ಸಾರಾಂಶ
ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ 79 ವರ್ಷ ಗತಿಸಿದರೂ ಅಥಣಿ ಪಟ್ಟಣದಲ್ಲಿ ಒಂದೂ ಸರ್ಕಾರಿ ಪ್ರೌಢಶಾಲೆ ಇಲ್ಲ ಎಂಬ ಅಪವಾದ ಈಗ ದೂರಾಗಿದ್ದು, ಪಟ್ಟಣದ 2 ಪ್ರಾಥಮಿಕ ಶಾಲೆಗಳು ಉನ್ನತೀಕರಿಸಿದ್ದರಿಂದ ಸರ್ಕಾರಿ ಪ್ರೌಢಶಾಲೆ ಭಾಗ್ಯ ಲಭಿಸಿದೆ.
ತಾಪಂ ಕಾರ್ಯಾಲಯದ ಹತ್ತಿರ ಇರುವ ವಿಕ್ರಂಪೂರ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಜಯಪುರ ರಸ್ತೆಯ ಎಪಿಎಂಸಿ ಕಾರ್ಯಾಲಯದ ಹಿಂಭಾಗದಲ್ಲಿರುವ ಗವಿಸಿದ್ದೇಶ್ವರ ಮಡ್ಡಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿದ್ದು, ಪ್ರಸಕ್ತ ವರ್ಷದಿಂದಲೇ ಜಾರಿಯಾಗಲಿದೆ.ರಾಮತೀರ್ಥ ಗ್ರಾಮದ ಸ.ಕ.ಹಿ.ಪ್ರಾ ಶಾಲೆ, ಅಡಹಳ್ಳಿ ಗ್ರಾಮದ ಸ.ಕ.ಹಿ.ಪ್ರಾ ಶಾಲೆ, ನಂದೇಶ್ವರ ಗ್ರಾಮದ ಸ.ಕ.ಹಿ.ಪ್ರಾ ಶಾಲೆ, ನಂದಗಾಂವ ಗ್ರಾಮದ ಸ.ಕ.ಹಿ.ಪ್ರಾ.ಶಾಲೆ, ಸುಟ್ಟಟ್ಟಿ ಫಾರ್ಮ್ ಸ.ಕ.ಹಿ.ಪ್ರಾ.ಶಾಲೆ, ಕವಟಕೊಪ್ಪ ಸ.ಕ.ಹಿ.ಪ್ರಾ.ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿ ಗ್ರಾಮೀಣ ಭಾಗದ ಮಕ್ಕಳಿಗೂ ಅನುಕೂಲ ಕಲ್ಪಿಸಲಾಗಿದೆ.ಮತಕ್ಷೇತ್ರದ ಜನರ ಮೆಚ್ಚುಗೆ:
ರಾಜ್ಯ ಸರ್ಕಾರ ಇತ್ತೀಚೆಗೆ ಸಿಎಸ್‌ಆರ್ ಅನುದಾನ, ದಾನಿಗಳ ಸಹಕಾರ, ರಾಜ್ಯ ಬಜೆಟ್‌ನ ಶೈಕ್ಷಣಿಕ ಅನುದಾನ ಹಾಗೂ ಸಮಗ್ರ ಶಿಕ್ಷಣ ಯೋಜನೆಯಡಿ ಸ್ಥಳೀಯ ಶಾಸಕರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗೆ ಸ್ಪಂದಿಸಿ ಹೊಸ ಪ್ರೌಢಶಾಲೆಗಳ ಮಂಜೂರಾತಿ ಬದಲಾಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳನ್ನೇ ಉನ್ನತೀಕರಿಸಿ ಪ್ರೌಢಶಾಲೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿದ್ದಾರೆ. ಈ ಯೋಜನೆಯಲ್ಲಿ ಅಥಣಿಯ ಎರಡು ಪ್ರಾಥಮಿಕ ಶಾಲೆಗಳು ಮತ್ತು ಗ್ರಾಮೀಣ ಭಾಗದ 6 ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು 8 ಶಾಲೆಗಳಿಗೆ ಪ್ರೌಢಶಾಲೆಯ ಸೌಭಾಗ್ಯ ದೊರಕಿವೆ. ಸರ್ಕಾರದ ಗಮನ ಸೆಳೆದಿದ್ದ ಕನ್ನಡಪ್ರಭಬೆಳಗಾವಿಯ ಅಧಿವೇಶನ ವೇಳೆ ಕನ್ನಡಪ್ರಭ ಈ ಕುರಿತಾದ ವರದಿಯನ್ನು ಪ್ರಕಟಿಸುವ ಮೂಲಕ ಬಡ ಮಕ್ಕಳ ಶೈಕ್ಷಣಿಕ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿತ್ತು. ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರು ಕೂಡ ಅನೇಕ ವರ್ಷಗಳಿಂದ ಹೊಸ ಸರ್ಕಾರಿ ಪ್ರೌಢಶಾಲೆಗಳ ಮಂಜೂರಾತಿ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿತ್ತು. ಇದರಿಂದಾಗಿ ಅನೇಕ ವರ್ಷಗಳಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಮಕ್ಕಳು ಸರ್ಕಾರಿ ಪ್ರೌಢಶಾಲೆ ಇಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ಶಾಲೆಗಳಲ್ಲಿ ಇಲ್ಲವೇ ಅನುದಾನಿತ ಪ್ರೌಢಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿತ್ತು.ಅಥಣಿಯಲ್ಲಿ ಒಂದೂ ಸರ್ಕಾರಿ ಪ್ರೌಢಶಾಲೆ ಇಲ್ಲ ಎಂಬ ಅಪವಾದ ಈಗ ದೂರವಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ 8 ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಮಂಜೂರು ಮಾಡಲಾಗಿದೆ. ಅಲ್ಲದೆ ತಾಲೂಕಿನ 11 ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ದ್ವಿಭಾಷೆ ನೀತಿ ಅನ್ವಯ ಕನ್ನಡ ಮತ್ತು ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ನನ್ನ ಸಣ್ಣ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಿ ಮಂಜೂರಾತಿ ನೀಡಿದಕ್ಕಾಗಿ ತಾಲೂಕಿನ ಜನತೆಯ ಹಾಗೂ ವಿದ್ಯಾರ್ಥಿಗಳ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.-ಲಕ್ಷ್ಮಣ ಸವದಿ, ಶಾಸಕರು ಅಥಣಿ.ಪಟ್ಟಣದಲ್ಲಿ ಒಂದು ಸರ್ಕಾರಿ ಪ್ರೌಢಶಾಲೆಯನ್ನು ಸ್ಥಾಪಿಸುವಂತೆ ಅನೇಕ ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಂತಾಗಿದೆ. ಅಥಣಿ ಮತಕ್ಷೇತ್ರದಲ್ಲಿ 8 ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೆ ಎರಿಸುವ ಕಾರ್ಯ ಸೇರಿದಂತೆ ಪಶು ವೇದಿಕೆ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ಕೇಂದ್ರೀಯ ಮಹಾವಿದ್ಯಾಲಯ, ಡಿಪ್ಲೋಮಾ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಮಹಾವಿದ್ಯಾಲಯ, ವಿವಿಧ ವಸತಿ ಶಾಲೆಗಳನ್ನು ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡು ಅವುಗಳ ಪ್ರಗತಿಗೆ ಶ್ರಮಿಸುವ ಮೂಲಕ ಅಥಣಿ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಪ್ರಯತ್ನಿಸುತ್ತಿರುವ ಶಾಸಕ ಲಕ್ಷ್ಮಣ ಸವದಿ ಅವರಿಗೆ ಅಭಿನಂದಸುತ್ತೇವೆ.
-ಸುರೇಶ ಚಿಕ್ಕಟ್ಟಿ, ಶಿಕ್ಷಣ ತಜ್ಞ, ಅಥಣಿ.
ಅಥಣಿ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಎಂಟು ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ ಪ್ರೌಢಶಾಲೆ ಸೌಲಭ್ಯ ನೀಡಲಾಗಿದೆ ಪ್ರಸಕ್ತ ವರ್ಷದಿಂದಲೇ ನಾಲ್ಕು ಶಾಲೆಗಳಲ್ಲಿ ಸರ್ಕಾರದ ಅನುದಾನದಲ್ಲಿ, ಇನ್ನುಳಿದ ನಾಲ್ಕು ಶಾಲೆಗಳಲ್ಲಿ ದಾನಿಗಳು ಸಹಕಾರದಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ತರಗತಿ ನಡೆಸಲಾಗುವುದು. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಬಹಳಷ್ಟು ಅನುಕೂಲವಾಗಿದೆ.
-ಎಂ.ಆರ್.ಮುಂಜೆ, ಕ್ಷೇತ್ರ ಶಿಕ್ಷಣಾಧಿಕಾರಿ, ಅಥಣಿ.