ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 20 ಅಂಶ ಯೋಜನೆ

| Published : Dec 29 2024, 01:15 AM IST

ಸಾರಾಂಶ

ರಾಮನಗರ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಎರಡಂಕಿಯಿಂದ ಒಂದಂಕಿಯೊಳ ತರಲು ಶ್ರಮಿಸುತ್ತಿರುವ ಶಿಕ್ಷಣ ಇಲಾಖೆ, ಅದಕ್ಕಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಶಾಲೆಗಳಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಇಲಾಖೆ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತುಕೊಟ್ಟಿದೆ.

ರಾಮನಗರ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಎರಡಂಕಿಯಿಂದ ಒಂದಂಕಿಯೊಳ ತರಲು ಶ್ರಮಿಸುತ್ತಿರುವ ಶಿಕ್ಷಣ ಇಲಾಖೆ, ಅದಕ್ಕಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಶಾಲೆಗಳಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಇಲಾಖೆ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತುಕೊಟ್ಟಿದೆ.

2022-23ನೇ ಸಾಲಿನಲ್ಲಿ ಶೇಕಡ 93.81ರಷ್ಟು ಫಲಿತಾಂಶದೊಂದಿಗೆ 12ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆಯು 2023-24ರಲ್ಲಿ ಶೇಕಡ 89.42ರಷ್ಟು ಫಲಿತಾಂಶ ಪಡೆದು 21ನೇ ಸ್ಥಾನಕ್ಕೆ ಕುಸಿಯಿತು. 2024ನೇ ಸಾಲಿನಲ್ಲಿ ಶೇಕಡ 71.16ರಷ್ಟು ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿತ ಕಂಡಿತು. ಇದು ಕಳೆದ 9 ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಫಲಿತಾಂಶವಾಗಿದೆ. ಈ ವರ್ಷ ಎರಡಂಕಿ ಸ್ಥಾನವನ್ನು ಒಂದಂಕಿಗೆ ಇಳಿಸುವ ಗುರಿ ಹೊಂದಿರುವ ಇಲಾಖೆ, ಈ ನಿಟ್ಟಿನಲ್ಲಿ ಸಮಾರೋಪಾದಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ.

ಶಿಕ್ಷಕರಿಂದ ವೇಕ್ ಆಪ್ ಕಾಲ್:

20 ಅಂಶಗಳ ಕಾರ್ಯಕ್ರಮದ ಪೈಕಿ ಪ್ರಮುಖವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯ ವಿಷಯಗಳ ಬೋಧನೆ ಪೂರ್ಣಗೊಳಿಸಲಾಗಿದೆ. ಪ್ರತಿದಿನ ಶಾಲೆ/ಕಾಲೇಜು ಅವಧಿಯ ಮೊದಲು ಮತ್ತು ನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಓದಿನಲ್ಲಿ ತೊಡಗುತ್ತಿರುವುದನ್ನು ಪರಿಶೀಲಿಸಲು ಪ್ರತಿ ದಿನ ಮುಂಜಾನೆ ಮತ್ತು ಸಂಜೆ ಶಿಕ್ಷಕರು ''''''''ವೇಕ್ ಆಪ್ ಕಾಲ್'''''''' ಮಾಡುತ್ತಿದ್ದಾರೆ.

ಕಲಿಕೆಯಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಸರಾಸರಿಗಿಂತ ಉತ್ತಮವಾಗಿರುವ ವಿದ್ಯಾ ರ್ಥಿಗಳ ಗುಂಪುಗಳನ್ನು ಪ್ರತ್ಯೇಕವಾಗಿ ರಚಿಸಿ ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಒಪ್ಪಿಸುವ ಕಾರ್ಯವನ್ನು ಪ್ರೌಢಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜು ಉಪನ್ಯಾಸಕರು ಮಾಡುತ್ತಿದ್ದಾರೆ.

ಅಲ್ಲದೆ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಜಾರಿಗೊಳಿಸಿದ್ದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾದರಿಯನ್ನು ಅನುಸರಿಸಿ ಯಾವ್ಯಾವ ಶಾಲಾ, ಕಾಲೇಜುಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆಯೋ ಅಲ್ಲೆಲ್ಲಾ ಘಟಕ ಪರೀಕ್ಷೆಗಳನ್ನು ವೆಬ್‌ ಕಾಸ್ಟಿಂಗ್ ಮೂಲಕವೇ ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳ ಸಂಯೋಜನೆ :

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಉತ್ತಮವಾಗಿ ಓದುವ ಅಥವಾ ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಸಂಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ದಿನ 2 ಪುಟಗಳನ್ನು ಬರೆಸುವುದು ಮತ್ತು ಗಟ್ಟಿಯಾಗಿ ಓದಿಸುವ ಅಭ್ಯಾಸ ಮಾಡಿಸುತ್ತಿದ್ದು, ನಿರಂತರವಾಗಿ ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಕೇಸ್‌ ಸ್ಟಡಿ ನಡೆಸಿ ಪರಿಹಾರ ಕ್ರಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಫಲಿತಾಂಶ ಉತ್ತಮ ಪಡಿಸಲು ಪುನಶ್ಚೇತನ ತರಬೇತಿ ನಡೆಸಲಾಗಿದೆ. ಅವರೇಜ್, ಬಿಲೋ ಅವರೇಜ್ ಮತ್ತು ಎಬೋವ್ ಅವರೇಜ್ ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಪ್ರತಿ ಶಿಕ್ಷಕರಿಗೆ ಸಮಾನವಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಲ್ಪಸಂಖ್ಯಾತರ ಮಕ್ಕಳು ಅನುತ್ತೀರ್ಣರಾಗುತ್ತಿದ್ದು, ಅವರಿಗಾಗಿಯೇ ಸಂಪನ್ಯೂಲ ವ್ಯಕ್ತಿಯಿಂದ ವಿಶೇಷವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಲ್ಲದೆ, ಉಪನ್ಯಾಸಕರು ಹಾಗೂ ವಿಷಯ ಪರಿವೀಕ್ಷಕರಿಗೆ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ದತ್ತು ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಬಾಕ್ಸ್ ..............

