ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಾದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಾತಿ-ಧರ್ಮ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ರಾಜಕೀಯ ಮಾಡಲು ಅಮಾಯಕ ಯುವಕರನ್ನು ಬಲಿಪಶುಗಳನ್ನಾಗಿ ಮಾಡಬೇಡಿ ಎಂದು ಅಲ್ಪಸಂಖ್ಯಾತರ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಕಿಡಿಕಾರಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಬಗ್ಗೆ ಹಗುರವಾಗಿ ಬಾಯಿಗೆ ಬಂದಂತೆ ಮಾತನಾಡಿದರೆ ಇನ್ಮುಂದೆ ಸುಮ್ಮನಿರಲ್ಲ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯವರು ಶಾಸಕರನ್ನು ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಮುಂದಾಗುವ ಯಾವುದೇ ಸಮಸ್ಯೆಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ರಾಜಕೀಯವಾಗಿ ನಮ್ಮನ್ನು ಎದುರಿಸಿ ಅದರ ಬದಲಾಗಿ ಇಡೀ ಸಮುದಾಯ ದ್ವೇಷಿಸುವುದನ್ನು ಬಿಡಬೇಕು. ನೀನು ನನ್ನ ವಿರುದ್ಧ ಮಾತನಾಡು, ಅದನ್ನು ಬಿಟ್ಟು ಸಮಾಜಕ್ಕೆ ಮಾತನಾಡಿದರೆ ನಾವು ಸುಮ್ಮನಿರಲ್ಲ. ಇದೊಂದು ಕೊನೆ ಎಚ್ಚರಿಕೆ. ಹೀಗೆ ಮಾತನಾಡಿದರೆ ಮುಂದೆ ನಿನಗೆ ನಾವು ಏನು ಮಾಡುತ್ತೇವೆ ಎನ್ನುವುದನ್ನು ಅನುಭವಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಯತ್ನಾಳಗೆ ಎಚ್ಚರಿಕೆ ನೀಡಿ, ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆದರೆ ನೀವೆ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಸವಣ್ಣ ಲಿಂಗಾಯತರಾಗಿ ಧರ್ಮವನ್ನು ಸ್ಥಾಪಿಸಿದರು. ಆದರೆ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಬಂದವರು. ಅಂತಹ ಬಸವಣ್ಣನ ನಾಡಿನಲ್ಲಿ ಧರ್ಮದ ವಿಷ ಬೀಜ ಬಿತ್ತುವುದು ಏಕೆ? ರಾಜಕಾರಣ ಮಾಡಲು ಸಾಕಷ್ಟು ವಿಷಯಗಳಿವೆ. ನಮ್ಮ ಮೇಲೆ ವೈಯಕ್ತಿಕವಾಗಿ ಟೀಕೆ ಮಾಡಿ, ನಾವು ಸ್ವೀಕರಿಸುತ್ತೇವೆ. ಆದರೆ ಸಮುದಾಯದ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಅಸಂಬದ್ಧ ಹೇಳಿಕೆ ನೀಡಿರುವುದು ಎಷ್ಟು ಸರಿ? ಇಲ್ಲಿಯವರೆಗೆ ಯತ್ನಾಳ ಮೇಲೆ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಯತ್ನಾಳಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.
ತಲೆಯಿಲ್ಲದ ಯತ್ನಾಳ:೨೦೨೮ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ, ನಾನೇ ಸಿಎಂ, ನಾನು ಮುಖ್ಯಮಂತ್ರಿಯಾದರೆ ಸಾವಿರ ಜೆಸಿಬಿ ತರುತ್ತೇನೆ ಎಂದು ಶಾಸಕ ಯತ್ನಾಳ ಹೇಳುತ್ತಾರೆ. ಆದ್ರೆ ನಿಮ್ಮನ್ನೇ ಬಿಜೆಪಿಯಿಂದ ಕಿತ್ತು ಮನೆಬಿಟ್ಟು ಓಡಿಸಿದ್ದಾರೆ. ನೀವು ಯಾವ ಪಕ್ಷದಿಂದ ಮುಖ್ಯಮಂತ್ರಿಯಾಗುತ್ತಿರಿ? ಯಾವ ಪಕ್ಷದಿಂದ ಅಧಿಕಾರಕ್ಕೆ ಬರುತ್ತಿರಿ ಎನ್ನುವುದನ್ನು ತಲೆ ಇಲ್ಲದ ರೀತಿ ಮಾತನಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಪಾಲಿಕೆ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೊರ್ತಿ, ಕಾಂಗ್ರೆಸ್ ಮುಖಂಡ ಎಂ.ಸಿ.ಮುಲ್ಲಾ ಕೂಡ ಶಾಸಕ ಯತ್ನಾಳ ವಿರುದ್ಧ ಕಿಡಿಕಾರಿದರು.ಪತ್ರಿಕಾಗೋಷ್ಠಿಯಲ್ಲಿ ಫಯಾಜ್ ಕಲಾದಗಿ, ಕಲ್ಲಪ್ಪ ಪಾದಶೆಟ್ಟಿ, ಹಣಮಂತ ಸಾರವಾಡ, ನಸೀಮ ರೋಜಿನದಾರ ಮುಂತಾದವರು ಉಪಸ್ಥಿತರಿದ್ದರು.