ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಜಾತ್ರೆ ಎಂದಾಕ್ಷಣ ಸ್ಥಳೀಯರಿಗೆ ಮುರುಘಾಮಠ, ಉಳವಿ ಚನ್ನಬಸವಣ್ಣ ಹಾಗೂ ಗರಗ ಜಾತ್ರೆಗಳು ಸ್ಮರಣೆಗೆ ಬರುತ್ತವೆ. ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ಜಾತ್ರೆಗಳು ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತವೆ. ಆದರೆ, 2025ನೇ ವರ್ಷದಲ್ಲಿ ಅದೇನೋ ಜಾತ್ರೆಗಳ ಸಂತೆಯಾಗಿದೆ. ಜಿಲ್ಲೆಯ ಹಲವು ಊರುಗಳಲ್ಲಿ ಅದೆಷ್ಟೋ ವರ್ಷಗಳ ನಂತರದಲ್ಲಿ ವಾರಗಟ್ಟಲೇ ದೇವಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಗ್ರಾಮ ದೇವತೆಗಳ ಜಾತ್ರೆ ಕಳೆಗಟ್ಟಿದೆ. ಈಗಾಗಲೇ ಅಳ್ನಾವರ ಸಮೀಪದ ಬೆಣಚಿ ಜಾತ್ರೆ ಅದ್ಧೂರಿಯಾಗಿ ನಡೆದಿದ್ದು, ಸದ್ಯ ಮೇ 1 ರಿಂದ ಧಾರವಾಡ ತಾಲೂಕಿನ ಬೆನಕಟ್ಟಿ, ಯಾದವಾಡ, ಮನಗುಂಡಿ, ಕಲ್ಲೆ, ಇಟಿಗಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹತ್ತಾರು ವರ್ಷಗಳ ನಂತರ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಭಕ್ತಿ-ಭಾವದ ಜಾತ್ರೆಗಳು: ಪ್ರತಿ ಜಾತ್ರೆಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ಮಾತ್ರವಲ್ಲದೇ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ. ದೇವಿಯನ್ನು ಗ್ರಾಮ ಪ್ರವೇಶಿಸುವಾಗ ನೂರಾರು ಜನರು ಕುಂಭ ಹೊತ್ತು, ಆರತಿ ಎತ್ತಿ, ಡೊಳ್ಳು- ಜಗ್ಗಲಗಿ ಮೂಲಕ ಸಂಭ್ರಮದಿಂದ ಬರಮಾಡಿಕೊಂಡಿದ್ದಲ್ಲದೇ, ನಿತ್ಯ ನಸುಕಿನಲ್ಲಿ ದೇವಿಗೆ ಕುಂಕುಮಾರ್ಚನೆ, ರುದ್ರಾಭಿಷೇಕ, ಚಂಡಿಕಾ ಹೋಮಗಳು ಜನರನ್ನು ಸಂಪೂರ್ಣ ಭಕ್ತಿಮಯವಾಗಿಸಿವೆ. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಅಮ್ಮಿನಬಾವಿ, ಉಪ್ಪಿನಬೆಟಗೇರಿ, ರೋಣ ಸೇರಿದಂತೆ ಹಲವು ಮಠಾಧೀಶರಿಂದ ಪ್ರವಚನದ ಮೂಲಕ ಜನರಲ್ಲಿ ಭಕ್ತಿ-ಭಾವನೆಯ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.ಮಕ್ಕಳಿಗೆ ಖುಷಿಯೋ ಖುಷಿ: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿಯೇ ಈ ಜಾತ್ರೆಗಳನ್ನು ಹಮ್ಮಿಕೊಂಡಿದ್ದು, ಇಡೀ ವರ್ಷಗಳ ಕಾಲ ಓದು -ಬರಹದಲ್ಲಿ ಮುಳುಗಿದ ಮಕ್ಕಳಂತೂ ಜಾತ್ರೆಯ ವಿಶೇಷತೆ ಅನುಭವಿಸುತ್ತಿವೆ. ಜಾತ್ರೆ ಅಂಗವಾಗಿ ಊರಿನ ಹೊರಗಿನ ಬಯಲಿನಲ್ಲಿ ಎಲ್ಲ ತರಹದ ಆಟಗಳು ಬಂದಿದ್ದು, ಮಕ್ಕಳು- ಮಹಿಳೆಯರು ಸಂಭ್ರಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುತ್ತಿರುವ ಹೊನ್ನಾಟವಂತೂ ಗ್ರಾಮದ ಯುವಕರನ್ನು ಬಡಿದೆಬ್ಬಿಸಿದೆ. ಗ್ರಾಮದ ಪ್ರತಿ ಓಣಿಗಳಲ್ಲಿ ದೇವಿ ಹೊತ್ತು ಹೋಗುವ ಯುವಕರು ಲಾರಿಗಟ್ಟಲೇ ಭಂಡಾರ ತೂರಾಡುತ್ತಿರುವ ದೃಶ್ಯ ಕಣ್ಣು ತುಂಬುತ್ತಿದೆ.
