ಸಾರಾಂಶ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿನಿ ಕೆ.ಸಿ.ಚುಕ್ಕಿ ಅವರ ಪೋಷಕರು ಸಿಹಿ ತಿನಿಸುವ ಮೂಲಕ ಪುತ್ರಿ ಸಾಧನೆ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಶೇ.88.58 ಫಲಿತಾಂಶ ಲಭಿಸಿದ್ದು, 8ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದೆ.ಈ ಬಾರಿಯೂ ಕೂಡ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ 16,888 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 14,960 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ. 88.58ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿ ಶೇ. 83.13ರಷ್ಟು ಫಲಿತಾಂಶ ಬಂದಿತ್ತು. ಶೇಕಡವಾರು ಫಲಿತಾಂಶದಲ್ಲಿ ಗಣನೀಯ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ 7337 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7198 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5287 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4631 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 3864 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3131 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಮೂವರಿಗೆ ರ‍್ಯಾಂಕ್:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟದ ರ‍್ಯಾಂಕ್ ಪಡೆದಿದ್ದಾರೆ.
ಶಿಕಾರಿಪುರದ ಕುಮದ್ವತಿ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿ ಪವನ್‌ಗೆ ಕಾಮರ್ಸ್ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದಿದ್ದಾರೆ. ತಂದೆ ಎಸ್.ಮಂಜುನಾಥ್ ಕುಮದ್ವತಿ ಬಿ.ಇಡ್ ಕಾಲೇಜಿನಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಎಂ.ಎಸ್.ಅನಿತಾ.ಗೃಹಿಣಿ.ಚುಕ್ಕಿಗೆ ನಾಲ್ಕನೆ ರ‍್ಯಾಂಕ್:
ಕಲಾ ವಿಭಾಗದಲ್ಲಿ ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿನಿ ಕೆ.ಸಿ.ಚುಕ್ಕಿ 593 ಅಂಕ ಗಳಿಸಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿದ್ದಾರೆ. ಇವರು ಶಿವಮೊಗ್ಗದ ಕನ್ನಡ ಮೀಡಿಯಂ ನ್ಯೂಸ್ ಚಾನೆಲ್‌ನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಮತ್ತು ವಕೀಲರಾದ ಎಚ್.ಎಂ.ಪೂರ್ಣಮಾ ಅವರ ಪುತ್ರಿ.ನಗರದ ಪೇಸ್ ಕಾಲೇಜಿನ ಸಾತ್ವಿಕ್ ಕೆ.ವೈ. ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಗಳಿಸಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿದ್ದಾರೆ. ಮೂಲತಃ ಹೊಸನಗರ ತಾಲೂಕು ಕೋಡೂರು ಗ್ರಾಮದ ಕೃಷಿಕ ಯೋಗೇಶ್ ಮತ್ತು ಅಪರ್ಣಾ ದಂಪತಿಗಳ ಪುತ್ರ.
ಉಪನ್ಯಾಸಕರು, ಪೋಷಕರ ಸಹಕಾರದಿಂದ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು. ನಿರಂತರ ಓದಿನಿಂದ ಪರೀಕ್ಷೆ ಎದುರಿಸುವುದು ಸುಲಭವಾಯಿತು. ಇಂಜಿನಿಯರಿಂಗ್ ಮಾಡುವ ಗುರಿಯಿದೆ.ಸಾತ್ವಿಕ್, ಪೇಸ್ ಪಿಯು ಕಾಲೇಜು.
ಕಾಲೇಜು ಆಡಳಿತ ಮತ್ತು ಪೋಷಕರಿಂದ ಉತ್ತಮ ಸಹಕಾರ ಇತ್ತು. ಸ್ವ ಅಧ್ಯಯನ ಮಾಡುತ್ತಿದ್ದೆ. ರಾತ್ರಿ ವೇಳೆ ಓದುವುದು ನನಗೆ ಅಭ್ಯಾಸ. ತಡರಾತ್ರಿವರೆಗೂ ಓದುತ್ತಿದ್ದೆ. ಈಗ ರಾಜ್ಯಕ್ಕೆ ರ‍್ಯಾಂಕ್ ಬಂದಿರುವುದು ಖುಷಿ ತಂದಿದೆ.ಪವನ್, ಕುಮದ್ವತಿ ಪಿಯು ಕಾಲೇಜು
ದಿನಕ್ಕೆ 4-5 ಗಂಟೆ ಅಧ್ಯಯನ ಮಾಡುತ್ತಿದ್ದೆ. ಸಹಪಾಠಿಗಳು, ಉಪನ್ಯಾಸಕರ ಜತೆ ವಿಷಯದ ಕುರಿತು ಚರ್ಚೆ ನಡೆಸಿದ್ದು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಯಿತು. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲವಿದೆ. ಮುಂದೆ ಕಾನೂನು ಪದವಿ ಪಡೆದು ಜಡ್ಜ್ ಆಗುವ ಕನಸು ಕಂಡಿದ್ದೇನೆ.ಕೆ.ಸಿ.ಚುಕ್ಕಿ, ಡಿವಿಎಸ್ ಪಿಯು ಕಾಲೇಜು, ಶಿವಮೊಗ್ಗ.