ಸಾರಾಂಶ
ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಮಾಲೀಕ ಅನೀಶ ಮೈತ್ರಾಣಿ ಮತ್ತು ಸುನೀಶ ಮೈತ್ರಾಣಿ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಮಾಲೀಕ ಅನೀಶ ಮೈತ್ರಾಣಿ ಮತ್ತು ಸುನೀಶ ಮೈತ್ರಾಣಿ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಾಧಾರ ಕಲೆಹಾಕುತ್ತಿದ್ದು, ಈ ಅವಘಡ ಸಂಭವಿಸಲು ಕಾರಣವೇನು? ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತೇ ಅಥವಾ ಇಲ್ಲವೋ ಎಂಬುದನ್ನು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಸ್ನೇಹಂ ಕಾರ್ಖಾನೆಯಲ್ಲಿ ಇನ್ಸುಲಿನ್ ಟೇಪ್ ಉತ್ಪಾದನೆ ಮಾಡಲಾಗುತ್ತಿತ್ತು. ಕಾರ್ಖಾನೆಯನ್ನು 1994ರಲ್ಲಿ ಆರಂಭಿಸಲಾಗಿತ್ತು. 2018ರಲ್ಲಿ ನಾವಗೆ ಗ್ರಾಮದ ಹೊರವಲಯದಲ್ಲಿ 5 ಎಕರೆ ವಿಶಾಲವಾದ ಜಾಗದಲ್ಲಿ ಸ್ನೇಹಂ ಕಾರ್ಖಾನೆಯ ಮೂರು ಮಹಡಿಯ ಕಟ್ಟಡ ಹೊಂದಿದೆ. ಸುಮಾರು 450 ಕುಟುಂಬಗಳ ಜೀವನಕ್ಕೆ ಈ ಕಾರ್ಖಾನೆ ಆಸರೆಯಾಗಿತ್ತು. ಅಗ್ನಿ ದುರಂತದ ಬಳಿಕ ನೂರಾರು ಕಾರ್ಮಿಕರ ಬದುಕು ಈಗ ಬೀದಿಗೆ ಬಿದ್ದಿದೆ. ಅಗ್ನಿ ದುರಂತದಲ್ಲಿ ಕಾರ್ಖಾನೆ ಕಟ್ಟಡಗಳ ಅವಶೇಷಗಳ ತೆರವಿಗೆ ನೂರಾರು ಕಾರ್ಮಿಕರು ಶ್ರಮಿಸುತ್ತಿದ್ದಾರೆ.ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವುದಾಗಿ ಕಾರ್ಖಾನೆ ಘೋಷಣೆ ಮಾಡಿದೆ. ಆದರೆ, ಸರ್ಕಾರ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಬುಧವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಮ್ಮ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಕುಟುಂಬಕ್ಕೆ ಕಾರ್ಖಾನೆ ವತಿಯಿಂದ ₹10 ಲಕ್ಷ ಪರಿಹಾರ ನೀಡಲಾಗುವುದು.-ಅನೀಸ ಮೇತ್ರಾಣಿ, ಕಾರ್ಖಾನೆ ಮಾಲೀಕ