ಸಾಮಾಜಿಕ, ಆರ್ಥಿಕ ನ್ಯಾಯಕ್ಕೆ ವಿರುದ್ಧವಾದ ಬಜೆಟ್

| Published : Feb 06 2025, 11:49 PM IST

ಸಾರಾಂಶ

ಚಾಮರಾಜನಗರದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಿರುವ ೨೦೨೫-೨೬ನೇ ಸಾಲಿನ ಬಜೆಟ್, ಸಂವಿಧಾನದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಆಶಯದ ವಿರುದ್ಧವಾದ ಬಜೆಟ್ ಆಗಿದೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ₹೫೦.೬೫ ಲಕ್ಷ ಕೋಟಿ ರುಪಾಯಿಗಳ ಬಜೆಟ್‌ನಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಕಾಣೆಯಾಗಿದೆ. ವಾರ್ಷಿಕ ₹೧೨ ಲಕ್ಷ ಆದಾಯದವರೆಗೆ ತೆರಿಗೆ ಇಲ್ಲ ಎಂಬ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು ದೊಡ್ಡಮಟ್ಟದ ಡಂಗೂರ ಬಾರಿಸಲಾಗುತ್ತಿದೆ ಎಂದರು. ಭಾರತದ ೧೪೫ ಕೋಟಿ ಜನಸಂಖ್ಯೆಯಲ್ಲಿ ₹೧೨ ಲಕ್ಷದ ವರೆಗೆ ಆದಾಯವಿರುವ ವ್ಯಕ್ತಿಗಳಾಗಲಿ ಅಥವಾ ಕುಟುಂಬಗಳಾಗಲಿ ಎಷ್ಟಿವೆ ಎಂಬ ಅಂಕಿ ಅಂಶಗಳನ್ನು ನಾಜೂಕಾಗಿ ಮರೆಮಾಚಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಮೂರು ಅಥವಾ ನಾಲ್ಕು ಕೋಟಿ ಕೋಟಿ ನೌಕರರಲ್ಲಿ ಎಷ್ಟು ಜನ ಆದಾಯ ₹೧೨ ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದಾರೆ ಎಂಬ ಅಂಕಿ ಅಂಶದ ಮೇಲೆ ಬೆಳಕು ಚೆಲ್ಲಿದರೆ ಕೇಂದ್ರ ಸರ್ಕಾರದ ನಾಟಕ ಬಯಲಾಗುತ್ತದೆ ಎಂದರು.

ಪ್ರಸ್ತುತ ದೇಶದಲ್ಲಿ ₹೮೦ ಕೋಟಿ ಜನ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಕ್ಕಾಗಿ ಸಾಲುಗಟ್ಟಿ ನಿಲ್ಲುತ್ತಾರೆ, ಇವರ ಆರ್ಥಿಕ ಏಳಿಗೆ ಮತ್ತು ಸ್ವಾವಲಂಬಿ ಬದುಕಿಗೆ ಈ ಬಜೆಟ್‌ನಲ್ಲಿ ಎಷ್ಟು ಹಣ ನೀಡಲಾಗಿದೆ ಎಂಬ ವಾಸ್ತವ ಅಂಶವನ್ನು ಯಾರೂ ಚರ್ಚಿಸುತ್ತಿಲ್ಲ ಎಂದರು. ₹೧೨ ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ ಜನ ಖರೀದಿಸುವ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯಲ್ಲಿಯೇ, ೮೦ ಕೋಟಿ ಕಡುಬಡವರು ಮತ್ತು ಬಡ ಮಧ್ಯಮ ವರ್ಗ ಖರೀದಿಸಬೇಕಾಗಿದೆ ಎಂಬ ಸತ್ಯ ಅರ್ಥವಾದರೆ. ಈ ಬಜೆಟ್‌ನ ಪೊಳ್ಳುತನ ಅರ್ಥವಾಗುತ್ತದೆ ಎಂದರು.

