ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪೂರ್ವ ಮುಂಗಾರು ಜಿಲ್ಲೆಯಲ್ಲಿ ಕಳೆದ ೨೪ ಗಂಟೆಯಲ್ಲಿ ೩೧.೭ ಮಿ.ಮೀ. ಮಳೆ ಸುರಿದಿರುವ ಬಗ್ಗೆ ದಾಖಲಾಗಿದ್ದರೆ, ಕಳೆದೊಂದು ವಾರದಿಂದ ೬೬.೧ ಮಿ.ಮೀ. ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ೨೪ ಗಂಟೆಗಳಲ್ಲಿ ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ೭೨.೯ ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ ೧೨೮.೮ ಮಿ.ಮೀ. ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ನಾಗಮಂಗಲ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದ್ದು, ೨೪ ಗಂಟೆಗಳಲ್ಲಿ ೫.೧ ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ ೩೪ ಮಿ.ಮೀ.ನಷ್ಟು ಮಳೆಯಾಗಿದೆ. ಸೋಮವಾರ ರಾತ್ರಿ ಜಿಲ್ಲೆಯ ಎಲ್ಲೆಡೆ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದರೆ ನಾಗಮಂಗಲ ತಾಲೂಕಿನಲ್ಲಿ ಮಾತ್ರ ೬.೬ ಮಿ.ಮೀ. ವಾಡಿಕೆ ಮಳೆಗೆ ೫.೧ ಮಿ.ಮೀ.ನಷ್ಟು ಮಳೆಯಾಗಿದೆ.
ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ೪೬.೬ ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ ೭.೫ ಮಿ.ಮೀ. ಮಳೆಯಾಆಗಿ ೮೩.೯ ಮಿ.ಮೀ. ಕೊರತೆ ಎದುರಾಗಿತ್ತು. ಕೆ.ಆರ್.ಪೇಟೆ ತಾಲೂಕಿನಲ್ಲಿ ೯.೨ ಮಿ.ಮೀ., ಮದ್ದೂರು-೨.೯ ಮಿ.ಮೀ., ಮಳವಳ್ಳಿ-೭.೩ ಮಿ.ಮೀ., ಮಂಡ್ಯ-೭.೪ ಮಿ.ಮೀ., ನಾಗಮಂಗಲ-೮.೯ ಮಿ.ಮೀ., ಪಾಂಡವಪುರ-೬.೮ ಮಿ.ಮೀ., ಶ್ರೀರಂಗಪಟ್ಟಣ-೮.೮ ಮಿ.ಮೀ. ಮಳೆಯಾಗಿತ್ತು.ಮೇ ತಿಂಗಳ ಮೊದಲ ವಾರದಲ್ಲಿ ಮಳೆಯಾಗಲಿಲ್ಲ. ಮೇ ೭ ರಿಂದ ೧೪ರವರೆಗೆ ಜಿಲ್ಲೆಯೊಳಗೆ ವಾಡಿಕೆ ಮಳೆ ೨೦.೨ ಮಿ.ಮೀ.ಗೆ ಬದಲಾಗಿ ೬೬.೧ ಮಿ.ಮೀ.ನಷ್ಟು ಮಳೆಯಾಗಿದೆ. ರಣಬಿಸಿಲು, ಉಷ್ಣಹವೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ತಂಪನೆಯ ಹಿತಾನುಭವವನ್ನು ನೀಡಿದೆ. ರೈತರು ಮುಂಗಾರು ಕೃಷಿ ಚಟುವಟಿಕೆಗೆ ಸಿದ್ಧತೆಯನ್ನು ಆರಂಭಿಸುವುದಕ್ಕೆ ಅನುವು ಮಾಡಿಕೊಟ್ಟಿದೆ.
