ಸಾರಾಂಶ
ಹಾವೇರಿ: ಹುಕ್ಕೇರಿಮಠದ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಲು ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಮಾಡಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಹುಕ್ಕೇರಿಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಒಬ್ಬ ವ್ಯಕ್ತಿಗೆ, ಒಂದು ಸಂಸ್ಥೆಗೆ ನೂರು ವರ್ಷ ಆಗುವುದು ಮುಖ್ಯವಲ್ಲ. ಒಂದು ಪರಂಪರೆಗೆ ನೂರು ವರ್ಷ ಆಗುವುದು ಬಹಳ ಮುಖ್ಯ. ನಮ್ಮ ಮಕ್ಕಳೆ ನಮ್ಮ ಮಾತು ಕೇಳುವುದಿಲ್ಲ. ಅಂತಹದರಲ್ಲಿ ಒಂದು ಸಮಾಜದಲ್ಲಿ ಜಾಗೃತಿ ಮೂಡಿಸಿ ಒಂದು ಪರಂಪರೆ ಕಟ್ಟುವುದು ತಪಸ್ಸು ಆಗಿದೆ. ಒಂದು ಪ್ರಕ್ರಿಯೆ ಲಕ್ಷಗಟ್ಟಲೆ ಜನರನ್ನು ಒಗ್ಗೂಡಿಸುವ ಕೆಲಸವನ್ನು ಹುಕ್ಕೇರಿಮಠ ಮಾಡಿದೆ ಎಂದರು.ಶ್ರೀಮಠದ ದಿವ್ಯ ಪರಂಪರೆ ನಡೆದು ಬಂದ ದಾರಿಯನ್ನು ಇವತ್ತಿನ ಪೀಳಿಗೆಗೆ ತಿಳಿಸುವುದು. ಮುಂದಿನ ದಿನಗಳಲ್ಲಿ ನಮ್ಮ ಪೂರ್ವಜರು ನಮ್ಮಿಂದ ಏನು ಬಯಸಿದ್ದರು, ಅದನ್ನು ಮುಂದಿನ ಪೀಳಿಗೆಗೆ ತಿಳಿಸಲು ಈ ಆಚರಣೆ ಅಗತ್ಯವಿದೆ. ಶ್ರೀಮಠದ ಭಕ್ತರು ಹಾವೇರಿ, ಗದಗ, ಧಾರವಾಡ, ದಾವಣಗೆರೆ ಸೇರಿದಂತೆ ಎಲ್ಲ ಕಡೆ ಇದ್ದಾರೆ. ಈ ಆಚರಣೆಗೆ ಹಾವೇರಿಗೆ ಸೀಮಿತ ಆಗಬಾರದು, ಈ ಮಠದ ಭಕ್ತರು ಎಲ್ಲಿದ್ದಾರೆ ಅವರನ್ನು ಈ ಸಮಾವೇಶದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗತವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕು ಎಂದರು.ಮುಂಬರುವ ದಿನಗಳಲ್ಲಿ ಕರ್ನಾಟಕದ ವೀರಶೈವ ಲಿಂಗಾಯತ ಪರಂಪರೆಯಲ್ಲಿ ಹುಕ್ಕೇರಿಮಠ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದೊಡ್ಡ ನಾಯಕತ್ವ ಶ್ರೀಮಠಕ್ಕೆ ಬರುತ್ತದೆ. ದೊಡ್ಡ ಚಳವಳಿಯ ಮೂಲಕ ಬದಲಾವಣೆ ತರುವ ಕೇಂದ್ರ ಈ ಮಠ ಆಗಲಿದೆ. ನಮ್ಮ ಹಿರಿಯ ಗುರುಗಳ ಸಾಧನೆ ಮತ್ತು ಆಶೀರ್ವಾದ ಎರಡೂ ದೊಡ್ಡದಿದೆ. ಇವತ್ತಿನ ಗುರುಗಳಿಗೆ ಇರುವ ಶಾಂತಿ, ಸಂಯಮ, ಗಾಂಭಿರ್ಯತೆ ಎಲ್ಲಿಯೂ ಕಾಣುವುದಿಲ್ಲ. ನಾವು ಉತ್ತರ ಭಾರತಕ್ಕೆ ಹೋದಾಗ ಯಾವುದೊ ಸ್ವಾಮೀಜಿ ಕಾಲಿನಿಂದ ಒದ್ದಾಗ ಒದಿಸಿಕೊಂಡು ಬರುವ ಮೂಢನಂಬಿಕೆಗೆ ಬಲಿಯಾಗದೇ ನಮ್ಮ ಸ್ವಾಮೀಜಿ ಪರಂಪರೆಯ ಪೀಠಾಧ್ಯಕ್ಷರು ಹೊಸ ಪರಂಪರೆ ಹುಟ್ಟು ಹಾಕುವ ಶಕ್ತಿ ಇದೆ ಎನ್ನುವುದನ್ನು ಅರಿತರೆ ನಾವು ಎಲ್ಲಿಯೂ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿ ನಡೆಯುವ ಪುರಾಣ ನಿರಂತರ ನಡೆಯಲಿ. ಐದು ದಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಶ್ರೀಮಠದ ವಿಚಾರಧಾರೆಯ ಬಗ್ಗೆ ಒಂದು ತಾಸು ಚರ್ಚೆ ನಡೆಯಬೇಕು. ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆಯುವ ಕುರಿತು ಚರ್ಚಿಸಿ ತೀರ್ಮಾನ ಮಾಡೋಣ. ಇದರಲ್ಲಿ ಯುವಕರನ್ನು ಹೆಚ್ಚು ಸಕ್ರೀಯಗೊಳಿಸಬೇಕು. ಎಂಜಿನಿಯರ್ ಮತ್ತು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಮಾಡಿಸಿದರೆ ಅನುಕೂಲ, ನನಗೆ ವಹಿಸುವ ಕೆಲಸವನ್ನು ಮಾಡುತ್ತೇನೆ. ಹಾವೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು. ಇದರಲ್ಲಿ ರೈತರು, ವ್ಯಾಪಾರಸ್ಥರು ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡಬೇಕು. ಒಕ್ಕಟ್ಟಿನಿಂದ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ, ನಗರಸಭೆಯ ಅಧ್ಯಕ್ಷೆ ಶಶಿಕಲಾ ಮಾಳಗಿ, ಮುಖಂಡರಾದ ಸಂಜೀವಕುಮಾರ ನೀರಲಗಿ, ಜಾತ್ರಾ ಕಮಿಟಿಯ ಅಧ್ಯಕ್ಷ ರಾಜಣ್ಣ ಮಾಗನೂರ, ಶಿವರಾಜ ಅಗಡಿ, ಮಹೇಶ ಚಿನ್ನಿಕಟ್ಟಿ, ಗಿರೀಶ ತುಪ್ಪದ, ಸಂಪತ್ ಜೈನ್, ಜಗದೀಶ ತುಪ್ಪದ ಪ್ರಮುಖರು ಪಾಲ್ಗೊಂಡಿದ್ದರು. ಅರಿವಿನ ಬೆಳಕು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಬೇಕು. ಅಂತಹ ಅರಿವಿನ ಸನ್ಮಾರ್ಗವನ್ನು ಹುಕ್ಕೇರಿಮಠ ಸದಾ ತೋರುತ್ತಿದೆ. ಶ್ರೀಮಠದ ಲಿಂಗೈಕ್ಯ ಉಭಯ ಶ್ರೀಗಳ ಆಶೀರ್ವಾದವೇ ನನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದೆ. ಸದಾಶಿವ ಶ್ರೀಗಳು ಸಹ ಲಿಂ.ಉಭಯ ಶ್ರೀಗಳ ಸನ್ಮಾರ್ಗದಲ್ಲಿಯೇ ಶ್ರೀಮಠವನ್ನು ಮುನ್ನಡೆಸುತ್ತಿದ್ದು, ಈ ಬಾರಿ ಹುಕ್ಕೇರಿಮಠದ ಜಾತ್ರಾಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ
ಹೇಳಿದರು.