ಎಲ್ಲಾ ವಿಷಯಗಳಿಗೆ ಸಂಬಂಧಿಸಿದ "ಯಶಸ್ಸು ಕೈಪಿಡಿ "

ಪರಿಪೂರ್ಣ ಫಲಿತಾಂಶದೆಡೆಗೆ ನಮ್ಮ ನಡೆ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ "ಯಶಸ್ಸು ಕೈಪಿಡಿ "ಯನ್ನು ಇಲಾಖೆಯಿಂದ ಮುದ್ರಿಸಿ ವಿತರಿಸಲಾಗಿದೆ. ವಿಷಯವಾರು ತಜ್ಞರು ತಯಾರಿಸಿರುವ ಕನಿಷ್ಠ 100ರಿಂದ 150 ಪುಟಗಳ ಈ ಕೈಪಿಡಿ ಪಠ್ಯಕ್ಕೆ ಸಂಬಂಧಿಸಿದ ಮುಖ್ಯ ವಿಷಯಗಳನ್ನು ಒಳಗೊಂಡಿದೆ. ಡಿಸೆಂಬರ್ 31 ಅಥವಾ ಜನವರಿ 1ರಿಂದ ಯಶಸ್ಸು ಕೈಪಿಡಿಗಳು ವಿದ್ಯಾರ್ಥಿಗಳಿಗೆ ವಿತರಣೆಯಾಗಲಿದೆ.

ಕೋಟ್ .............

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ತರುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ರೂಪಿಸಲಾಗಿದೆ. ಪ್ರತಿ ದಿನ ಎರಡು ಶಾಲೆಗಳಿಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸುತ್ತಿದ್ದೇನೆ. ಕಲಿಕೆಯಲ್ಲಿ ಹಿಂದುಳಿದಿರುವ 10 ವಿದ್ಯಾರ್ಥಿಗಳನ್ನು ಓರ್ವ ಶಿಕ್ಷಕರಿಗೆ ದತ್ತು ನೀಡಲಾಗಿದೆ. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಉಪನ್ಯಾಸಕರು ಮತ್ತು ವಿಷಯ ಪರಿವೀಕ್ಷಕರಿಗೆ ದತ್ತು ನೀಡಲಾಗಿದೆ.

-ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ

ಬಾಕ್ಸ್‌.............

ಪ್ರಮುಖ ಸುಧಾರಣಾ ಅಂಶಗಳು

- ಪ್ರತಿ ಘಟಕದ ಪಾಠ ಬೋಧನೆ ಮುಗಿದ ಬಳಿಕ ಆ ಘಟಕಕ್ಕೆ ಕಿರು ಪರೀಕ್ಷೆ ನಡೆಸುವುದು. ಮಕ್ಕಳಿಗೆ ಘಟಕಗಳ ಸತತ ಓದುವಿಕೆಯಿಂದ ಸ್ಥಿರವಾದ ಪುನರಾವರ್ತನೆ ಪ್ರಕ್ರಿಯೆ ನಡೆಸುವುದು. ವಿದ್ಯಾರ್ಥಿಗಳಿಗೆ ಓದುವ ಪ್ರಕ್ರಿಯೆ ಜೊತೆಗೆ ಬರವಣಿಗೆಗೂ ಒತ್ತು ನೀಡುವುದು.

- ಕಲಿಕಾ ಮಟ್ಟಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಓದಲು ವಿವಿಧ ವಿಷಯಗಳ ವೇಳಾಪಟ್ಟಿ ತಯಾರಿಸಿ ಓದುವ ಅವಧಿ ನಿಗದಿಪಡಿಸುವುದು.

-ಡಿಸೆಂಬರ್ ಒಳಗೆ ಪಠ್ಯ ಬೋಧಿಸಿ, ವಿದ್ಯಾರ್ಥಿಗಳಿಗೆ ಮುಂಜಾನೆ ವೇಕ್ ಅಪ್ ಕಾಲ್ ಕೊಡೋದು

- ಕಲಿಕಾ ಮಟ್ಟದ ಆಧಾರದಲ್ಲಿ ವಿದ್ಯಾರ್ಥಿಗಳ ಗುಂಪು ರಚಿಸಿ ಶಿಕ್ಷಕರು ದತ್ತು ಪಡೆಯಬೇಕು

-ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಉತ್ತಮವಾಗಿ ಓದುವ ಮಕ್ಕಳೊಂದಿಗೆ ಸಂಯೋಜಿಸಬೇಕು

-15 ದಿನಕ್ಕೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಒಪ್ಪಿಸಲು ಕ್ರಮ ಕೈಗೊಳ್ಳಬೇಕು

- ಕಡಿಮೆ ಫಲಿತಾಂಶದ ಶಾಲೆಗಳು ಉಪನ್ಯಾಸಕರು ಮತ್ತು ವಿಷಯ ಪರಿವೀಕ್ಷಕರಿಗೆ ದತ್ತು ನೀಡುವುದು

28ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಶಾಲೆಗೆ ಭೇಟಿ ನೀಡಿ ಕಲಿಕಾ ವಾತಾವರಣ ಗಮನಿಸುತ್ತಿರುವುದು.