ಕಳೆದ ವರ್ಷ ಮತ್ತು ಈ ಬಾರಿ ಪೂರ್ವ ಮುಂಗಾರು ನಿರೀಕ್ಷೆಯಂತೆ ಆಗಮನವಾಗಲಿಲ್ಲ. ಇದರಿಂದ ರೈತರು ಬೇಸಿಗೆ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ಈ ಬಾರಿಯ ಬೇಸಿಗೆಯಂತೂ ತೀವ್ರ ಉಷ್ಣತೆಯಿಂದ ಕೂಡಿತ್ತು. ರಣಬಿಸಿಲಿಗೆ ತೆಂಗು, ಅಡಿಕೆ ಬೆಳೆಗಳು ನಲುಗಿಹೋದವು. ರೈತರು ಬೆಳೆದು ನಿಂತ ಬೆಳೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಕೆರೆ-ಕಟ್ಟೆಗಳೆಲ್ಲವೂ ಒಣಗಿ ನೀರಿಗೆ ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿತ್ತು.ಮೇ ತಿಂಗಳ ಎರಡನೇ ವಾರದಿಂದ ಆರಂಭಗೊಂಡಿರುವ ಪೂರ್ವ ಮುಂಗಾರು ರೈತರಿಗೆ ಕೊಂಚ ಸಮಾಧಾನವನ್ನು ತಂದಿದೆ. ಮಳೆಯಿಂದ ಬರಡಾಗಿದ್ದ ಭೂಮಿ ಈಗ ಸ್ವಲ್ಪ ಮಟ್ಟಿಗೆ ತಂಪಾಗಿದೆ. ವರುಣನ ಕೃಪೆಗಾಗಿ ಜಿಲ್ಲೆಯ ಹಲವಾರು ಹಳ್ಳಿಗಳ ಜನರು ವಿಭಿನ್ನ ರೀತಿಯ ಆಚರಣೆ, ಪೂಜೆ ಪುನಸ್ಕಾರ ಮಾಡಿ ವರುಣದೇವನಿಗೆ ಪ್ರಾರ್ಥಿಸಿದ್ದರು. ಮಳೆಯ ವಾತಾವರಣ ಹೀಗೆಯೇ ಮುಂದುವರೆಯಲಿ ಎನ್ನುವುದು ರೈತರ ಆಶಯವೂ ಆಗಿದೆ. ೨೪ ಗಂಟೆಯಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆ ೭ ದಿನಗಳ ಮಳೆ ವಿವರತಾಲೂಕುವಾಡಿಕೆವಾಸ್ತವವಾಡಿಕೆವಾಸ್ತವ
ಕೆ.ಆರ್.ಪೇಟೆ೪.೬ ಮಿ.ಮೀ.೪೧.೬ ಮಿ.ಮೀ.೨೩.೦ ಮಿ.ಮೀ.೯೬.೨ ಮಿ.ಮೀ.ಮದ್ದೂರು೪.೪ ಮಿ.ಮೀ.೩೩.೫ ಮಿ.ಮೀ.೨೨.೫ ಮಿ.ಮೀ.೪೭.೬ ಮಿ.ಮೀ.
ಮಳವಳ್ಳಿ೬.೬. ಮಿ.ಮೀ.೩೩.೮ ಮಿ.ಮೀ.೨೩.೨ ಮಿ.ಮೀ.೪೯.೮ ಮಿ.ಮೀ.ಮಂಡ್ಯ೨.೩ ಮಿ.ಮೀ.೩೨.೨ ಮಿ.ಮೀ.೧೩.೪ ಮಿ.ಮೀ.೬೦.೮ ಮಿ.ಮೀ.
ನಾಗಮಂಗಲ೬.೬ ಮಿ.ಮೀ.೫.೧ ಮಿ.ಮೀ.೨೧.೮ ಮಿ.ಮೀ.೩೪.೦ ಮಿ.ಮೀ.ಪಾಂಡವಪುರ೩.೪ ಮಿ.ಮೀ.೩೨.೪ ಮಿ.ಮೀ.೨೨.೬ ಮಿ.ಮೀ.೮೮.೧ ಮಿ.ಮೀ.
ಶ್ರೀರಂಗಪಟ್ಟಣ೫.೬ ಮಿ.ಮೀ.೭೨.೯ ಮಿ.ಮೀ.೨೨.೩ ಮಿ.ಮೀ.೧೨೮.೮ ಮಿ.ಮೀ.ಸರಾಸರಿ೪.೩ ಮಿ.ಮೀ.೩೧.೭ ಮಿ.ಮೀ.೨೦.೨ ಮಿ.ಮೀ.೬೬.೧ ಮಿ.ಮೀ
ಕೆಆರ್‌ಎಸ್ ಒಳಹರಿವಿನಲ್ಲಿ ಕೊಂಚ ಏರಿಕೆಮಂಡ್ಯ:
ಪೂರ್ವ ಮುಂಗಾರು ಎಲ್ಲೆಡೆ ಆಶಾದಾಯಕವಾಗಿ ಬೀಳುತ್ತಿರುವುದರಿಂದ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲೂ ಕೊಂಚ ಪ್ರಮಾಣದ ಏರಿಕೆ ಕಂಡುಬಂದಿದೆ.ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯ ಪರಿಣಾಮ ಅಣೆಕಟ್ಟೆಗೆ ೮೦೨ ಕ್ಯುಸೆಕ್ ನೀರು ಹರಿದುಬರಲಾರಂಭಿಸಿದೆ. ಜನವರಿ ೧೪ರ ಬಳಿಕ ಜಲಾಶಯಕ್ಕೆ ೮೦೨ ಕ್ಯುಸೆಕ್ ಒಳ ಹರಿವು ಬರುತ್ತಿರುವುದು ಇದೇ ಮೊದಲಾಗಿದೆ.
ಕೆಆರ್‌ಎಸ್ ಗರಿಷ್ಠ ಮಟ್ಟ ೧೨೪ ಅಡಿ ಇದ್ದು, ಪ್ರಸ್ತುತ ಜಲಾಶಯದಲ್ಲಿ ೭೯.೬೫ ಅಡಿ ನೀರು ದಾಖಲಾಗಿದ್ದು, ೫೪೧ ಕ್ಯುಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ೧೦.೬೩೩ ಟಿಎಂಸಿ ನೀರು ಸಂಗ್ರಹವಾಗಿದೆ.