.60ರಷ್ಟು ಕಡ್ಡಾಯ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರ ನೇತೃತ್ವದಲ್ಲಿ ನಗರದ ಮೈಲಾಪೂರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕೆಂಬ ಹಕ್ಕೊತ್ತಾಯ ಇಟ್ಟುಕೊಂಡು ಕರವೇ ನಿರ್ಣಾಯಕ ಚಳವಳಿ ಕೈಗೊಂಡಿದ್ದು, ತಮಗೆಲ್ಲ ತಿಳಿದ ವಿಷಯ. ಕಳೆದ ವರ್ಷ ಡಿ.27ರಂದು ಬೆಂಗಳೂರಿನಲ್ಲಿ ಕರವೇ ಇತಿಹಾಸವನ್ನೇ ಸೃಷ್ಟಿಸಿತು ಎಂದರು.

ಕನ್ನಡ ನಮಗೇಕೆ ಬೇಕು ಎಂಬ ದರ್ಪದಿಂದ ಬಲಿತು ಕೊಬ್ಬಿದ್ದ ಪರಭಾಷಿಕ ಉದ್ಯಮಿಗಳಿಗೆ ಪಾಠ ಕಲಿಸುವ ಕೆಲಸವನ್ನು ನಾವು ಯಶಸ್ವಿಯಾಗಿ ಮಾಡಿದೇವು. ಅಂದು ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೇತರ ನಾಮಫಲಕಗಳು ಧರೆಗುರುಳಿದವು. ನಮ್ಮ ಚಳವಳಿಗೆ ರಾಜ್ಯದ ಜನತೆ ತುಂಬು ಮನಸಿನಿಂದ ಬೆಂಬಲಿಸಿತು. ಕನ್ನಡ ನಾಮಫಲಕ ಬೇಕು ಎಂದು ದಶಕಗಳಿಂದ ಹಂಬಲಿಸುತ್ತಿದ್ದ ಮನಸುಗಳಿಗೆ ಸಮಾಧಾನ ತಂದ ಬಹುದೊಡ್ಡ ಹೋರಾಟವಿದು ಎಂದು ತಿಳಿಸಿದರು.

ನಮ್ಮ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತು. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿರುವುದರಿಂದ ಅದು ಕಾನೂನಾಗಿ ಕೂಡ ಜಾರಿಯಾಗಿದೆ. ಇದು ಕಾನೂನಾಗಿ ರೂಪುಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ, ಕಾರ್ಯಕರ್ತರ ತ್ಯಾಗ, ಛಲ ಬಿಡದ ಹೋರಾಟ ಕಾರಣ. ಡಿ.27ರ ಐತಿಹಾಸಿಕ ಹೋರಾಟದ ನಂತರ ನಮ್ಮ ಮೇಲೆ ಹತ್ತಾರು ಪ್ರಕರಣ ಹೂಡಿ ಜೈಲಿಗೆ ಕಳುಹಿಸಲಾಯಿತು. ಆದರೆ, ಜೈಲು, ಕೋರ್ಟ್ ಕೇಸು ಇತ್ಯಾದಿಗಳಿಗೆ ಕರವೇ ಎಂದೂ ಅಂಜುವುದಿಲ್ಲ. ಇಷ್ಟೆಲ್ಲ ಹೋರಾಟದ ನಂತರ ಈ ಕಾನೂನು ಪರಿಪೂರ್ಣವಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ರಾಜ್ಯದ ಕೊನೆಯ ನಾಮಫಲಕ ಕನ್ನಡೀಕರಣಗೊಳ್ಳುವವರೆಗೆ ಕನ್ನಡದಲ್ಲಿ ನಾಮಫಲಕ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಾರಿದರು.

ಕರ್ನಾಟಕ ಸರ್ಕಾರ ಈಗ ಜಾರಿಗೆ ತಂದಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಪ್ರಕಾರ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕವೇ ಶೇ.60ರಷ್ಟು ಭಾಗ ಇರಬೇಕು. ಕನ್ನಡವೇ ಮೊದಲ ಸ್ಥಾನದಲ್ಲಿರಬೇಕು. ಜಾಹೀರಾತು ಫಲಕಗಳು ಕೂಡ ಕನ್ನಡದಲ್ಲಿರಬೇಕು. ಇದನ್ನು ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಪಾಲಿಸುವುದು ಕಡ್ಡಾಯವಾಗಿದೆಂದು ನುಡಿದರು.

ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿಬಿಡಲಿ. ಕನ್ನಡಿಗರು ಯಾರ ಅಡಿಯಾಳುಗಳಲ್ಲ. ನಮ್ಮ ನೆಲದಲ್ಲಿ ನಾವು ಸಾರ್ವಭೌಮರು. ಇದನ್ನು ಎಲ್ಲರಿಗೂ ನೆನಪಿಸುವ ಕಾಲವಿದು. ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ಕನ್ನಡಿಗನ ಹಕ್ಕು. ಯಾರಾದರೂ ನಿರಾಕರಿಸಿದರೆ ಅದನ್ನು ಸಹಿಸಿಕೊಂಡಿರಬೇಡಿ. ಕನ್ನಡದಲ್ಲಿ ನಾಮಫಲಕ ಇಲ್ಲದಿದ್ದರೆ ಪ್ರಶ್ನಿಸುವುದನ್ನು ಮರೆಯಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.

ಈ ಪ್ರತಿಭಟನಾ ರ‍್ಯಾಲಿಯಲ್ಲಿ ಆಂಗ್ಲ ಭಾಷೆಯ ನಾಮಫಲಕಗಳನ್ನು ಕಿತ್ತು ಎಸೆದು ಹಾಕುವಾಗ ಪೊಲೀಸ್ ಅಧಿಕಾರಿಗಳು 30ಕ್ಕೂ ಹೆಚ್ಚು ಕರವೇ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು.

ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಚೌಡಯ್ಯ ಬಾವೂರ, ಅಂಬ್ರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ವಿಶ್ವರಾಜ ಹೊನಗೇರಾ, ಅಬ್ದುಲ್ ಚಿಗಾನೂರ, ವೆಂಕಟೇಶ ಬೈರಿಮಡ್ಡಿ, ಶಿವಲಿಂಗ ಸಾಹುಕಾರ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಹಾದಿಮನಿ, ಅರ್ಜುನ ಪವಾರ, ಸಿದ್ದಪ್ಪ ಕೂಯಿಲೂರ, ಭಿಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಯಮನಯ್ಯ ಗುತ್ತೇದಾರ, ವೆಂಕಟೇಶ ಮಿಲ್ಟ್ರಿ ಸಲೀಂ ಪಾಶಾ ಯರಗೋಳ, ಪಪ್ಪುಗೌಡ ಚಿನ್ನಾಕರ್, ಶರಣು ಸಾಹುಕಾರ ವಡ್ನಳ್ಳಿ, ಸುರೇಶ ಬೆಳಗುಂದಿ ಇತರರಿದ್ದರು.