ಸಾರಾಂಶ
ಬಳ್ಳಾರಿ ನಗರ ಸೇರಿದಂತೆ ಜಿಲ್ಲಾದ್ಯಂತ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಅಲ್ಲದೇ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಬಳ್ಳಾರಿ: ಶಾಂತಿ, ಪ್ರೀತಿ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬವನ್ನು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಕ್ರೈಸ್ತ ಸಮುದಾಯದವರು ನಗರದ ವಿವಿಧ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ವಿದ್ಯಾನಗರ ಮೇರಿಮಾತಾ ಚರ್ಚ್‌ನಲ್ಲಿ ಕ್ರೈಸ್ತ ಸಮುದಾಯ ಸೇರಿದಂತೆ ವಿವಿಧ ಧರ್ಮಿಯರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ನೆರೆಹೊರೆಯವರು, ಬಂಧು ಬಳಗದೊಂದಿಗೆ ಜತೆಗೂಡಿ ಹಬ್ಬದ ಊಟ ಸವಿದರು.
ಇಲ್ಲಿನ ವಿದ್ಯಾನಗರದ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳು ದೀಪಾಲಂಕಾರ, ವೈವಿಧ್ಯಮಯ ವಿದ್ಯುತ್ ನಕ್ಷತ್ರಗಳಿಂದ ಕಂಗೊಳಿಸಿದವು. ವಿವಿಧೆಡೆ ಸಾಂತಾಕ್ಲಾಸ್ ವೇಷಧಾರಿಗಳು ಮಕ್ಕಳೊಂದಿಗೆ ಕುಣಿದು ಸಂಭ್ರಮಿಸಿದರು.ಬಳಿಕ ಬಾಲಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಏಸುವಿನ ಜನನ, ಬಾಲ್ಯ, ಬದುಕನ್ನು ತಿಳಿಸುವ ಚಿತ್ರಣ ಸಾರಲಾಯಿತು. ಸಮುದಾಯದವರು ಏಸು ಗೀತೆಗಳನ್ನು ಹಾಡಿದರು. ತಡರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ಪ್ರಮುಖ ಚರ್ಚ್ ಗಳು ಭಕ್ತರಿಂದ ತುಂಬಿ ತುಳಕಿದವು.
ಕ್ರಿಸ್ಮಸ್ ಮುನ್ನದಿನವಾದ ಭಾನುವಾರ ರಾತ್ರಿಯಿಂದಲೇ ಹಬ್ಬದ ಸಂಭ್ರಮ ಮನೆಮಾಡಿತು. ರಾತ್ರಿ 10.30ರ ಸುಮಾರಿಗೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಚರ್ಚ್‌ನ ಪರಿವಾರದೊಂದಿಗೆ ಛತ್ರಿ, ಚಾಮರಗಳ ಹಿಮ್ಮೇಳದೊಂದಿಗೆ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ಬಲಿಪೂಜೆ ಸಲ್ಲಿಸಿದರು. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.