ತಡೆಗೋಡೆ ಇಲ್ಲದ ಸೇತುವೆ: ಜೀವ ಭಯದಲ್ಲಿ ಸಂಚಾರ

| Published : Jul 08 2024, 12:37 AM IST

ಸಾರಾಂಶ

ಮಣ್ಣೂರ ಹಾಗೂ ಇಂಡಿ ತಾಲೂಕಿನ ಭುಯ್ಯಾರ ಗ್ರಾಮದ ನಡುವೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ಗೆ ತಡೆಗೋಡೆ ನಿರ್ಮಾಣ ಮಾಡದ ಪರಿಣಾಮ ವಾಹನ ಸವಾರರು ಆತಂಕದಲ್ಲಿಯೇ ಸಂಚಾರ ಮಾಡುವಂತಹ ಪರಿಸ್ಥಿತಿ ಬಂದಿದೆ.

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನ ಮಣ್ಣೂರ ಹಾಗೂ ಇಂಡಿ ತಾಲೂಕಿನ ಭುಯ್ಯಾರ ಗ್ರಾಮದ ನಡುವೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ಗೆ ತಡೆಗೋಡೆ ನಿರ್ಮಾಣ ಮಾಡದ ಪರಿಣಾಮ ವಾಹನ ಸವಾರರು ಆತಂಕದಲ್ಲಿಯೇ ಸಂಚಾರ ಮಾಡುವಂತಹ ಪರಿಸ್ಥಿತಿ ಬಂದಿದೆ.

ಬ್ಯಾರೇಜ್ ಸಣ್ಣದೇ ಆಗಿದ್ದರೂ ಕೂಡ ತಡೆಗೋಡೆ ಇಲ್ಲದಿರುವುದುದ ಅಪಾಯಕಾರಿ ಸಂಗತಿಯಾಗಿದೆ ಎನ್ನಬಹುದು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಯಾವುದೇ ರೀತಿಯಿಂದ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿರುವುದು ಮಾತ್ರ ಪ್ರಯಾಣಿಕರಿಗೆ ತೀವ್ರ ಆಕ್ರೋಶ ಮೂಡುವಂತಾಗಿದೆ.

ಪ್ರತಿನಿತ್ಯ ಈ ಬ್ಯಾರೇಜ್ ಮೂಲಕ ನೂರಾರು ವಾಹನಗಳು ತೆರಳುತ್ತವೆ. ತಡೆಗೋಡೆ ಮಾಡದ ಪರಿಣಾಮ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಬೈಕ್ ಸವಾರರು ವೇಗವಾಗಿ ಹೋಗುವ ವೇಳೆ ಒಂದು ವೇಳೆ ಏನಾದರೂ ಆಯ ತಪ್ಪಿದರೆ ನೇರವಾಗಿ ನದಿಗೆ ಬೀಳಬೇಕಾಗುತ್ತದೆ.

ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದೇನು ಅಧಿಕಾರಿಗಳಿಗೆ ಗೊತ್ತಿಲ್ಲದಿರುವಂತಹ ಸಂಗತಿ ಏನಲ್ಲ. ಆದರೂ ಅವರು ತಡೆಗೋಡೆ ನಿರ್ಮಾಣ ಮಾಡಲು ಮಾತ್ರ ಆಸಕ್ತಿ ತೋರಿಸುತ್ತಿಲ್ಲ ಏಕೆ? ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಕಾಡಲಾರಂಭಿಸಿದೆ. ಈ ಬ್ಯಾರೇಜ್ ಇಂಡಿ ತಾಲೂಕಿನ ಭುಯ್ಯಾರ ನಾಗರಳ್ಳಿ ಖೇಡಗಿ ರೋಡಗಿ ಲಾಳಸಂಗಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಮಣ್ಣೂರ ಹೊಸೂರ ಶಿವಬಾಳನಗರ ಉಪ್ಪಾರವಾಡಿ ದೇವಪ್ಪನಗರ ದಯಾನಂದನಗರ ರಾಮನಗರ ಶಿವೂರ ಕುಡಗನೂರ ಕರಜಗಿ ಮಾಶಾಳ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳ ಗ್ರಾಮಸ್ಥರು ಇಂಡಿಗೆ ಹೋಗಬೇಕಾದರೆ ಚಿಕ್ಕಮಣ್ಣೂರ ಅಗರಖೇಡ ಬೇನೂರ ಗ್ರಾಮಗಳ ಮೂಲಕ ಇಂಡಿಗೆ ಹೋಗಬೇಕಾದರೆ ಸುಮಾರು 30 ಕಿಲೋಮೀಟರ್ ಆಗುತ್ತದೆ. ಆದರೆ ಭುಯ್ಯಾರ ಬ್ಯಾರೇಜ್ ಮೂಲಕ ಇಂಡಿಗೆ ಹೋದರೆ 20 ಕಿಲೋ ಮೀಟರ್ ದಲ್ಲಿ ಇಂಡಿಗೆ ತಲುಪಬಹುದು. ಇದರಿಂದ 10 ಕಿಲೋಮೀಟರ್ ರಸ್ತೆ ಅಂತರ ಕಡಿಮೆಯಾಗುತ್ತದೆ ಹಾಗೂ ಪ್ರಯಾಣಿಕರ ಸಮಯವೂ ಉಳಿಯುತ್ತದೆ.

