8500 ಶಾಲೆ ಅಡುಗೆ ಕೊಠಡಿ ಉಪಯೋಗಿಸದಷ್ಟು ಹಾಳು

| N/A | Published : Sep 04 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಶಾಲೆಗಳ ಬಿಸಿಯೂಟ ತಯಾರಿಕಾ ಕೊಠಡಿಗಳು ಉಪಯೋಗಕ್ಕೆ ಬಾರದಷ್ಟು ದುಸ್ಥಿತಿಗೆ ತಲುಪಿವೆ. ಅವುಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಿಕೊಡಲು ಜಿಲ್ಲಾಡಳಿತಗಳಿಗೆ ಸೂಚಿಸಿದ್ದರೂ ಪ್ರಗತಿ ಕುಂಟುತ್ತಾ ಸಾಗಿದೆ.

ಲಿಂಗರಾಜು ಕೋರಾ 

 ಬೆಂಗಳೂರು :  ರಾಜ್ಯದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಶಾಲೆಗಳ ಬಿಸಿಯೂಟ ತಯಾರಿಕಾ ಕೊಠಡಿಗಳು ಉಪಯೋಗಕ್ಕೆ ಬಾರದಷ್ಟು ದುಸ್ಥಿತಿಗೆ ತಲುಪಿವೆ. ಅವುಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಿಕೊಡಲು ಜಿಲ್ಲಾಡಳಿತಗಳಿಗೆ ಸೂಚಿಸಿದ್ದರೂ ಪ್ರಗತಿ ಕುಂಟುತ್ತಾ ಸಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಯಾವ್ಯಾವ ಶಾಲೆಗಳಲ್ಲಿ ಅಡುಗೆ ಕೋಣೆಗಳು ಶಿಥಿಲಗೊಂಡಿವೆ ಎಂಬ ಬಗ್ಗೆ ಕಳೆದ ವರ್ಷ ಡಿಸೆಂಬರ್‌ನಲ್ಲೇ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದಿತ್ತು. ಈ ವೇಳೆ 8,533 ಅಡುಗೆ ಕೊಠಡಿಗಳು ಬಳಸಲು ಸಾಧ್ಯವಾಗದಷ್ಟು ಮಟ್ಟಕ್ಕೆ ಹಾಳಾಗಿರುವುದು ಕಂಡುಬಂದಿತ್ತು.

ತಕ್ಷಣ ಈ ಎಲ್ಲಾ ಅಡುಗೆ ಕೋಣೆಗಳನ್ನು ಎಂ-ನರೇಗಾ ಯೋಜನೆಯಡಿ ಹೊಸದಾಗಿ ನಿರ್ಮಿಸಿಕೊಡುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯುತ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಕಳೆದ ಜನವರಿಯಲ್ಲಿ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಅವರು ಪತ್ರ ಬರೆದಿದ್ದರು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಒಪ್ಪಿಗೆಯನ್ನೂ ಪಡೆಯಲಾಗಿದ್ದು, ಆ ಇಲಾಖೆಯೂ ಪ್ರತ್ಯೇಕ ಸೂಚನೆ ನೀಡಿದೆ.

