ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 6500 ಕೋಟಿ ರುಪಾಯಿ ಅನುದಾನ

| Published : Nov 04 2023, 12:31 AM IST

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 6500 ಕೋಟಿ ರುಪಾಯಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಪ್ರಸ್ತುತ ಸುಮಾರು 6500 ಕೋಟಿ ರು. ಅನುದಾನ ಲಭ್ಯವಿದ್ದು, ಅರ್ಹ ಫಲಾನುಭವಿಗಳ ಬದುಕು ಗಟ್ಟಿಗೊಳ್ಳಲು ಹಾಗೂ ಅವರು ಸ್ವಾಭಿಮಾನದಿಂದ ಜೀವನ ಸಾಗಿಸುವಂತಾಗಲು ಸದ್ಬಳಕೆಯಾಗಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಕಾರ್ಮಿಕ ಸಂಘಟನೆಗಳು, ಉದ್ಯಮಿಗಳೊಂದಿಗೆ ನಡೆದ ಸಮಾಲೋಚನೆ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಕನ್ನಡಪ್ರಭ ವಾರ್ತೆ, ಚಿತ್ರದುರ್ಗ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಪ್ರಸ್ತುತ ಸುಮಾರು 6500 ಕೋಟಿ ರು. ಅನುದಾನ ಲಭ್ಯವಿದ್ದು, ಅರ್ಹ ಫಲಾನುಭವಿಗಳ ಬದುಕು ಗಟ್ಟಿಗೊಳ್ಳಲು ಹಾಗೂ ಅವರು ಸ್ವಾಭಿಮಾನದಿಂದ ಜೀವನ ಸಾಗಿಸುವಂತಾಗಲು ಸದ್ಬಳಕೆಯಾಗಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಕಾರ್ಮಿಕ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯಮದಾರರೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರಲ್ಲದವರೂ ಕೂಡ ಸೌಲಭ್ಯದ ಆಸೆಗಾಗಿ ಬೋಗಸ್ ನೋಂದಣಿ ಮಾಡಿಸಿರುವ ಅಂಶ ಎಲ್ಲರಿಗೂ ತಿಳಿದಿದೆ. ಇಂತಹ ಬೋಗಸ್ ಕಾರ್ಡ್‍ಗಳನ್ನು ಪರಿಶೀಲಿಸಿ ರದ್ದುಪಡಿಸಬೇಕೆಂ ಬುದು ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳ ಒಕ್ಕೊರಲ ಮನವಿಯಾಗಿದೆ. ಇಂತಹ ಬೋಗಸ್ ನೋದಣಿಯನ್ನು ತಡೆಯುವ ಉದ್ದೇಶದಿಂದಲೇ ಜಿಯೋ ಮ್ಯಾಪಿಂಗ್ ತಂತ್ರಾಂಶವನ್ನು ರೂಪಿಸುತ್ತಿದ್ದು, ಮೂರ್ನಾಲ್ಕು ತಿಂಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗಾಗಿ ಸೂಕ್ತ ಕಾನೂನು ರೂಪಿಸಿ ಸಾಮಾಜಿಕ ಭದ್ರತೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದಿಂದ 43 ವಿವಿಧ ಕ್ಷೇತ್ರಗಳು ಹಾಗೂ ಕೇಂದ್ರದ 397 ಕ್ಷೇತ್ರಗಳನ್ನು ಅಸಂಘಟಿತ ಕಾರ್ಮಿಕ ವಲಯವೆಂದು ಪರಿಗಣಿಸಲಾಗಿದೆ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕ ವಲಯ ವ್ಯಾಪ್ತಿಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಕ್ರಮ ವಹಿಸಲಾಗಿದೆ. ಆಟೋ ಚಾಲಕರು, ವಾಣಿಜ್ಯ ವಾಹನಗಳ ಚಾಲಕರು, ಗ್ಯಾರೇಜ್‍ಗಳ ಕಾರ್ಮಿಕರು ಸೇರಿದಂತೆ ರಾಜ್ಯದ ಸುಮಾರು 40 ರಿಂದ 50 ಲಕ್ಷ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಸಿನಿಮಾ ಮಂದಿರಗಳಲ್ಲಿನ ಕಾರ್ಮಿಕರಿಗೆ ಪ್ರತಿ ಟಿಕೆಟ್‍ಗೆ ಇಂತಿಷ್ಟು ಎಂದು ಸೆಸ್ ಸಂಗ್ರಹಿಸಿ, ಈ ಮೊತ್ತಕ್ಕೆ ಸರ್ಕಾರದ ಹಣವನ್ನೂ ಸೇರಿಸಿ, ಸಿನಿಮಾ ಮಂದಿರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲಾಗುವುದು, ಆಸ್ತಿ ತೆರಿಗೆಯಲ್ಲೂ ಶೇ.6 ರಷ್ಟು ಕಾರ್ಮಿಕರ ಕಲ್ಯಾಣಕ್ಕೆ ಸೆಸ್ ಸಂಗ್ರ ಹಿಸಲು ಯತ್ನಿಸಲಾಗುತ್ತಿದೆ. ಹೋಟೆಲ್ ಕಾರ್ಮಿಕರು, ಹಮಾಲರು ಮುಂತಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ದೊರಕಿಸಲು ಸೂಕ್ತ ಕಾನೂನು ರೂಪಿಸಲಾಗುವುದು ಎಂದು ಸಚಿವರು ಹೇಳಿದರು. ಕಟ್ಟಡ ಕಾಮಿಕರ ಸಂಘದ ಸುರೇಶ್ ಬಾಬು ಮಾತನಾಡಿ, ಸಿನಿಮಾ ಚಿತ್ರಮಂದಿರ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲ. ಅದೇ ರೀತಿ ಎಪಿಎಂಸಿ ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೂಡ ಸೇವಾ ಭದ್ರತೆ ಇಲ್ಲ. ಸೂಕ್ತ ಕಾನೂನು ತಿದ್ದುಪಡಿಗೊಳಿಸಿ ಸೇವಾಭದ್ರತೆ ಕಲ್ಪಿಸುವಂತೆ ಹಾಗೂ ಸ್ಥಗಿತಗೊಂಡಿರುವ ಸ್ಕಾಲರ್‍ಶಿಪ್ ಬಿಡುಗಡೆ ಮಾಡುವಂತೆ ಕೋರಿದರು. ಗೌಸ್ ಪೀರ್ ಮಾತನಾಡಿ, ಕಟ್ಟಡ ಕಾರ್ಮಿಕರ ವಿವಾಹ ಧನ ಸಹಾಯ ಮೊತ್ತ ಸಮರ್ಪಕವಾಗಿ ಬಿಡುಗಡೆ ಆಗುತ್ತಿಲ್ಲ. ಲ್ಯಾಪ್‍ಟಾಪ್ ನೀಡುವ ಯೋಜನೆಯಡಿ 3500 ಅರ್ಜಿಗಳು ಸ್ವೀಕೃತಗೊಂಡಿದ್ದು, ಕೇವಲ 150 ಜನರಿಗೆ ಮಾತ್ರ ಲ್ಯಾಪ್‍ಟಾಪ್ ನೀಡಲಾಗಿದೆ. ಆದರೆ ಲ್ಯಾಪ್‍ಟಾಪ್ ಯೋಜನೆಯ ಬದಲು ಕಾರ್ಮಿಕರ ಹಿತಕ್ಕಾಗಿ ಬೇರೆ ಯೋಜನೆ ರೂಪಿಸಬಹುದಿತ್ತು. ಕಾರ್ಮಿಕರ ಆರೋಗ್ಯ ಚಿಕಿತ್ಸೆಗಾಗಿ ಜಿಲ್ಲೆಗೊಬ್ಬರು ಡಾಕ್ಟರ್ ನೇಮಿಸಬೇಕು, ಬೋಗಸ್ ಕಾರ್ಡ್‍ಗಳನ್ನು ಗುರುತಿಸಿ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಭಾರತಿ, ಕಾರ್ಮಿಕ ಇಲಾಖೆ ವಲಯದ ಹೆಚ್ಚುವರಿ ಆಯುಕ್ತ ಮಂಜುನಾಥ್, ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸೇರಿದಂತೆ ಇತರ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.