ಸ್ವಾವಲಂಬಿ ಜಾತ್ರೆ: ಜಾತ್ರೆಗಳು ಎಂದಾಕ್ಷಣ ಲಕ್ಷಗಟ್ಟಲೇ ಹಣದ ಅಗತ್ಯತೆ ಇದೆ. ಹೀಗೆಂದ ಮಾತ್ರಕ್ಕೆ ಈ ಗ್ರಾಮಸ್ಥರು ಯಾವ ರಾಜಕೀಯ ಮುಖಂಡರ ಬೆನ್ನು ಬೀಳದೇ ತಮ್ಮೂರಿನ ಜಾತ್ರೆಗಳನ್ನು ತಮ್ಮ ವೆಚ್ಚದಲ್ಲಿಯೇ ಸ್ವಾವಲಂಬನೆಯಿಂದ ವಿಜೃಂಬಣೆಯಿಂದ ಮಾಡುತ್ತಿದ್ದಾರೆ. ಉದಾಹರಣೆಗೆ ಯಾದವಾಡದಲ್ಲಿ ಪ್ರತಿ ಎಕೆರೆಗೆ ₹1500, ರಾಜ್ಯ ಸರ್ಕಾರಿ ನೌಕರಸ್ಥರಿಗೆ ಅವರ ವೇತನದ ಶೇ. 30ರಷ್ಟು, ಕೇಂದ್ರ ಸರ್ಕಾರಿ ನೌಕರರಿಗೆ ಶೇ. 40, ಅರೆ ಸರ್ಕಾರಿ ಶೇ. 20ರಷ್ಟು ಹಾಗೂ ಖಾಸಗಿ ನೌಕರರಿಗೆ ಶೇ. 10ರಷ್ಟು ಪಟ್ಟಿ ಹಾಕುವ ಮೂಲಕ ಅಂದಾಜು ₹50 ಲಕ್ಷ ಸಂಗ್ರಹಿಸಲಾಗಿದೆ. ಅದೇ ರೀತಿ ಊಳಿದ ಗ್ರಾಮಗಳಲ್ಲೂ ಹಣ ಸಂಗ್ರಹ ಮಾಡುವ ಮೂಲಕ ಸ್ವಾವಲಂಬಿ ಜಾತ್ರೆ ಮಾಡುತ್ತಿದ್ದಾರೆ.ಇಂದು ಕಡುಬಿನ ಕಾಳಗ: ನಮ್ಮೂರು ಬೆನಕಟ್ಟಿ. 30 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ನಡೆಯುತ್ತಿದ್ದು, ನೂತನ ದೇವಸ್ಥಾನ ನಿರ್ಮಿಸಲಾಗಿದೆ. ನಮ್ಮೂರು ತುಂಬ ಚಿಕ್ಕದು. ಹೀಗಾಗಿ ಈ ಹಿಂದೆ ರಥೋತ್ಸವ ಮಾಡಿರಲಿಲ್ಲ. ಈ ಬಾರಿ ಉತ್ಸಾಹದಿಂದ ರಥೋತ್ಸವ ಮಾಡಿದ್ದು ಗ್ರಾಮದ ಜನತೆಗೆ ತುಂಬ ಸಂತಸವಾಗಿದ್ದಾರೆ. ಮೇ 1 ರಿಂದ ಅದ್ಧೂರಿಯಾಗಿ ಜಾತ್ರೆ ನಡೆದಿದ್ದು, ಸೋಮವಾರ ರಾತ್ರಿ ಸೀಮೆಗೆ ಹೋಗಲಿದ್ದು ಮಂಗಳವಾರ ಕೊನೆ ದಿನ ಕಡುಬಿನ ಕಾಳಗ ನಡೆಯಲಿದೆ ಎಂದು ಗ್ರಾಮದ ಮುಖಂಡ ಅಜ್ಯಯ್ಯ ಬೆಳ್ಳಕ್ಕಿಮಠ ಜಾತ್ರೆ ಕುರಿತು ಮಾಹಿತಿ ನೀಡಿದರು.
ಒಟ್ಟಾರೆ ಜಾತಿ ಬೇಧವಿಲ್ಲದೇ ಎಲ್ಲರೂ ಸಮಾನರು ಎಂದು ತೋರಿಸುವ, ಸಂಭ್ರಮಿಸುವ ಸಂದರ್ಭವನ್ನು ಈ ಜಾತ್ರೆಗಳು ಒದಗಿಸಿಕೊಡುತ್ತಿವೆ. ಜಾತ್ರೆ ಸಂಭ್ರಮಿಸುವುದರಲ್ಲಿ ಬಡವ- ಶ್ರೀಮಂತ ಇಲ್ಲ. ಒಲ್ಲರನ್ನು ಒಗ್ಗೂಡಿಸಿ ಸಂಭ್ರಮಿಸುತ್ತಿದ್ದು, ಜನರ ಮನದಲ್ಲೂ ಒಗ್ಗಟ್ಟು, ಧನಾತ್ಮಕ ಭಾವನೆ ಬರುತ್ತಿರುವುದು ಉತ್ತಮ ಬೆಳವಣಿಗೆಯೇ ಸರಿ.ಮೋಜು- ಮಸ್ತಿಯಲ್ಲ: ಜಾತ್ರೆ ಎಂದಾಕ್ಷಣ ಮೋಜು- ಮಸ್ತಿಯಲ್ಲ. ಅದೊಂದು ಧಾರ್ಮಿಕತೆಯ ಪ್ರಮುಖ ಭಾಗ. ಅದರಲ್ಲೂ ಗ್ರಾಮದೇವತೆಯರ ಜಾತ್ರೆ ಸಂದರ್ಭದಲ್ಲಿ ಮಡಿವಂತಿಕೆ ತುಂಬಾ ಬೇಕು. ನಾನು ನೋಡಿದ ಹಾಗೆ ಈ ವರ್ಷ ಧಾರವಾಡ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಅರ್ಥಪೂರ್ಣವಾಗಿ ಜಾತ್ರೆ ಮಾಡುತ್ತಿದ್ದು, ಅದರಲ್ಲೂ ಯಾದವಾಡ ಜಾತ್ರೆ ಖುಷಿ ನೀಡಿದೆ ಎಂದು ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.