ಆದರೆ, ಜಿಲ್ಲಾಡಳಿತಗಳು ಶಾಲಾ ಅಡುಗೆ ಕೊಠಡಿಗಳ ನಿರ್ಮಾಣದಲ್ಲಿ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಶಾಲಾ ಮುಖ್ಯಶಿಕ್ಷಕರಿಂದಲೇ ಕೇಳಿಬರುತ್ತಿದೆ. ಶಿಕ್ಷಣ ಇಲಾಖೆ ಪತ್ರ ಬರೆದು ಎಂಟು ತಿಂಗಳಾದರೂ 500 ಶಾಲೆಗಳ ಅಡುಗೆ ಕೋಣೆಗಳನ್ನೂ ಕೂಡ ದುರಸ್ತಿಗೊಳಿಸುವ ಕಾರ್ಯ ಆಗಿಲ್ಲ. ಹಾಗಾಗಿ ಜಿಲ್ಲಾಡಳಿತಗಳಿಗೆ ಮತ್ತೊಮ್ಮೆ ಈ ಸಂಬಂಧ ಜ್ಞಾಪನ ಹೊರಡಿಸಲು ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯದ 46000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ಸುಮಾರು 48 ಲಕ್ಷ ಮಕ್ಕಳಿಗೆ ಪ್ರತೀ ದಿನ ಶಾಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ನೀಡಲಾಗುತ್ತಿದೆ. ಕೆಲ ನಗರ ಪ್ರದೇಶದ ಶಾಲೆಗಳಲ್ಲಿ ಇಸ್ಕಾನ್‌, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಕ್ಕಳಿಗೆ ಬಿಸಿಯೂಟ ಪೂರೈಸಲಾಗುತ್ತಿರುವುದು ಬಿಟ್ಟರೆ ಬಹುತೇಕ ಗ್ರಾಮೀಣ ಭಾಗದ ಎಲ್ಲಾ ಶಾಲೆಗಳಲ್ಲೂ ಆಯಾ ಶಾಲೆಗಳಲ್ಲೇ ಬಿಸಿಯೂಟ ತಯಾರಿಸಲಾಗುತ್ತದೆ. ಬಿಸಿಯೂಟ ತಯಾರಿಸಲು, ಅದಕ್ಕೆ ಬೇಕಾದ ಆಹಾರ ಪದಾರ್ಥಗಳು, ಪಾತ್ರೆಗಳು, ಅಡುಗೆ ಅನಿಲ ಸಿಲಿಂಡರ್‌ ದಾಸ್ತಾನಿಗೆ ಸುಸಜ್ಜಿತ ಅಡುಗೆ ಕೋಣೆ ಅತ್ಯವಶ್ಯಕ. ಹಾಗಾಗಿ 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅಡುಗೆ ಕೋಣೆಗಳನ್ನು ನರೇಗಾ ಯೋಜನೆಯಡಿ ಕಾರ್ಯಗತಗೊಳಿಸಲು ಸೂಚಿಸಿದ್ದರು.

ಯಾವ್ಯಾವ ಶೈಕ್ಷಣಿಕ ಜಿಲ್ಲೆಯಲ್ಲಿ

ಎಷ್ಟು ಶಾಲಾ ಕೊಠಡಿ ಶಿಥಿಲ?

ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು 631 ಶಾಲೆಗಳ ಅಡುಗೆ ಕೊಠಡಿಗಳನ್ನು ಹೊಸದಾಗಿ ನಿರ್ಮಿಸಬೇಕಿದೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲಿ 443, ಚಿಕ್ಕೋಡಿ 416, ವಿಜಯಪುರ 415, ಮಂಡ್ಯ 411, ಬೆಳಗಾವಿ 382, ಕೋಲಾರ 370, ಮಧುಗಿರಿ 362, ತುಮಕೂರು 346, ಕಲಬುರಗಿ 338, ಶಿವಮೊಗ್ಗ 333, ಚಿಕ್ಕಮಗಳೂರು 297, ಚಿಕ್ಕಬಳ್ಳಾಪುರ 285, ಕೊಪ್ಪಳ 280, ಶಿರಸಿ 259, ಹಾವೇರಿ 260, ದಾವಣಗೆರೆ 245, ದಕ್ಷಿಣ ಕನ್ನಡ 225 ಶಾಲೆಗಳಲ್ಲಿ ಹೊಸ ಅಡುಗೆ ಕೊಠಡಿಗೆ ಬೇಡಿಕೆ ಬಂದಿದೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 11ರಿಂದ ಗರಿಷ್ಠ 200 ಶಾಲೆಗಳ ವರೆಗೆ ಅಡುಗೆ ಕೊಠಡಿ ನಿರ್ಮಿಸಿಕೊಡಲು ಕೋರಿಕೆ ಇಟ್ಟಿವೆ.

Read more Articles on