---------------------------ವಿದ್ಯಾರ್ಥಿ ವೇತನಕ್ಕಾಗಿ 13 ಲಕ್ಷ ಅರ್ಜಿ: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಸೌಲಭ್ಯದಡಿ ವಿದ್ಯಾರ್ಥಿ ವೇತನಕ್ಕಾಗಿಯೇ 13 ಲಕ್ಷ ಅರ್ಜಿಗಳು ಬಂದಿವೆ ಎಂದು ಸಚಿವ ಲಾಡ್‌ ಹೇಳಿದರು. ಮದುವೆಯಾಗಿ 7 ವರ್ಷವಾಗಿ ದ್ದಂತಹವರೂ ಕೂಡ ಮದುವೆ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ರೀತಿ ದುರುಪಯೋಗದ ಅನೇಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಮಕ್ಕಳಿಗಾಗಿ ಅಂಗನವಾಡಿ, ಶಾಲೆಗಳನ್ನು ಕಟ್ಟಿ ಎಂದು ಬೇಡಿಕೆ ಸಲ್ಲಿಸುತ್ತಾರೆ. ಆದರೆ ಇದು ಕಾರ್ಮಿಕ ಇಲಾಖೆಯ ಕೆಲಸ ಅಲ್ಲ. ಇದಕ್ಕಾಗಿ ಮಂಡಳಿಯ ಹಣ ಖರ್ಚು ಮಾಡುವುದು ಸರಿಯಲ್ಲ ಎಂದರು.