ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಆರ್ಥಿಕ ಸಹಕಾರದಿಂದಲೇ ಯಾವುದಾದರೂ ಕೆಲಸ ಮಾಡಲು ಸಾಧ್ಯ. ಸಹಕಾರಿ ಕ್ಷೇತ್ರದಿಂದ ಆ ಭಾಗದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣಲು ಸಾಧ್ಯ ಎನ್ನುವುದಕ್ಕೆ ಬೀಳಗಿ ತಾಲೂಕಿನ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಾಕ್ಷಿಯಾಗಿವೆ ಎಂದು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರು, ಮಾಜಿ ಸಚಿವರಾದ ಎಸ್.ಆರ್. ಪಾಟೀಲ ತಿಳಿಸಿದರು.ಇಲ್ಲಿನ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ನೂತನ ಸಭಾಭವನದಲ್ಲಿ ಬ್ಯಾಂಕಿನ ೨೮ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗ್ರಾಹಕರು, ಸದಸ್ಯರ ಪ್ರೀತಿ ವಿಶ್ವಾಸದಿಂದ ಎಲ್ಲಾ ಜನರಿಗೂ ಆರ್ಥಿಕ ಅನುಕೂಲತೆ ನೀಡುತ್ತಿರುವ ಬ್ಯಾಂಕು, ಹಲವಾರು ಜನಪರ ಯೋಜನೆಗಳನ್ನು ಜನರಿಗೆ ನೀಡಿದೆ ಎಂದರು.ಬ್ಯಾಂಕಿಗೆ ₹3.05 ಕೋಟಿ ಲಾಭ:ಸ್ಥಳೀಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಸಕ್ತ ಮಾರ್ಚ್ ಕೊನೆಯಲ್ಲಿ ₹3.05 ಕೋಟಿ ಲಾಭ ಗಳಿಸಿ ಪ್ರಗತಿಯತ್ತ ಸಾಗಿದ್ದು, 16,306 ಸದಸ್ಯರನ್ನು ಹೊಂದಿದ್ದು, ₹21.07 ಕೋಟಿ ಷೇರು ಬಂಡವಾಳ, ₹757.13 ಕೋಟಿ ಠೇವು, ₹881.84 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹474.44 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 18 ಶಾಖೆ ಹೊಂದಿದ್ದು, ಎಲ್ಲ ಶಾಖೆಗಳು ಉತ್ತಮ ಲಾಭದೊಂದಿಗೆ ಪ್ರಗತಿಯಲ್ಲಿವೆ ಎಂದು ಎಸ್.ಆರ್. ಪಾಟೀಲ ತಿಳಿಸಿದರು.
ಆಡಳಿತಾಧಿಕಾರಿ ಐ.ವಿ. ಬಸರಕೋಡ ಬ್ಯಾಂಕಿನ ಪ್ರಗತಿ ಕುರಿತು ಮತ್ತು ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬನ್ನಟ್ಟಿ ಅಢಾವೆ ಪತ್ರಿಕೆ ಮತ್ತು ವಾರ್ಷಿಕ ವರದಿ ಓದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಎಂ.ಎನ್. ಪಾಟೀಲ ವಂದಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್. ಆರ್. ಮೇಲ್ನಾಡನಿರ್ದೇಶಕರಾದ ಎಚ್.ಎ.ಕೊಪ್ಪಳ, ಕೆ. ಎಸ್. ಪತ್ರಿ , ಶ್ರೀಮತಿ ವಿ.ಪಿ.ಆಯಾಚಿತ, ಪಿ. ಬಿ.ಗುರಾಣಿ, ಎ.ಎಚ್. ಬೀಳಗಿ, ಜಿ. ಎಸ್. ಕೆರೂರ, ಬಿ.ಎಸ್.ಮೊಖಾಶಿ, ಎಂ.ಎಲ್. ಕೆಂಪಲಿಂಗಣ್ಣವರ, ಡಿ.ಬಿ. ಮಮದಾಪುರ, ರಾಜಣ್ಣ ಬಾರಕೇರ, ಎಸ್. ಕೆ. ಯಡಹಳ್ಳಿ ಎಸ್.ಎ.ನೀರಲಗಿ, ಬಿ.ಎನ್.ನಾಗನಗೌಡ್ರ, ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ ಇದ್ದರು. ಗುರುರಾಜ ಲೂತಿ ನಿರೂಪಿಸಿದರು.
ಎಸ್.ಆರ್.ಪಾಟೀಲರಿಗೆ ಸನ್ಮಾನ: ಬಸವಶ್ರೀ ಪ್ರಶಸ್ತಿಗೆ ಭಾಜನರಾದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ಪಾಟೀಲ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರು ಗೌರವಿಸಿದರು. ಇದೇ ವೇಳೆ ಉತ್ತಮ ಗ್ರಾಹಕರು, ಸದಸ್ಯರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.