ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ವ್ಯರ್ಥವಾಗದು: ಸಾಹಿತಿ ಸುಮಾ ರಮೇಶ್

| Published : Apr 25 2024, 01:01 AM IST

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ವ್ಯರ್ಥವಾಗದು: ಸಾಹಿತಿ ಸುಮಾ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ಕಡಿಮೆಯೇ. ಭಾರತದ ಭವ್ಯ ಪ್ರಜೆಗಳಾಗುವ ಇವರಲ್ಲಿ ಉತ್ತಮ ಸಂಸ್ಕಾರ ಬಿತ್ತುವುದು ಎಲ್ಲರ ಹೊಣೆ ಎಂದು ಸಾಹಿತಿ ಸುಮಾ ರಮೇಶ್ ಅಭಿಪ್ರಾಯಪಟ್ಟರು. ಹಾಸನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮಟದಲ್ಲಿ ಮಾತನಾಡಿದರು.

ಉಚಿತ ಕಥಾ ಕಮ್ಮಟ

ಕನ್ನಡಪ್ರಭ ವಾರ್ತೆ ಹಾಸನ

ದೇವನೂರು ಮಹದೇವ ಅವರ ನುಡಿಯಂತೆ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದೂ ವ್ಯರ್ಥವಲ್ಲ. ಮಕ್ಕಳಿಗಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ಕಡಿಮೆಯೇ. ಭಾರತದ ಭವ್ಯ ಪ್ರಜೆಗಳಾಗುವ ಇವರಲ್ಲಿ ಉತ್ತಮ ಸಂಸ್ಕಾರ ಬಿತ್ತುವುದು ಎಲ್ಲರ ಹೊಣೆ ಎಂದು ಸಾಹಿತಿ ಸುಮಾ ರಮೇಶ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ ತಾಲೂಕು ಘಟಕದ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ಸಮುದಾಯ ಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮದಲ್ಲಿ ಮಾತನಾಡಿ, ‘ಶ್ರೇಷ್ಠ ವ್ಯಕ್ತಿಗಳಾಗಿ ಮೌಲ್ಯದ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಗಳ ಅವಶ್ಯಕತೆ ಅತ್ಯಂತ ಮಹತ್ವದ್ದು ಇದು ನಮ್ಮ ಹೊಣೆಗಾರಿಕೆ ಕೂಡ. ಇಂತಹ ಉತ್ತಮ ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತೋಷ. ಅಂಕಗಳ ಶಿಕ್ಷಣ ಇನ್ನಿತರ ವಿಷಯಗಳ ಕಲಿಕೆ ಎರಡು ಮಹತ್ವ ಸಾಧಿಸಿದರೆ, ಸಾಹಿತ್ಯ ಕೂಡ ಸತ್ತು ಬದುಕಿರುವ ಸಾಲಿಗೆ ಸೇರುತ್ತವೆ. ಹುಟ್ಟು ಸಾವು ನಿಶ್ಚಿತ. ಆದ್ದರಿಂದ ಸಾರ್ಥಕ ಬದುಕು ಬದುಕಬೇಕು ಎಂದು ಹೇಳಿದರು.

‘ನೀವು ಕಥೆಗಾರರಾಗಬೇಕಾದರೆ ಒಳ್ಳೆಯ ಓದುಗರಾಗಬೇಕು. ಹಾಗಾಗಿ ಗ್ರಂಥಾಲಯಕ್ಕೆ ಹೋಗಿ. ಶಾಲಾ ಗ್ರಂಥಾಲಯಗಳನ್ನು ಬಳಸಿಕೊಳ್ಳಿ. ಉತ್ತಮ ಬದುಕು ನಮ್ಮದಾಗಬೇಕೆಂದರೆ ಸದೃಢ ದೇಹ, ಸದೃಢ ಮನಸ್ಸು ಇರಬೇಕು. ಉತ್ತಮ ಮನಸ್ಸಿಗೆ ಉತ್ತಮ ವಿಷಯಗಳು ಬೇಕು. ಕಥೆಗಳಲ್ಲಿ ವಿವಿಧ ರೀತಿಯ ಕಥೆಗಳಿವೆ, ನ್ಯಾನೋ ಕಥೆ, ಮಿನಿ ಕಥೆ, ಸಣ್ಣ ಕಥೆ....ಉತ್ತಮ ಕಥೆಗಾರನಿಗೆ ಇರಬೇಕಾದ ಗುಣ ಉತ್ತಮ ಓದುಗಾರರಾಗಬೇಕು. ಕಲ್ಪನಾ ಶಕ್ತಿ ಇರಬೇಕು, ಕಥಾ ಮೌಲ್ಯಗಳು ಹೆಚ್ಚಾಗಬೇಕಾದರೆ ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.

