ಸಾರಾಂಶ
ಶಾಲೆಯಲ್ಲಿನ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಂವ್ಹಾರ ಬಳಿಯ ಮಾರಡಗಿ (ಎಸ್.ಎ) ಸರ್ಕಾರಿ ಶಾಲೆಯಲ್ಲಿ ನಡೆದಿದೆ
ಜೇವರ್ಗಿ: ಶಾಲೆಯಲ್ಲಿನ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಂವ್ಹಾರ ಬಳಿಯ ಮಾರಡಗಿ (ಎಸ್.ಎ) ಸರ್ಕಾರಿ ಶಾಲೆಯಲ್ಲಿ ನಡೆದಿದೆ. 1 ರಿಂದ 5ನೇ ತರಗತಿವರೆಗೆ ಇರುವ ಮಾರಡಗಿ ಶಾಲೆಯಲ್ಲಿ ಒಟ್ಟಾರೆ 116 ಮಕ್ಕಳಿದ್ದು, ಮಂಗಳವಾರ 68 ಮಕ್ಕಳು ಶಾಲೆಗೆ ಹಾಜರಾಗಿದ್ದರು.
ಮಧ್ಯಾಹ್ನ ಬಿಸಿಯೂಟಕ್ಕೆ ಮಾಡಿದ್ದ ಅನ್ನ ಸಾರು ಸೇವಿಸಿದ ಮಕ್ಕಳಿಗೆ ಏಕಾಏಕಿ ವಾಂತಿ ಆರಂಭವಾಗಿದ್ದು, ಕೂಡಲೇ ಶಿಕ್ಷಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 50 ವಿದ್ಯಾರ್ಥಿಗಳಿಗೆ ಗಂವ್ಹಾರ ಆಸ್ಪತ್ರೆಯಲ್ಲಿ ಇನ್ನೂಳಿದ 18 ಮಂದಿಗೆ ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಮಕ್ಕಳ ಬಿಸಿಯೂಟ ವಿಷಕಾರಿ ಆಗಲು ಕಲುಷಿತ ನೀರು, ದುರ್ವಾಸನೆ ಬಿರುವ ಖಾರದ ಪುಡಿ ಕಾರಣ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜ ಪಾಟೀಲ್ ನರಿಬೋಳ ಆಸ್ಪತ್ರೆಗೆ ಆಗಮಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.