ತುಂಗಭದ್ರಾ ಜಲಾಶಯದಲ್ಲಿ 75 ಟಿಎಂಸಿ ನೀರು ಸಂಗ್ರಹ

| Published : Aug 20 2024, 12:47 AM IST

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಮಾಡಿದ ಬಳಿಕ ಬರೋಬ್ಬರಿ ನಾಲ್ಕು ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಸೋಮವಾರ 75.129 ಟಿಎಂಸಿ ನೀರು ಸಂಗ್ರಹವಾಗಿದೆ. ಈಗ ಒಂದನೇ ಬೆಳೆಗೆ ಪೂರ್ತಿ ನೀರು ಸಿಗುವುದು ಖಾತ್ರಿ ಆಗಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಮಾಡಿದ ಬಳಿಕ ಬರೋಬ್ಬರಿ ನಾಲ್ಕು ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಜಲಾಶಯದಲ್ಲಿ ಸೋಮವಾರ 75.129 ಟಿಎಂಸಿ ನೀರು ಸಂಗ್ರಹವಾಗಿದೆ. ಈಗ ಒಂದನೇ ಬೆಳೆಗೆ ಪೂರ್ತಿ ನೀರು ಸಿಗುವುದು ಖಾತ್ರಿ ಆಗಿದೆ.

ತುಂಗಭದ್ರಾ ಜಲಾಶಯದ ಒಳಹರಿವು ಕೂಡ 55,275 ಕ್ಯುಸೆಕ್‌ನಷ್ಟಿದೆ. ಇದೇ ರೀತಿ ಒಳಹರಿವು ಇದ್ದರೆ, ಜಲಾಶಯಕ್ಕೆ ಇನ್ನಷ್ಟು ನೀರು ಹರಿದು ಬರಲಿದೆ. ಈಗಾಗಲೇ ಜಲಾಶಯದ ಎಲ್ಲ 32 ಕ್ರಸ್ಟ್‌ ಗೇಟ್‌ಗಳನ್ನು ಮುಚ್ಚಲಾಗಿದ್ದು, 19ನೇ ಗೇಟ್‌ಗೆ ಸ್ಟಾಪ್ ಲಾಗ್‌ ಅಳವಡಿಕೆ ಮಾಡಲಾಗಿದೆ. ಹೈದರಾಬಾದ್‌ನ ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡಿದ ಬಳಿಕ ಜಲಾಶಯದಿಂದ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು ನಿಂತಿದೆ.

ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆ ಸೇರಿ 13 ಲಕ್ಷ ಎಕರೆಗೆ ತುಂಗಭದ್ರಾ ಜಲಾಶಯ ನೀರು ಒದಗಿಸುತ್ತಿದೆ. ಜಲಾಶಯದ 19ನೇ ಕ್ರಸ್ಟ್‌ ಗೇಟ್ ಕಳಚಿ ಬಿದ್ದುದ್ದರಿಂದ ಜಲಾಶಯ ನೆಚ್ಚಿದ್ದ ರೈತರು ಆತಂಕಗೊಂಡಿದ್ದರು. ಈಗ ಆತಂಕ ನಿವಾರಣೆ ಆಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 100.788 ಟಿಎಂಸಿ ಇದ್ದು, ಸದ್ಯ 75.129 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇಂದಿನ ಮಟ್ಟ 1624.58 ಟಿಎಂಸಿ ಇದೆ. ಇನ್ನೂ 9 ಅಡಿ ನೀರು ಬಂದರೆ, ಜಲಾಶಯ ಮತ್ತೆ ಸಂಪೂರ್ಣ ಭರ್ತಿ ಆಗಲಿದೆ. ಕ್ರಸ್ಟ್‌ ಗೇಟ್‌ ಕಳಚಿ ಬಿದ್ದಿದ್ದರಿಂದ ಜಲಾಶಯದಿಂದ 40 ಟಿಎಂಸಿಯಷ್ಟು ನೀರು ನದಿ ಪಾಲಾಗಿದೆ. ಈ ನೀರಿಗಾಗಿ ಈಗ ಮಳೆಯನ್ನೇ ನೆಚ್ಚಿಕೊಳ್ಳುವಂತಾಗಿದ್ದು, ಮೇಲ್ಭಾಗದಲ್ಲಿ ಉತ್ತಮ ಮಳೆ ಆಗಲಿ ಎಂದು ತುಂಗಭದ್ರಾ ಜಲಾಶಯ ನೆಚ್ಚಿರುವ ರೈತರು ಪ್ರಾರ್ಥಿಸುತ್ತಿದ್ದಾರೆ.

ತುಂಗಭದ್ರಾ ಜಲಾಶಯ ನೆಚ್ಚಿರುವ ರೈತರು ಈಗಾಗಲೇ ಬತ್ತ ನಾಟಿ ಮಾಡಿಕೊಂಡಿದ್ದಾರೆ. ಈಗ ಜಲಾಶಯದಲ್ಲಿ ನೀರು ಖಾತ್ರಿ ಆಗಿರುವುದರಿಂದ ರೈತರ ಮೊಗದಲ್ಲಿ ಮತ್ತೆ ಹರ್ಷ ಮರಳಿದೆ. ಸಾಲ-ಸೋಲ ಮಾಡಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಬತ್ತ, ಮೆಣಸಿನಕಾಯಿ, ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ತುಂಗಭದ್ರಾ ಜಲಾಶಯದ ನೀರಿನಿಂದ ಬೆಳೆಯಲಾಗುತ್ತಿದೆ. ಈ ಜಲಾಶಯ ಈ ಭಾಗದ ಕೈಗಾರಿಕೆಗಳಿಗೂ ಆಸರೆಯಾಗಿದ್ದು, ಕುಡಿಯುವ ನೀರು ಕೂಡ ಒದಗಿಸುತ್ತದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯ ನೆಚ್ಚಿರುವ ರೈತರಲ್ಲಿದ್ದ ಆತಂಕ ದೂರವಾಗಿದೆ. ಈ ಜಲಾಶಯ ರೈತರ ಪಾಲಿಗೆ ವರದಾನ ಆಗಿದೆ. ಜಲಾಶಯದಲ್ಲಿ ಈಗ 75 ಟಿಎಂಸಿ ನೀರು ಸಂಗ್ರಹಗೊಂಡಿದ್ದು, ಒಳಹರಿವು ಕೂಡ ಉತ್ತಮ ಆಗಿದೆ. ಮತ್ತೆ ಜಲಾಶಯ ಭರ್ತಿಯಾದರೆ ಎರಡನೇ ಬೆಳೆಗೂ ರೈತರಿಗೆ ಅನುಕೂಲ ಆಗಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಹೇಳಿದರು.