ಕೈಗೂಡದ ಸುಸಜ್ಜಿತ ಸಗಟು ಮೀನು ಮಾರುಕಟ್ಟೆ ಕನಸು

| Published : Jan 11 2025, 12:46 AM IST

ಕೈಗೂಡದ ಸುಸಜ್ಜಿತ ಸಗಟು ಮೀನು ಮಾರುಕಟ್ಟೆ ಕನಸು
Share this Article
  • FB
  • TW
  • Linkdin
  • Email

ಸಾರಾಂಶ

ಬೇರೆ ವ್ಯಾಪಾರಸ್ಥರಿಗೆ ಕಲ್ಪಿಸಿದಂತೆ ನಮಗೂ ಪಾಲಿಕೆ ಜಾಗದಲ್ಲಿ ಸಗಟು ಮೀನು ಮಾರುಕಟ್ಟೆ ಮಾಡಲು ಜಾಗ ಕೊಡುವಂತೆ ಸಗಟು ಮೀನು ಮಾರಾಟಗಾರ ಸಂಘದವರು ಹಲವಾರು ಬಾರಿ ಮನವಿ ಮಾಡಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ವಾಣಿಜ್ಯ ನಗರಿ ಖ್ಯಾತಿಯ ಹುಬ್ಬಳ್ಳಿಯಲ್ಲಿ ಜವಳಿ, ಬಟ್ಟೆ, ಚಿನ್ನಾಭರಣ, ಬೆಳ್ಳಿ, ಕಾಯಿಪಲ್ಯ, ದಿನಸಿಗಳು, ಹೂವು ಹೀಗೆ ಬಗೆ ಬಗೆಯ ಮಾರುಕಟ್ಟೆಗಳಿವೆ. ಆದರೆ ನಿತ್ಯ ಲಕ್ಷಾಂತರ ವಹಿವಾಟು ನಡೆಯುವ ಸಗಟು ಮೀನು ಮಾರಾಟಗಾರರು ಸರಿಯಾದ ಮಾರುಕಟ್ಟೆ ಇಲ್ಲದೇ ಹಳೆ ಮಂಟೂರ ರಸ್ತೆಯಲ್ಲಿರುವ ಖಾಸಗಿ ಜಾಗದಲ್ಲಿ ಲಕ್ಷಾಂತರ ಬಾಡಿಗೆ ನೀಡಿ ವಹಿವಾಟು ನಡೆಸಬೇಕಾಗಿದೆ.

ಬೇರೆ ವ್ಯಾಪಾರಸ್ಥರಿಗೆ ಕಲ್ಪಿಸಿದಂತೆ ನಮಗೂ ಪಾಲಿಕೆ ಜಾಗದಲ್ಲಿ ಸಗಟು ಮೀನು ಮಾರುಕಟ್ಟೆ ಮಾಡಲು ಜಾಗ ಕೊಡುವಂತೆ ಸಗಟು ಮೀನು ಮಾರಾಟಗಾರ ಸಂಘದವರು ಹಲವಾರು ಬಾರಿ ಮನವಿ ಮಾಡಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋರಿದ್ದಾರೆ. ಆದರೆ ಜಾಗ ಕೊಡಲು ಪಾಲಿಕೆ ಸೇರಿದಂತೆ ಜನಪ್ರತಿನಿಧಿಗಳು ನಿರಾಕರಿಸಿದ್ದು, ದಶಕಗಳಿಂದ ಮಾಡಿಕೊಂಡು ಬಂದ ವ್ಯಾಪಾರವನ್ನು ಉಳಿಸಿಕೊಳ್ಳುವ ಸಲುವಾಗಿ ಖಾಸಗಿಯವರ ಜಮೀನು ಬಾಡಿಗೆ ಪಡೆದು ವ್ಯಾಪಾರ ಮಾಡಬೇಕಾದ ಸ್ಥಿತಿ ಬಂದಿದೆ.

ಹುಬ್ಬಳ್ಳಿಯೇ ಮುಖ್ಯ ಮಾರುಕಟ್ಟೆ

ಹುಬ್ಬಳ್ಳಿಯ ಸಗಟು ಮೀನು ಮಾರುಕಟ್ಟೆಗೆ ಪ್ರತಿದಿನ 25ಕ್ಕೂ ಅಧಿಕ ಕಂಟೇನರ್‌ ಗಾಡಿಗಳು ಪಶ್ಚಿಮ ಕರಾವಳಿ ತೀರದ ಕಾರವಾರ, ಮಂಗಳೂರು, ರತ್ನಾಗಿರಿ, ಭಟ್ಕಳದಿಂದ ಬರುತ್ತವೆ. ಹುಬ್ಬಳ್ಳಿಯಲ್ಲಿ 20ಕ್ಕೂ ಹೆಚ್ಚು ಸಗಟು ಮೀನು ವ್ಯಾಪಾರಸ್ಥರಿದ್ದು, ಅವರು ಇಲ್ಲಿಂದ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮೀನು ಮಾರಾಟಕ್ಕೆ ಕಳಿಸುತ್ತಾರೆ. ಇಲ್ಲಿಯ ಗಣೇಶಪೇಟೆಯಲ್ಲಿರುವ ಮೀನು ಮಾರುಕಟ್ಟೆಯ ಚಿಲ್ಲರೆ ವ್ಯಾಪಾರಸ್ಥರು ಹಾಗೂ ಮಹಾನಗರದ ಸಣ್ಣಪುಟ್ಟ ಮೀನು ಮಾರಾಟಗಾರರು ಸಹ ಇಲ್ಲಿಂದಲೇ ಮೀನುಗಳನ್ನು ಖರೀದಿಸುತ್ತಾರೆ. ಆದರೆ ಸುಸಜ್ಜಿತ ಮಾರುಕಟ್ಟೆ ಮಾತ್ರ ಆಗುತ್ತಿಲ್ಲ.

ಮಾರುಕಟ್ಟೆ ಸ್ಥಳಾಂತರ

ದಶಗಳಿಂದ ಮಂಟೂರ ರಸ್ತೆಯಲ್ಲಿಯೇ ಸಗಟು ಮೀನು ಮಾರುಕಟ್ಟೆ ಇತ್ತು. ಆದರೆ, ಡಿಸೆಂಬರ್‌ ಕೊನೆಯ ವಾರದಲ್ಲಿ ಈ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವಂತೆ ಪಾಲಿಕೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ತೀವ್ರ ಒತ್ತಡ ಹೇರಿದ್ದಾರೆ. ವ್ಯಾಪಾರಸ್ಥರು ಖಾಲಿ ಮಾಡದಿದ್ದಾಗ ಜೆಸಿಬಿ, ಟ್ರ್ಯಾಕ್ಟರ್‌ಗಳನ್ನು ತಂದು ಮೀನು ತುಂಬಿದ ಟ್ರೇಗಳನ್ನು ಬಿಸಾಡಿದ್ದಾರೆ. ನಮಗೆ ಜಾಗ ಕೊಡಿ ಎಂದರೂ ಪಾಲಿಕೆಯವರು ಕಿವಿಗೊಡಲಿಲ್ಲ ಎನ್ನುತ್ತಾರೆ ಸಗಟು ಮೀನು ವ್ಯಾಪಾರಸ್ಥರು.

ಪಾಲಿಕೆಯ ಒತ್ತಡದ ಹಿನ್ನೆಲೆಯಲ್ಲಿ ಅದೇ ಪ್ರದೇಶದಲ್ಲಿಯ ಮಿಲತ್‌ ಈದ್ಗಾ ಎದುರು ಖಾಸಗಿಯವರಿಂದ 2 ಎಕರೆ ಜಮೀನನ್ನು ವರ್ಷಕ್ಕೆ 8 ಲಕ್ಷ ರು. ಬಾಡಿಗೆ ಆಧಾರದ ಮೇಲೆ ಪಡೆದಿರುವ ಸಗಟು ಮೀನು ವ್ಯಾಪಾರಸ್ಥರ ಸಂಘದವರು ಮಾರುಕಟ್ಟೆ ನಿರ್ಮಿಸಿಕೊಂಡಿದ್ದಾರೆ. ಮುಂಗಡವಾಗಿ 2 ಲಕ್ಷ ರು. ಕೊಟ್ಟಿದ್ದೇವೆ. ಇಲ್ಲಿ ಸದ್ಯ 14 ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದು, ನಾವೇ ಬಾಡಿಗೆ ಹಣ ಭರಿಸುತ್ತೇವೆ ಎನ್ನುತ್ತಾರೆ.

ಇಲ್ಲಿಯ ವ್ಯಾಪಾರಸ್ಥರ ಬಳಿ 400ರಿಂದ 500 ಕಾರ್ಮಿಕರು ಬೆಳಗಿನ 6 ಗಂಟೆಯಿಂದ ನಡುಗುವ ಚಳಿಯಲ್ಲಿ ಮಂಜುಗಡ್ಡೆ ಸಹಿತ ಮೀನುಗಳ ತುಂಬಿದ ಟ್ರೇಗಳನ್ನು ಗಾಡಿಯಿಂದ ಇಳಿಸುವುದು, ಒಂದು ಟ್ರೇದಿಂದ ಮತ್ತೊಂದು ಟ್ರೇಗಳಿಗೆ ಮೀನುಗಳನ್ನು ತುಂಬುವ ಕೆಲಸ ಮಾಡುತ್ತಿದ್ದು, ಎಂಥವರಲ್ಲೂ ನಡುಕ ಹುಟ್ಟಿಸುವಂತಿದೆ.

ನಿತ್ಯ ಇಲ್ಲಿ ಬೇರೆ ರಾಜ್ಯದಿಂದಲೂ ದೊಡ್ಡ ಕಂಟೇನರಗಳು ಮೀನು ಹೊತ್ತು ಬರುತ್ತವೆ. ಈ ಕಂಟೇನರ್ ಚಾಲಕ ಮತ್ತು ಸಹಾಯಕರು ಮಧ್ಯರಾತ್ರಿಯೇ ಬರುವುದರಿಂದ ಅವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆಯೇ ಇಲ್ಲ. ಹೊರ ಜಿಲ್ಲೆಯ ಮೀನು ವ್ಯಾಪಾರಸ್ಥರು ಇಲ್ಲಿಗೆ ಖರೀದಿಗೆ ಬರುತ್ತಾರೆ. ಬೆಳಗಿನ ಜಾವ ಮೀನು ಸವಾಲು ನಡೆಯುತ್ತಿದೆ. ನೂರಾರು ಜನರು ಸೇರುವ ಸ್ಥಳದಲ್ಲಿ ಸ್ವಚ್ಛತೆಯ ಕಾಳಜಿ ಇಲ್ಲದಾಗಿದೆ. ಈ ಸಂಬಂಧ ಇಲ್ಲಿಯ ಜನರು ಪಾಲಿಕೆ ನಿರ್ಲಕ್ಷ್ಯದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ದಶಕಗಳಿಂದ ಮಂಟೂರ ರಸ್ತೆಯಲ್ಲೇ ಮೀನು ವ್ಯಾಪಾರ ನಡೆಯುತ್ತಿತ್ತು. ಬೇರೆ ಮಾರುಕಟ್ಟೆಗಳಂತೆ ನಮಗೂ ಸರ್ಕಾರಿ ಜಾಗದಲ್ಲಿ ಮಾರುಕಟ್ಟೆ ಕಲ್ಪಿಸುವಂತೆ ಪಾಲಿಕೆ ಅಧಿಕಾರಿಗಳು ಹಾಗೂ ಶಾಸಕ ಪ್ರಸಾದ ಅಬ್ಬಯ್ಯನವರಿಗೆ ಹಲವಾರು ಬಾರಿ ಮನವಿ ಮಾಡಿದರೂ ನಮಗೆ ಯಾರೂ ಸ್ಪಂದಿಸಲಿಲ್ಲ ಎಂದು ಸಗಟು ಮೀನು ವ್ಯಾಪಾರಸ್ಥ ಮಹಮ್ಮದ ಯುಸೂಫ ಹೇಳಿದರು.

ಮಾರುಕಟ್ಟೆ ಮೊದಲು ಮಂಟೂರ ರಸ್ತೆಯಲ್ಲಿತ್ತು. 20 ದಿನಗಳ ಕೆಳಗೆ ಸ್ಥಳಾಂತರವಾಗಿದೆ. ನಾವು ಬಂದಾಗ ಸ್ಥಳಾಂತರ ಮಾಡಿಸುವುದಷ್ಟೇ ಇತ್ತು, ಮಾಡಿಸಿದ್ದೇವೆ. ಅವರು 2 ಎಕರೆ ಜಮೀನು ತೆಗೆದುಕೊಂಡಿದ್ದು, ಅಲ್ಲಿಗೆ ಸ್ಥಳಾಂತರ ಆಗಿದೆ. ವ್ಯಾಪಾರಸ್ಥರು ಮೀನು ಮಾರುಕಟ್ಟೆಗೆ ಜಾಗ ಕೇಳಿರುವುದರ ಕುರಿತು ನನಗೆ ಮಾಹಿತಿ ಇಲ್ಲ ಎಂದು ಮಹಾನಗರ ಪಾಲಿಕೆ ವಲಯ ಕಚೇರಿ 11ರ ಸಹಾಯಕ ಆಯುಕ್ತ ಜಿ. ಮನೋಜ ಹೇಳಿದರು.