ದೇಶದ ಶ್ರೀಮಂತರಿಗಿಂತ ಅತಿ ಹೆಚ್ಚು ತೆರಿಗೆಯನ್ನು ಪರೋಕ್ಷವಾಗಿ ಕಡುಬಡವರು ಮತ್ತು ಬಡ ಮಧ್ಯಮ ವರ್ಗದವರಿಂದಲೇ ಸುಲಿಯಲಾಗುತ್ತಿದೆ. ಕಡುಬಡವರು ಮತ್ತು ಬಡ ಮಧ್ಯಮ ವರ್ಗದ ಕುಟುಂಬಗಳಿಗೆ ಜೀವನ ಭದ್ರತೆ ಒದಗಿಸುವ ಸರ್ಕಾರಿ ವಲಯದ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಜೀವನ ಹಾಗೂ ಉದ್ಯೋಗ ಭದ್ರತೆ ಇಲ್ಲದ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ಶಿಕ್ಷಕ ಹಾಗೂ ಉಪನ್ಯಾಸಕ ಉದ್ಯೋಗಗಳು ದೇಶದ ಯುವಜನತೆಯನ್ನು ಆಧುನಿಕ ಗುಲಾಮಗಿರಿಗೆ ತಳ್ಳುತ್ತಿವೆ ಎಂದರು. ೨೦೧೮-೧೯ರ ಸಾಲಿನಲ್ಲಿ ಶೇ.೩.೭೫ ರಷ್ಟು ಮೀಸಲಿದ್ದ ಅನುದಾನವನ್ನು ಈ ಬಜೆಟ್‌ನಲ್ಲಿ ಶೇ.೨.೫೩ ಕ್ಕೆ ಇಳಿಸುವ ಮೂಲಕ ದೇಶದ ಶಿಕ್ಷಣ ಕ್ಷೇತ್ರವನ್ನು ದುರ್ಬಲಗೊಳಿಸಲಾಗುತ್ತಿದೆ. ಹಾಗೆಯೇ ಆರೋಗ್ಯ ಕ್ಷೇತ್ರದಲ್ಲಿ ಶೇ.೨.೪೭ ರಿಂದ ೧.೯೪ಕ್ಕೆ ಹಾಗೂ ಸಮಾಜ ಕಲ್ಯಾಣಕ್ಕೆ ಶೇ.೧.೭೫ ರಿಂದ ಶೇ ೧.೧೮ಕ್ಕೆ ಇಳಿಸಲಾಗಿದೆ. ಗ್ರಾಮೀಣ ಅಭಿವೃದ್ಧಿಯ ಅನುದಾನವನ್ನು ಶೇ ೬.೩ ರಿಂದ ಶೇ ೫. ೨೬ ಕ್ಕೆ ಇಳಿಸಲಾಗಿದೆ.೨೦೨೪-೨೫ನೇ ಸಾಲಿನಲ್ಲಿ ಕೃಷಿಗೆ ₹೧.೩೧ ಲಕ್ಷ ಕೋಟಿ ಅನುದಾನ ನೀಡಿದ್ದರೆ, ಈ ಸಾಲಿನಲ್ಲಿ ₹೧.೨೭ಲಕ್ಷ ಕೋಟಿಗೆ ಇಳಿಸಲಾಗಿದೆ. ರಸಗೊಬ್ಬರ ಸಹಾಯಧನವು ₹೧.೭೧ ಲಕ್ಷ ಕೋಟಿಯಿಂದ ₹೧.೬೭ ಲಕ್ಷ ಕೋಟಿಗೆ ಇಳಿಕೆಯಾಗಿದೆ. ರೈತರ ಬಹು ವರ್ಷಗಳ ಬೇಡಿಕೆ ಮತ್ತು ಹೋರಾಟವಾಗಿರುವ ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ ಕಾಯ್ದೆಯ ಬಗ್ಗೆ ಈ ಬಜೆಟ್‌ನಲ್ಲಿ ಚಕಾರವನ್ನೇ ಎತ್ತಿಲ್ಲ. ಕೃಷಿ ಕಾರ್ಮಿಕರಿಗೆ ಕೂಲಿ ಒದಗಿಸುವ ನರೇಗಾ ಯೋಜನೆಗೆ ಕಳೆದ ವರ್ಷ ನೀಡಿದ್ದ ೮೯.೧೫೩ರಷ್ಟು ಅನುದಾನವನ್ನು ಈ ಬಜೆಟ್ ನಲ್ಲಿಯೂ ನೀಡಲಾಗಿದೆ. ಆ ಮೂಲಕ ಕೃಷಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಹಿತಾಸಕ್ತಿ ಕುರಿತಂತೆ ಸಂಪೂರ್ಣವಾಗಿ ಈ ಬಜೆಟ್ ಜಾಣ ಮೌನ ವಹಿಸಿದೆ. ಮುಂದಿನ ಐದು ವರ್ಷಗಳಲ್ಲಿ ೫ ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡಲು ತಲಾ ೨ ಕೋಟಿ ಸಾಲ ಸೌಲಭ್ಯ ಒದಗಿಸುವ ಜನಪ್ರಿಯ ಘೋಷಣೆ ಮಾಡಲಾಗಿದೆ. ಆದರೆ ಈ ಯೋಜನೆಗೆ ಒದಗಿಸಲಾದ ಅನುದಾನದ ಬಗ್ಗೆ ಚಕಾರವನ್ನೇ ಎತ್ತಿಲ್ಲ.

ಇಡೀ ಬಜೆಟ್ ಮಧ್ಯಮ ವರ್ಗವನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳುವ ಹಾಗೂ ಶ್ರೀಮಂತ ಉದ್ಯಮಿಗಳನ್ನು ಮತ್ತಷ್ಟು ಕೊಬ್ಬಿಸುವ ದಿಸೆಯಲ್ಲಿ ನಯವಾಗಿ ತಯಾರಿಸಲಾಗಿದೆ. ದೇಶದ ಆರ್ಥಿಕ ತಜ್ಞರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಆಳುವ ಸರ್ಕಾರಗಳ ಈ ವಂಚನೆಯ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಎನ್ ನಾಗಯ್ಯ, ಜಿಲ್ಲಾ ಉಸ್ತುವಾರಿ ಪ್ರಕಾಶ್ ಅಮಚವಾಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ಪಿ ಮಹೇಶ್, ಕಾರ್ಯದರ್ಶಿ ಅಭಿ ಇದ್ದರು.