ಸಾರಾಂಶ
ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ಮಾಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದೆ. ಅದರಲ್ಲೂ ಭೂಮಿ ಖರೀದಿಗೆ ಸರ್ಕಾರದಿಂದ ಅನುದಾನ ಕೊರತೆಯಿರುವ ಕಾರಣಕ್ಕೆ ಬಹಳಷ್ಟು ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗಿಲ್ಲ.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಗ್ರಾಮಸ್ಥರು ಸರ್ಕಾರಕ್ಕೆ ಎರಡು ಎಕರೆ ಜಮೀನು ಒದಗಿಸಿಕೊಟ್ಟಲ್ಲಿ ಮತ್ತೂರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ವನ್ನು ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.ವಿವೇಕ ಯೋಜನೆಯಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಗೂ ಸರ್ಕಾರಿ ಉರ್ದು ಶಾಲೆಯಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಗ್ರಾಪಂ ಕಾರ್ಯಾಲಯದ ವತಿಯಿಂದ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ಮಾಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದೆ. ಅದರಲ್ಲೂ ಭೂಮಿ ಖರೀದಿಗೆ ಸರ್ಕಾರದಿಂದ ಅನುದಾನ ಕೊರತೆಯಿರುವ ಕಾರಣಕ್ಕೆ ಬಹಳಷ್ಟು ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲರೂ ಮಾತನಾಡಿಕೊಂಡು ಗ್ರಾಮಕ್ಕೆ ಸಮೀಪವಿರುವಂತೆ 2 ಎಕರೆ ಜಾಗವನ್ನು ಒದಗಿಸಿದಲ್ಲಿ ನಿಶ್ವಿತವಾಗಿಯೂ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದರು.ಭವಿಷ್ಯದತ್ತ ಗಮನಹರಿಸಬೇಕು: ವಿವೇಕ ಯೋಜನೆಯಡಿ ಮಂಜೂರಾದ ಕೊಠಡಿಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಸಮರ್ಪಿಸುತ್ತಿದ್ದೇನೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಹಿನ್ನೆಲೆಯಲ್ಲಿ ಸರ್ಕಾರವೂ ಸಹ ಉಚಿತ ಶಿಕ್ಷಣದೊಂದಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಗ್ರಾಮದ ಜನರು ಹಾಗೂ ಶಾಲಾ ಮಕ್ಕಳಿಗಾಗಿ ₹8 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಅನಗತ್ಯ ಕೆಲಸಗಳಿಗೆ ಬಳಕೆ ಮಾಡದೇ ಕೇವಲ ಕುಡಿಯುವ ನೀರಿಗಾಗಿ ಘಟಕವನ್ನು ಬಳಕೆ ಮಾಡಿಕೊಳ್ಳಬೇಕು ಮತ್ತು ಗ್ರಾಪಂ ಸಿಬ್ಬಂದಿ ಸುಸಜ್ಜಿತ ನಿರ್ವಹಣೆಯೊಂದಿಗೆ ಘಟಕದ ಸುತ್ತಲೂ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಖೋಖೋ ಕ್ರೀಡಾಪಟು ಲಕ್ಷ್ಮೀ ಕಾಂತೇಶ ಶಿಂಗ್ರಿ ಅವರನ್ನು ಶಾಸಕ ಬಸವರಾಜ ಶಿವಣ್ಣನವರ ಸನ್ಮಾನಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಗ್ರಾಪಂ ಅಧ್ಯಕ್ಷೆ ಕುಸುಮಾ ಗಿಡ್ಡೇರ, ಉಪಾಧ್ಯಕ್ಷೆ ರೇಣುಕಾ ಈಳಿಗೇರ, ಸದಸ್ಯರಾದ ಕರಿಯಪ್ಪ ಹೊಸಳ್ಳಿ, ರೇಣುಕಮ್ಮ ಹರಿಜನ, ಭೋಜಕುಮಾರ ಹಿರೇಮಠ, ಮಂಜಪ್ಪ ಹೊಸಳ್ಳಿ, ಯಂಕನ ಗೌಡ ಪಾಟೀಲ, ಸುಮಿತ್ರಾ ಹಡಪದ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಾಲತೇಶ ಹೊಸಳ್ಳಿ, ಪಿಡಿಓ ಲತಾ ತಬರಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಕೋಡದ, ಮುಖಂಡರಾದ ರಮೇಶ್ ಸುತ್ತಕೋಟಿ, ಈರಣ್ಣ ಮಲ್ಲಾಡದ, ಹನುಮಂತಪ್ಪ ಇಮ್ಮಡಿ, ಇಂಜಿನೀಯರ್ ಸುರೇಶ ಬೇಡರ, ವೈ.ಕೆ. ಮಟಗಾರ, ಗುತ್ತಿಗೆದಾರ ಮನೋಜ್ ಪೂಜಾರ ಸೇರಿದಂತೆ ಇತರರಿದ್ದರು. ಮುಖ್ಯಶಿಕ್ಷಕ ವೈ.ಬಿ. ಹುಚ್ಚಣ್ಣನವರ ನಿರೂಪಿಸಿದರು. ಮಂಜುನಾಥ ಚೂರಿ ಸ್ವಾಗತಿಸಿದರು. ಡಿ.ಕೆ. ಜೋಶಿ ವಂದಿಸಿದರು.