ಲೋಕಸಭಾ ಚುನಾವಣೆ : 69% ಮತದಾನ: 2019ಕ್ಕಿಂತ ಹೆಚ್ಚು

| Published : Apr 27 2024, 01:15 AM IST / Updated: Apr 27 2024, 05:36 AM IST

ಸಾರಾಂಶ

ಸಂಸತ್‌ ಸಮರಕ್ಕೆ ರಾಜ್ಯದ 14 ಕ್ಷೇತ್ರದಲ್ಲಿ ನಡೆದ ಮೊದಲ ಹಂತದ ಮತದಾನವು ಎಂದಿನಂತೆ ಕೆಲವು ಸಣ್ಣಪುಟ್ಟ ಲೋಪದೋಷಗಳು, ಗದ್ದಲ, ಗೊಂದಲಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಘಟಾನುಘಟಿ ನಾಯಕರು ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದೆ.

 ಬೆಂಗಳೂರು :  ಸಂಸತ್‌ ಸಮರಕ್ಕೆ ರಾಜ್ಯದ 14 ಕ್ಷೇತ್ರದಲ್ಲಿ ನಡೆದ ಮೊದಲ ಹಂತದ ಮತದಾನವು ಎಂದಿನಂತೆ ಕೆಲವು ಸಣ್ಣಪುಟ್ಟ ಲೋಪದೋಷಗಳು, ಗದ್ದಲ, ಗೊಂದಲಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಘಟಾನುಘಟಿ ನಾಯಕರು ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದೆ.

ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಸರಾಸರಿ ಶೇಕಡಾವಾರು ಪ್ರಮಾಣದಲ್ಲಿ ಕೊಂಚ ಹೆಚ್ಚಳವಾಗಿದೆ. 2019ರಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.68.96ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.69.23ರಷ್ಟು ಮತದಾನವಾಗಿದೆ. ಅಂದರೆ, ಕಳೆದ ಬಾರಿಗಿಂತ ಕೇವಲ ಶೇ.0.27 ಮಾತ್ರ ಹೆಚ್ಚಾಗಿದೆ.

ಈ 14 ಕ್ಷೇತ್ರಗಳ ಪೈಕಿ ಅತಿಹೆಚ್ಚು ಮತದಾನ ನಡೆದಿದ್ದು ಮಂಡ್ಯ ಕ್ಷೇತ್ರದಲ್ಲಿ. ಅಲ್ಲಿ ಶೇ.81.48 ಮತದಾನವಾಗಿದೆ. ಅತಿ ಕಡಿಮೆ ಮತದಾನವಾಗಿದ್ದು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ, ಶೇ.52.81.

ಇನ್ನು ರಾಜಧಾನಿ ಬೆಂಗಳೂರಿನ ಮತದಾರರಲ್ಲಿ ನಿರುತ್ಸಾಹ ಮುಂದುವರಿದಿದ್ದು, ಮತದಾನ ಪ್ರಮಾಣ ನಿರೀಕ್ಷೆಯಂತೆ ಕಡಿಮೆ ಪ್ರಮಾಣದಲ್ಲಾಗಿದೆ. ಬೇರೆ ಕಡೆಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಯುವ ಮತದಾರರು, ವೃದ್ಧರು, ಶತಾಯುಷಿಗಳು ಹುಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಶೋಭಾ ಕರಂದ್ಲಾಜೆ, ಡಾ.ಸಿ.ಎನ್‌.ಮಂಜುನಾಥ್‌, ವಿ.ಸೋಮಣ್ಣ, ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಡಿ.ಕೆ.ಸುರೇಶ್‌, ಜಯಪ್ರಕಾಶ್ ಶೆಟ್ಟಿ ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ಜೂ.4ರಂದು ಫಲಿತಾಂಶ ಹೊರಬೀಳಲಿದೆ.

14 ಕ್ಷೇತ್ರಗಳಲ್ಲಿ ಮತದಾನ:

