ಪಟ್ಟಣದ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ತೋರಿದ್ರೆ ಶಿಸ್ತು ಕ್ರಮ

| Published : Aug 18 2025, 12:02 AM IST

ಪಟ್ಟಣದ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ತೋರಿದ್ರೆ ಶಿಸ್ತು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛತೆ ಕಡೆ ಗಂಭೀರವಾಗಿ ಗಮನ ಹರಿಸಿ ಪಟ್ಟಣದ ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು. ಫಾಗಿಂಗ್ ಕಾರ್ಯಗಳನ್ನು ನಿರಂತರ ಮಾಡಬೇಕು.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ಸದಸ್ಯರೂ ಒಂದೇ ಪಕ್ಷದವರು ಆಗಿರುವುದರಿಂದ್ದ ಹೊಂದಾಣಿಕೆಯಿಂದ ಆಡಳಿತ ನಡೆಸಿ ಜನರ ವಿಶ್ವಾಸ ಗೆಲ್ಲಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸ್ವಚ್ಛತೆ ಕಡೆ ಗಂಭೀರವಾಗಿ ಗಮನ ಹರಿಸಿ ಪಟ್ಟಣದ ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು. ಫಾಗಿಂಗ್ ಕಾರ್ಯಗಳನ್ನು ನಿರಂತರ ಮಾಡಬೇಕು. ಸ್ವಚ್ಛತೆಗೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

ಪಟ್ಟಣದ ಗಾರ್ಡನ್ ಜಾಗಗಳನ್ನು ಅಕ್ರಮವಾಗಿ ಕಬಳಿಸಿರುವ ಕುರಿತು ಬಂದ ದೂರುಗಳನ್ನು ಉಲ್ಲೇಖಿಸಿ, ಅಂತಹ ಕಬಳಿಕೆದಾರರಿಗೆ ನೋಟಿಸ್ ನೀಡಿ ತೆರವು ಕಾರ್ಯಾಚರಣೆ ನಡೆಸಬೇಕು. ಅವರು ಸುಪ್ರೀಂ ಕೋರ್ಟ್‌ಗೆ ಹೋದರೂ ಯಾವುದೇ ತೊಂದರೆ ಇಲ್ಲ. ಗಾರ್ಡನ್ ಜಾಗವನ್ನು ಅಕ್ರಮಣ ಮಾಡಿಕೊಂಡವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಿ ಎಂದು ಸ್ಪಷ್ಟ ಸಂದೇಶ ನೀಡಿದರು.

ಕಾಮಗಾರಿಗಳ ಕ್ರೀಯಾಯೋಜನೆ ಪರಿಶೀಲಿಸುವ ವೇಳೆ, ಬಲದಿನ್ನಿ ರಸ್ತೆಯ ಸೀಡಿ ಸಮೀಪ ನಡೆಯುತ್ತಿರುವ ಸಿ.ಸಿ.ರಸ್ತೆ ಕಾಮಗಾರಿಯ ಅಂದಾಜು ಮೊತ್ತ ₹3 ಲಕ್ಷ ಎಂದು ತಿಳಿದುಬಂದಿದೆ. ಗುತ್ತಿಗೆದಾರ ₹1.17 ಲಕ್ಷ ಬಿಲ್‌ ಹಾಕಿ ಕೆಲಸ ಪಡೆದಿರುವುದು ಗಮನಕ್ಕೆ ಬಂದಿದೆ. ₹2.80 ಲಕ್ಷದಲ್ಲಿ ಜಿಎಸ್‌ಟಿ ಸೇರಿ ಇತರೆ ಖರ್ಚು ತೆಗೆದರೆ ಉಳಿದ ಇಷ್ಟು ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಕೆಲಸ ಸಾಧ್ಯವೇ? ಈ ಕಾಮಗಾರಿಯ ಮೇಲೆ ನಿಗಾ ಇಡಿ, ಸಮರ್ಪಕವಾಗಿ ಕಾರ್ಯಗತಗೊಳಿಸಿ ಎಂದು ಜೆಇಗೆ ಸೂಚಿಸಿದರು. ಪ್ಯಾಕೇಜ್ ಟೆಂಡರ್‌ಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿ, ಕನಿಷ್ಟ ₹5 ಲಕ್ಷ ಮತ್ತು ₹10 ಲಕ್ಷ ಪ್ಯಾಕೇಜ್ ಟೆಂಡರ್ ಮಾಡಿ, ಅಳವಡಿಕೆ ಸುಗಮವಾಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸದಸ್ಯರು ಪಟ್ಟಣದ ಕುಡಿಯುವ ನೀರಿನ ಹಂಚಿಕೆ ಅಸಮರ್ಪಕವಾಗಿರುವುದು, ರಸ್ತೆಗಳ ಗುಣಮಟ್ಟ ಕುಸಿದಿರುವುದು ಹಾಗೂ ಬೀದಿ ದೀಪಗಳು ಕಾರ್ಯನಿರ್ವಹಿಸದಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು. ಪ್ರತಿಯೊಂದು ಸಮಸ್ಯೆಯ ಮೇಲೂ ತಕ್ಷಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್ಲ, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯರಾದ ಪೃಥ್ವಿರಾಜ್ ನಾಡಗೌಡ, ಜಗದೀಶ ಡೇರೆದ, ಅಂಬ್ರಪ್ಪ ಸೀರಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಬಸೀರಾ ಬೇಗಂ ಮೂಲಿಮನಿ, ಲಲಿತಾ ಗೊರಬಾಳ, ರಾಜಬಿ ನಾಡದಾಳ, ಸಂಗಪ್ಪ ಬಾರಡ್ಡಿ, ನಾಮನಿರ್ದೇಶನ ಸದಸ್ಯ ಸಂಗಮೇಶ ರುದ್ರಗಂಟಿ, ಸಿಬ್ಬಂದಿ ಉಪಸ್ಥಿತರಿದ್ದರು.