ಸಾರಾಂಶ
ಸಾವಳಗಿ ಗ್ರಾಮದ ಮಾಳಿ ತೋಟದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟು ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಸಾವಳಗಿ
ಗ್ರಾಮದ ಮಾಳಿ ತೋಟದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟು ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ, ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೊಲದಲ್ಲಿ ಚಿರತೆಯ ಹೆಜ್ಜೆ ಗುರುತು, ಆಕಳ ಮುಖಕ್ಕೆ ಪರಚಿ ಗಾಯಗೊಳಿಸಿರುವುದನ್ನು ವೀಕ್ಷಿಸಿತು.ಭಾನುವಾರ ತಹಸೀಲ್ದಾರ ಅನೀಲ ಬಡಿಗೇರ ಸ್ಥಳಕ್ಕೆ ಭೇಟಿ ನೀಡಿದರು. ದನ-ಕರುಗಳು ಕಿರುಚುವ ಶಬ್ಧ ಕೇಳಿ ಮನೆಯಿಂದ ಹೊರ ಬಂದು ನೋಡಿದಾಗ ಅಚ್ಚರಿಯಾಯಿತು. ತಕ್ಷಣ ಕೂಗಾಟ ಆರಂಭಿಸಿದೆವು. ಭಯಗೊಂಡ ಚಿರತೆ ಸ್ಥಳದಿಂದ ಪರಾರಿಯಾಗಿದೆ ಎಂದು ಗ್ರಾಮಸ್ಥರು ವಿವರಿಸಿದರು.
ಭಯಪಡುವ ಅಗತ್ಯವಿಲ್ಲ. ತಾಲೂಕಾಡಳಿತ ಹಾಗೂ ಅರಣ್ಯ ಇಲಾಖೆ ನಿಮ್ಮ ಜೊತೆಗೆ ಇದ್ದೇವೆ. ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡಬೇಡಿ, ಮನೆಯಲ್ಲಿರುವ ದನ-ಕರು, ಆಡುಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಬೇಕು ಎಂದು ತಹಸೀಲ್ದಾರರು ತಿಳಿಸಿದರು.