ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ

| Published : Aug 18 2025, 12:02 AM IST

ಸಾರಾಂಶ

ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ಮತಗಳ್ಳತನಕ್ಕೆ ಚುನಾವಣಾ ಆಯೋಗವೇ ನೇರಹೊಣೆ ಹೊತ್ತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಡಾ.ಅಂಬೇಡ್ಕರ್‌ ನೀಡಿದ ಮತದಾನದ ಹಕ್ಕನ್ನು ರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ. ಪ್ರಜಾಪ್ರಭುತ್ವ ಉಳಿಸಲು ನಮ್ಮ ಹೋರಾಟ ಅನಿವಾರ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.

ಪಟ್ಟಣದ ಎನ್ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಚುನಾವಣೆ ಆಯೋಗದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ನಮ್ಮ ಮತಕ್ಷೇತ್ರದಲ್ಲಿಯೂ ಕೂಡ ಮತಗಳ್ಳತನವಾಗಿವೆ. ಅಲ್ಪಸಂಖ್ಯಾತರ ಮತಗಳ್ಳನ್ನೇ ತೆಗೆದು ಹಾಕಿದ್ದಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧಿಕ್ಕರಿಸಿ ಅಪಮಾನ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ಮತಗಳ್ಳತನಕ್ಕೆ ಚುನಾವಣಾ ಆಯೋಗವೇ ನೇರಹೊಣೆ ಹೊತ್ತುಕೊಳ್ಳಬೇಕು.

ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಸಮಗ್ರ ತನಿಖೆಯಾಗುವರೆಗೂ ಮುಂದುವರಿಯಲಿದೆ. ನಿಜವಾದ ಯಾವೊಬ್ಬ ಮತದಾರನು ಮತ ಕಳೆದುಕೊಳ್ಳದೇ ಎಲ್ಲರೂ ಮತದಾನ ಹಕ್ಕು ಪಡೆದುಕೊಳ್ಳುವಂತಾಗಬೇಕು. ಅಲ್ಲಿಯವರೆಗೆ ನಾಯಕ ರಾಹುಲ್‌ ಗಾಂಧಿ ಹಾಗೂ ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನ್ಯಾಯಕ್ಕಾಗಿ ಹೋರಾಟ ನಿರಂತರವಾಗಿತ್ತದೆ ಎಂದರು.

ರಾಜ್ಯ ಎನ್ಎಸ್‌ಯುಐನ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಕಾಂಗ್ರೆಸ್ ಮುಖಂಡ ಪಿಂಟು ಸಾಲಿಮನಿ ಮಾತನಾಡಿ, ಬಿಜೆಪಿಯು ದೇಶದಲ್ಲಿನ ಪವಿತ್ರ ಮತದಾನ ವ್ಯವಸ್ಥೆ ಹಾಳು ಮಾಡಿ ಅಧಿಕಾರಕ್ಕೆ ಬಂದಿದೆ. ಬೇರೆ ಬೇರೆ ಕಳ್ಳತನ ಮಾಡುವುದನ್ನು ಕಂಡಿದ್ದೇವೆ. ಆದರೆ ಮತಗಳನ್ನೂ ಕಳವು ಮಾಡಿ ಅದರ ಶ್ರೇಷ್ಠತೆಗೆ ಕಳಂಕ ತಂದಿರುವುದ್ದನ್ನು ದೇಶ ಎಂದೂ ಕಂಡಿದ್ದಿಲ್ಲ. ಬೇರೆ ಕಳ್ಳರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಮತಗಳ್ಳರು ರಾಜಾರೋಷವಾಗಿ ಅಧಿಕಾರ ನಡೆಸುತ್ತಿದ್ದು, ತಕ್ಷಣ ಅಧಿಕಾರದಿಂದ ಕೆಳಗಿಳಿಯಲಿ ಎಂದು ಒತ್ತಾಯಿಸಿದರು.

ಇದೇ ವೇಳೆ ಮತಗಳ್ಳತನ ವಿರುದ್ಧ ಜಾಗೃತಿ ಮೂಡಿಸಲು ಸಾರ್ವಜನಿಕ ಸ್ಥಳಗಳ ಗೋಡೆ ಹಾಗೂ ವಾಹನಗಳಿಗೆ ಪೋಸ್ಟರ್ ಹಾಗೂ ಭಿತ್ತಿಪತ್ರ ಅಂಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಮುದ್ದೇಬಿಹಾಳ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್ ಇಲಿಯಾಸ್ ಢವಳಗಿ, ವಿಜಾಪುರ ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಫೀಕ್ ಶಿರೋಳ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಳ , ಆಸಿಫ್ ಬಿಳಕರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಶಳ್ಳಗಿ, ಸಿಕಂದರ್ ಜಾನ್ವೇಕರ್, ರಾಜು ರಾಯಗೂಂಡ, ಸಮೀರ್ ದ್ರಾಕ್ಷಿ, ಶರಣು ಚಲವಾದಿ, ಅಬೂಬಕ್ಕರ್ ಹಡಗಲಿ, ರಂಜಾನ್ ನದಾಫ, ಸಂಗಮೇಶ ಚಲವಾದಿ, ತೌಸಿಫ್ ನಾಯ್ಕೋಡಿ, ಜಾಕಿರ್ ಮೂಲಮನಿ, ಗುರು ಬಿರಾದಾರ್, ಕಮಲಾ ಭಜಂತ್ರಿ, ಮಹಬುಬಿ ಭಗವಾನ್, ಶಿವಲಿಲಾ ಬಿರಾದಾರ್, ನೀಲಮ್ಮ ಚಲವಾದಿ ಹಾಗೂ ಹಲವರಿದ್ದರು.