ಸಾಮೂಹಿಕ ವಿವಾಹಗಳು ಪ್ರಗತಿಗೆ ಪೂರಕ

| Published : Aug 18 2025, 12:02 AM IST

ಸಾಮೂಹಿಕ ವಿವಾಹಗಳು ಪ್ರಗತಿಗೆ ಪೂರಕ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಅಲ್ಲ, ಭಾಗ್ಯವಂತರ ಮದುವೆಗಳು.

ಕನ್ನಡಪ್ರಭ ವಾರ್ತೆ ಇಂಡಿ

ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗುವ ಜತೆಗೆ ಪ್ರಗತಿಗೆ ಪೂರಕವಾಗುತ್ತದೆ. ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಅಲ್ಲ, ಭಾಗ್ಯವಂತರ ಮದುವೆಗಳು. ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಜಲದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಬಡವರ ಮದುವೆ ಎಂದು ಭಾವಿಸುವುದು ತಪ್ಪು. ಸಹಸ್ರಾರು ಭಕ್ತರ, ಮಠಾಧೀಶರ ಆಶೀರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ. ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು-ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ-ಶ್ರೀಮಂತ, ಮೇಲು-ಕೀಳೇನ್ನದೆ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯ ಮಾಡಬೇಕು. ಸಾಮಾಜಿಕ ಕಳಕಳಿಯೊಂದಿಗೆ ನಡೆಸುವ ಸಾಮೂಹಿಕ ವಿವಾಹ ಮಹೋತ್ಸವ ನಿಜಕ್ಕೂ ಶ್ಲಾಘನೀಯ. ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು, ಮದುವೆಯಾಗುವ ವಧು ವರರಿಗೆ ಹರ ಗುರು ಚರಮೂರ್ತಿಗಳು, ಸಹಸ್ರಾರು ಜನ ಅಕ್ಷತೆ ಹಾಕಿ ಹರಸುತ್ತಾರೆ. ಇಂತಹ ಭಾಗ್ಯ ಬೇರೆಡೆ ಸಿಗುವುದಿಲ್ಲ. ಹೀಗಾಗಿ ಇವು ಭಾಗ್ಯವಂತರ ಮದುವೆಗಳು ಎಂದು ಹೇಳಿದರು.

ಜಾತ್ರೆಗಳು ಮೋಜು, ಮಸ್ತಿಗಳಿಗೆ ಸೀಮಿತವಾಗದೇ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದರಿಂದ ಸಮಾಜಕ್ಕೆ ಒಳ್ಳೆಯದಾಗಿ ಜಾತ್ರೆಯೂ ಅರ್ಥಪೂರ್ಣವಾಗುತ್ತದೆ. ಇಂದು ಮಾವಿನಹಳಿ ಗ್ರಾಮದಲ್ಲಿ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪ ಆಗಬೇಕು. ದುಂದುವೆಚ್ಚದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದರಿಂದ ಬಡ ಹಾಗೂ ಮಧ್ಯಮ ವರ್ಗದವರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಅವರ ಆರ್ಥಿಕಮಟ್ಟ ಸುಧಾರಣೆಗೆ ಇಂತಹ ಸಾಮೂಹಿಕ ವಿವಾಹಗಳು ಅಗತ್ಯ ಎಂದರು.

ಶ್ರೀ ಜಲದೇಶ್ವರ ಗದಗಿ ಪೂಜಾರಿಗಳಾದ ಆದಪ್ಪ ಚೌಡಪ್ಪ ಪೂಜಾರಿ, ಗುರಪ್ಪ ಮಠಪತಿ , ಮಲಕಪ್ಪ ಜಂಗಲಗಿ, ಗುರಪ್ಪ ಹಕ್ಕಿ, ಗಂಗಾಧರಗೌಡ ಪಾಟೀಲ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿಬಾಯಿ ದಶವಂತ, ಶಾಂತಪ್ಪ ಹೊಗಾರ,ಗ್ರಾಮಸ್ಥರಾದ ರಾಹುಲ, ವಿರುಪಕ್ಷಿ ಗೌಡ , ಮಹಾದೇವ ಚಾಳಿಕಾರ, ಅಣ್ಣಪ್ಪ ಹಕ್ಕಿ, ಗಜಾನಂದ ಬಿರಾದಾರ, ಸೋಮು ಆಳೂರು, ಶರಣಪ್ಪ ಅಳ್ಳಗಿ ಮೊದಲಾದವರಿದ್ದರು.