‘ಒಂದು ಕಥೆಗೆ ಶೀರ್ಷಿಕೆ ಹೇಗೆ ಕೊಡುವುದು, ಕಥೆಯ ಮೌಲ್ಯ ಎಂದರೇನು? ಟೈಟಲ್ ಹೇಗೆ ಕೊಡಬೇಕು? ಕಥೆಯನ್ನು ಹೇಗೆ ಹೆಣೆಯಬೇಕೆಂದು ತಿಳಿಯಬೇಕು. ಪ್ರಕೃತಿಯೇ ನಮಗೆ ಉತ್ತಮ ಶಿಕ್ಷಣವನ್ನು ನೀಡುತ್ತದೆ. ಹಾಗಾಗಿ ಹೆಚ್ಚು ಪ್ರಕೃತಿಯನ್ನು ಗಮನಿಸಿ ಧ್ಯಾನಸ್ಥ ಸ್ಥಿತಿಯಲ್ಲಿ ಕಾಮನಬಿಲ್ಲು, ಚಿಟ್ಟೆ, ಇರುವೆ ಸಾಲು ಹೀಗೆ ಎಲ್ಲ ವಿಚಾರಗಳನ್ನು ಕುತೂಹಲದಿಂದ ನೋಡಿದಾಗ ನಮಗೆ ಕಥೆ ಬರೆಯುವ ಶಕ್ತಿ ಸಿದ್ಧಿಯಾಗುತ್ತದೆ. ಪ್ರತಿಯೊಂದು ವಸ್ತುವನ್ನು ನಾವು ಕಥೆ ಬರೆಯುವ ನಿಟ್ಟಿನಲ್ಲಿ ನೋಡಿದಾಗ ಎಲ್ಲ ವಸ್ತುಗಳು, ಘಟನೆಗಳು ಕಥೆಯಾಗುತ್ತವೆ. ಇಡೀ ಕಥೆಯ ಸಾರಾಂಶ ಒಂದೆರಡು ಪದಗಳಲ್ಲಿ ಹಿಡಿದಿರಬೇಕು. ಅದು ಶೀರ್ಷಿಕೆ ಆಗುತ್ತದೆ. ಕಥೆಯಲ್ಲಿ ಧನಾತ್ಮಕ ಸಂದೇಶ ಕೊಡಬೇಕು. ಲೇಖಕನಿಗೆ ಆ ಶಕ್ತಿ ಇರುತ್ತದೆ, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಇರಬೇಕು’ ಎಂದು ವಿವರಿಸಿದರು.

ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ ಮಾತನಾಡಿ, ಚಿಕ್ಕಂದಿನಿಂದ ಕಥೆಗಳನ್ನು ಕೇಳುತ್ತ ಬೆಳೆದಿರುವ ಮಕ್ಕಳು ಅತ್ಯಂತ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಕಥೆಗಳಲ್ಲಿ ನೀತಿ ಕಥೆ, ಸಣ್ಣ ಕಥೆ ,ತೆನಾಲಿ ರಾಮನ ಕಥೆ, ಪಂಚತಂತ್ರ, ವೈಜ್ಞಾನಿಕ ಕಥೆ, ಅಜ್ಜಿ ಹೇಳಿದ ಕಥೆ, ವೀರ ಯೋಧರ ಕಥೆ, ವೀರರಾಣಿಯರ ಕಥೆ, ನದಿಗಳ ಕಥೆ ಊರಿನ ಕಥೆ, ಪುರಾಣ ಕಥೆ ಮೊದಲಾದವನ್ನು ಕೇಳಿ ಕಲ್ಪನಾ ಶಕ್ತಿಯನ್ನು ಹಾಗೂ ಬದುಕುವ ರೀತಿ ನೀತಿಗಳನ್ನು ಸಹ ಮೌಲ್ಯಗಳೊಂದಿಗೆ ಅರಿಯಬಹುದು ಎಂದು ಹೇಳಿದರು.

ಸಮಾಜ ಸೇವಕಿ ಭಾನುಮತಿ, ಕವಯಿತ್ರಿ ಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಎಎಸ್‌ಒಸಿ ಪ್ರಿಯಾಂಕ ಎಚ್.ಎಂ.ಸೇರಿದಂತೆ ಶಿಬಿರಾರ್ಥಿಗಳು ಹಾಜರಿದ್ದರು.

ಹಾಸನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮದಲ್ಲಿ ಪಾಲ್ಗೊಂಡ ಮಕ್ಕಳು ಕಥೆಗಳನ್ನು ವಾಚಿಸಿದರು.