ಸಾರಾಂಶ
ಬೆಂಗಳೂರಿಗೆ ಬರುತ್ತಿದ್ದ ಅಕಾಸಾ ಏರ್‌ಲೈನ್ಸ್ ವಿಮಾನದಲ್ಲಿ ನಾಯಿಯನ್ನು ಕರೆದೊಯ್ಯಲು ₹5 ಸಾವಿರ ಹೆಚ್ಚುವರಿಯಾಗಿ ಟಿಕೆಟ್ ವೆಚ್ಚ ಮಾಡಿದ್ದರೂ, ನಾಯಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂದು ಪ್ರಯಾಣಿಕರೊಬ್ಬರು ಕಿಡಿಕಾರಿದ್ದಾರೆ.
ಅಹಮದಾಬಾದ್: ಇಲ್ಲಿಂದ ಬೆಂಗಳೂರಿಗೆ ಬರುತ್ತಿದ್ದ ಅಕಾಸಾ ಏರ್‌ಲೈನ್ಸ್ ವಿಮಾನದಲ್ಲಿ ನಾಯಿಯನ್ನು ಕರೆದೊಯ್ಯಲು ₹5 ಸಾವಿರ ಹೆಚ್ಚುವರಿಯಾಗಿ ಟಿಕೆಟ್ ವೆಚ್ಚ ಮಾಡಿದ್ದರೂ, ನಾಯಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂದು ಪ್ರಯಾಣಿಕರೊಬ್ಬರು ಕಿಡಿಕಾರಿದ್ದಾರೆ.
ಅಹಮದಾಬಾದ್‌ನಿಂದ ಬೆಂಗಳೂರಿಗೆ ಜ.26ರಂದು ಪ್ರಯಾಣಿಸಿದ ವ್ಯಕ್ತಿ ಲಕ್ಷ್ಯ ಪಾಠಕ್, ತಮ್ಮ ಪ್ರಯಾಣ ಅತ್ಯಂತ ಕಷ್ಟಕರವಾಗಿತ್ತು ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ.
‘ನಾನು ಮತ್ತು ನನ್ನ ಪತ್ನಿ ‘ಸಿಟ್ಜು’ ನಾಯಿಯೊಂದಿಗೆ ಪ್ರಯಾಣಿಸುವುದಕ್ಕಾಗಿ ಅಕಾಸದಲ್ಲಿ ಹೆಚ್ಚುವರಿ ಹಣ ತೆತ್ತು ಟಿಕೆಟ್ ಖರೀದಿಸಿದ್ದೆವು. ಇದರಿಂದಾಗಿ ಉತ್ತಮ ಸೇವೆ ದೊರೆಯುವ ಭರವಸೆಯನ್ನು ಅವರು ನೀಡದ್ದರು.
ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಅಕಾಸ ಏರ್‌ಲೈನ್ಸ್‌ನ ಸಿಬ್ಬಂದಿ ನಮ್ಮ ನಾಯಿಯನ್ನು ಬುಟ್ಟಿಯಿಂದ ಹೊರಗೆ ತೆಗೆಯಲೂ ಬಿಡಲಿಲ್ಲ. ಅಲ್ಲದೇ ಶೌಚಾಲಯದಲ್ಲೂ ಇದಕ್ಕೆ ಅವಕಾಶವಿರಲಿಲ್ಲ. ಇದರಿಂದಾಗಿ ನಾಯಿಗೆ ಸಾಕಷ್ಟು ತೊಂದರೆಯಾಯಿತು’ ಎಂದು ಅವರು ಹೇಳಿದ್ದಾರೆ.
‘ನಾವು ಪ್ರಯಾಣ ಕೈಗೊಂಡಿದ್ದ ದಿನ ವಿಮಾನ ಹೊರಡುವುದು 3 ಗಂಟೆ ತಡವಾಯಿತು. ನಾವು 3 ಗಂಟೆಗಳ ಕಾಲ ಬೇಗ ವಿಮಾನ ನಿಲ್ದಾಣ ತಲುಪಿದ್ದ ಕಾರಣ 6 ಗಂಟೆಗಳ ಕಾಲ ಅಲ್ಲೇ ಕಾಲ ಕಳೆಯುವಂತಾಗಿತ್ತು.
ಇಷ್ಟೊಂದು ಸಮಯ ನಾಯಿಯನ್ನು ಬುಟ್ಟಿಯಲ್ಲೇ ