ಗಾಜನೂರು ಡ್ಯಾಂ ನೋಡಲು ಬಂದ ಸ್ನೇಹಿತರ ಮಧ್ಯೆ ಕದನ

| Published : Jul 04 2024, 01:00 AM IST / Updated: Jul 04 2024, 01:01 AM IST

ಸಾರಾಂಶ

ತುಂಗಾ ಡ್ಯಾಂ ನೋಡಲು ಬಂದಾಗ ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳವಾರ ರಾತ್ರಿ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬುಧವಾರ ಬೆಳಗ್ಗೆ ನಾಪತ್ತೆಯಾಗಿದ್ದ ಯುವತಿಯು ಪತ್ತೆಯಾಗಿದ್ದಾಳೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗಾಜನೂರು ಡ್ಯಾಂ ನೋಡಲು ಯುವತಿಯೊಂದಿಗೆ ಬಂದಿದ್ದ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸ್ಥಳೀಯರು ಯುವಕರಿಬ್ಬರನ್ನು ಥಳಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಭರ್ತಿಯಾಗಿರುವ ಗಾಜನೂರು ಡ್ಯಾಂ ನೋಡಲು ಇಬ್ಬರು ಯುವಕರೊಂದಿಗೆ ಯುವತಿ ಬಂದಿದ್ದಾಳೆ. ಈ ವೇಳೆ ಯಾವುದೋ ಕಾರಣಕ್ಕೆ ಈ ಇಬ್ಬರು ಯುವಕರ ನಡುವೆ ಹಾಗೂ ಅವರ ಜೊತೆಗೆ ಬಂದಿದ್ದ ಯುವತಿ ನಡುವೆ ಜಗಳವಾಗಿದೆ ಎನ್ನಲಾಗಿದೆ. ಇದನ್ನುಅಲ್ಲಿದ್ದ ಸ್ಥಳೀಯರು ಗಮನಿಸಿದ್ದಾರೆ. ಅಲ್ಲದೆ ಮಧ್ಯ ಪ್ರವೇಶ ಮಾಡಿ ಘಟನೆ ಬಗ್ಗೆ ವಿಚಾರಿಸಿದಾಗ, ಆ ವೇಳೆ ಯುವತಿ ಜೊತೆಗೆ ಬಂದಿದ್ದ ಯುವಕರು ಓಡಿಹೋಗಿದ್ದು, ಯುವತಿಯನ್ನು ಸ್ಥಳೀಯಯರು ಅಲ್ಲಿಂದ ಕರೆದೊಯ್ದಿದ್ದಾರೆ.

ಇದಾದ ಬಳಿಕ ಇತ್ತ ಓಡಿಹೋಗಿದ್ದ ಯುವಕರು ನೇರವಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸ್‌ ಠಾಣೆಯೊಂದಕ್ಕೆ ತೆರಳಿ ತಮ್ಮೊಂದಿಗೆ ಬಂದಿದ್ದ ಯುವತಿ ಕಿಡ್ನ್ಯಾಪ್‌ ಆಗಿದ್ದಾಳೆ ಎಂದು ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯುವತಿಯನ್ನು ಹುಡುಕಲು ಆರಂಭಿಸಿದ್ದಾರೆ. ರಾತ್ರಿಯಿಡೀ ಪೊಲೀಸರು ಯುವತಿಗಾಗಿ ಹುಡುಕಾಡಿದ್ದಾರೆ. ತೀವ್ರ ಪ್ರಯತ್ನದ ನಡುವೆಯೂ ರಾತ್ರಿಯೂ ಯುವತಿ ಪತ್ತೆಯಾಗಿರಲಿಲ್ಲ.

ಬೆಳಗ್ಗೆ ಪತ್ತೆಯಾದ ಯುವತಿ:

ಬುಧವಾರ ಬೆಳಗ್ಗೆ ಯುವತಿ ತೋಟವೊಂದರಲ್ಲಿದ್ದ ಶೆಡ್‌ ರೀತಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಯುವತಿಯನ್ನು ರಕ್ಷಿಸಿದ ಪೊಲೀಸರು ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ತುಂಗಾನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಬೇರೆ ಆಯಾಮದಿಂದಲೂ ತನಿಖೆ: ಎಸ್ಪಿ

ತುಂಗಾ ಡ್ಯಾಂ ನೋಡಲು ಬಂದಾಗ ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳವಾರ ರಾತ್ರಿ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬುಧವಾರ ಬೆಳಗ್ಗೆ ನಾಪತ್ತೆಯಾಗಿದ್ದ ಯುವತಿಯು ಪತ್ತೆಯಾಗಿದ್ದಾಳೆ. ಯುವತಿ ಹೇಳಿಕೆ ಪ್ರಕಾರ ಆಕೆಯ ಸ್ನೇಹಿತ ಚಿಕ್ಕಮಗಳೂರಿನ ಪ್ರತಾಪ್‌ ಎಂಬಾತ ಹಾಗೂ ಪ್ರತಾಪನ ಸ್ನೇಹಿತ ಸೇರಿ ಮೂರು ಜನ ತುಂಗಾ ಜಲಾಶಯ ನೋಡಲು ಬಂದಿದ್ದಾರೆ. ಆಗ ಪ್ರತಾಪ್‌ನ ಸ್ನೇಹಿತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಚಾರವಾಗಿ ಪ್ರತಾಪ್ ಹಾಗೂ ಆತನ ಸ್ನೇಹಿತನ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಬಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇವರಿಬ್ಬರು ಅಲ್ಲಿಂದ ಓಡಿ ಹೋಗಿದ್ದಾರೆ. ಸ್ಥಳೀಯರು ನನ್ನನ್ನು ಕರೆದುಕೊಂಡು ಬಂದರು ಎಂದು ಯುವತಿ ತಿಳಿಸಿದ್ದಾಳೆ. ತನಿಖೆ ಮುಂದುವರೆಸಿದ್ದೇವೆ. ಬೇರೆ ಆಯಾಮಾಗಳಲ್ಲೂ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.