ಈಗಾಗಲೇ ಮಣ್ಣೂರ ಗ್ರಾಮಸ್ಥರು ಇಂಡಿ ಹಾಗೂ ವಿಜಯಪುರಕ್ಕೆ ಇದೇ ಭುಯ್ಯಾರ ಬ್ಯಾರೇಜ್ ಮೂಲಕ ಸಂಚರಿಸುತ್ತಿದ್ದಾರೆ.ಆದರೆ ಅಫಜಲ್ಪುರ ತಾಲೂಕಿನ ಮಣ್ಣೂರ ಗ್ರಾಮದಿಂದ ಭುಯ್ಯಾರ ಬ್ಯಾರೇಜ್ ಮೂಲಕ ಇಂಡಿಗೆ ಹೋಗುವ ಮಾರ್ಗ ಮಧ್ಯದಲ್ಲಿರುವ 3 ಕಿ ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಮಧ್ಯದಲ್ಲಿ ದೊಡ್ಡ ಗಾತ್ರದ ತಗ್ಗು ದಿನ್ನೆಗಳು ಬಿದ್ದಿದ್ದು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿಯಿದೆ.

ಈ ಬ್ಯಾರೇಜ್ ಮೇಲಿರುವ ರಸ್ತೆ ಕೂಡ ಸಾಕಷ್ಟು ಪ್ರಮಾಣದಲ್ಲಿ ತಗ್ಗು ದಿನ್ನೆಗಳಿಂದ ಕೂಡಿದೆ.ಆದರೂ ಕೂಡ ದುರಸ್ಥಿ ಭಾಗ್ಯ ಕಂಡಿಲ್ಲ.ಇದು ನಿಜಕ್ಕೂ ನಾಚಿಗೇಡು ಸಂಗತಿಯಾಗಿದೆ ಎಂಬುದು ಈ ಪ್ರದೇಶದ ವಾಹನ ಸವಾರರ ಗಂಭೀರ ಆರೋಪವಾಗಿದೆ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬ್ಯಾರೇಜ್ ಮೂಲಕ ಸಂಚಾರ ಮಾಡುತ್ತಾರೆ.

ಆದರೆ ಈ ಸೇತುವೆ ಮಾತ್ರ ಅವರ ಕಣ್ಣಿಗೆ ಕಾಣದಿರುವುದು ಮಾತ್ರ ಇದು ಎಷ್ಟೊಂದು ಸಮಂಜಸವಾಗಿದೆ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.

ಸಂಭಂದಿಸಿದ ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ಹದಗೆಟ್ಟಿರುವ 3 ಕಿಮೀ ರಸ್ತೆ ದುರಸ್ತಿಗೊಳಿಸಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಭುಯ್ಯಾರ ಬ್ಯಾರೇಜ್ ಗೆ ತಡೆಗೋಡೆ ನಿರ್ಮಾಣ ಮಾಡಬೇಕು ಹಾಗೂ ಬ್ಯಾರೇಜ್ ನ ಎತ್ತರ ಹೆಚ್ಚಿಸಬೇಕು ಅಮಾಯಕರು ಜೀವ ಕಳೆದುಕೊಳ್ಳುವ ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.