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡ ಮತದಾನ ಪ್ರಕ್ರಿಯೆಯು ಆರಂಭದಲ್ಲಿ ಮಂದಗತಿಯಲ್ಲಿಯೇ ಸಾಗಿತು. ಬೆಳಗ್ಗೆ 9 ಗಂಟೆಗೆ ಚುನಾವಣಾ ಆಯೋಗವು ಶೇಕಡಾವಾರು ಪ್ರಕಟಿಸಿದಾಗ ಕೇವಲ ಶೇ.9.21ರಷ್ಟು ಇತ್ತು. ನಂತರ ತುಸು ಬಿರುಸುಗೊಂಡು 11 ಗಂಟೆಯ ಶೇಕಡಾವಾರು ಪ್ರಮಾಣ 22.34ರಷ್ಟಾಯಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.38.23ರಷ್ಟು, 3 ಗಂಟೆಯ ಹೊತ್ತಿಗೆ ಶೇ.50.93ರಷ್ಟು, ಸಂಜೆ 5ಕ್ಕೆ ಶೇ.63.90 ಮತ್ತು ಮತದಾನ ಮುಕ್ತಾಯಗೊಂಡಾಗ ಶೇ.69.23 ರಷ್ಟಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು, ನಟ, ನಟಿಯರು, ಕ್ರಿಕೆಟ್‌ ಪಟುಗಳು, ಕಿರುತೆರೆ ಕಲಾವಿದರು, ವಿವಿಧ ಗಣ್ಯರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿ ಗಮನ ಸೆಳೆದರು. ವೃದ್ಧರು, ಶತಾಯುಷಿಗಳು, ಅಂಗವಿಕಲರು ಸಹ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.

ಹಲವೆಡೆ ಗೊಂದಲಗಳು:

ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಆರಂಭದಲ್ಲಿ ಕೈಕೊಟ್ಟ ಮತಯಂತ್ರ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪದಂತಹ ಸಣ್ಣ-ಪುಟ್ಟ ಘಟನೆಗಳು ನಡೆದವು. ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ಮೂಲಸೌಕರ್ಯದ ಕೊರತೆಯಿಂದ ರೊಚ್ಚಿಗೆದ್ದ ಮತದಾರರು ಮತಯಂತ್ರವನ್ನು ಧ್ವಂಸಗೊಳಿಸಿದರು. ಸ್ಥಳದಲ್ಲಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದರು. ಅಲ್ಲದೇ, ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿತ್ತು.

ಮತದಾನ ಬಹಿಷ್ಕಾರ:

ರಾಜ್ಯದ ಹಲವೆಡೆ ನಾನಾ ಕಾರಣಗಳಿಗಾಗಿ ಮತದಾನ ಬಹಿಷ್ಕಾರ ಮಾಡಿದ ಘಟನೆಗಳು ಸಹ ನಡೆದಿವೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರ್ನಳ್ಳಿ ಗ್ರಾಮಸ್ಥರು ಕೆ.ಸಿ.ವ್ಯಾಲಿ ನೀರು ಗ್ರಾಮದ ಕೆರೆಗೆ ಹರಿಸಬೇಕು ಎಂದು ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ತಹಶೀಲ್ದಾರ್ ಹಾಗೂ ಶಾಸಕರು ಭೇಟಿ ನೀಡಿ ಮನವೊಲಿಸಲು ಪ್ರಯತ್ನಪಟ್ಟರೂ ವಿಫಲವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮ್ಯಾಕ್ಲುರಹಳ್ಳಿಯಲ್ಲಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಗೊಲ್ಲಹಳ್ಳಿ ಗ್ರಾಮಸ್ಥರು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿದ ಘಟನೆ ನಡೆದಿದೆ. ಕೋಲಾರ ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಬಾರ್‌ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಮತದಾನ ಬಹಿಷ್ಕರಿಸಿದ್ದ ಜನರ ಮನವೊಲಿಸಲಾಯಿತು.

ವಿದೇಶದಿಂದ ಬಂದು ಮತಚಲಾವಣೆ:

ಕೆಲವರು ವಿದೇಶದಿಂದ ಬಂದು ತಮ್ಮ ಅಮೂಲ್ಯ ಮತಚಲಾಯಿಸಿದರು. ಫಿಲಿಪ್ಪೀನ್ಸ್‌ನಿಂದ ಆಗಮಿಸಿದ ಮೆಡಿಕಲ್‌ ವಿದ್ಯಾರ್ಥಿನಿ ಲಿಖಿತಾ ಚಿತ್ರದುರ್ಗದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಕೋಲಾರ ಮೂಲದ ಅನುಪಮಾ ಜೈ ಕುಮಾರ್‌ ಅವರು ಅಮೆರಿಕದಿಂದ ಆಗಮಿಸಿ ಮತದಾನ ಮಾಡಿದರು. ಅವರು ಅಮೆರಿಕದ ಚಿಕಾಗೋದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿದ್ಯಾರಣ್ಯಪುರ ನಿವಾಸಿ ಗಣೇಶ್‌ ಗುರುಮೂರ್ತಿ ಅಮೆರಿಕದಿಂದ ಬಂದು ಮತಚಲಾಯಿಸಿದರು.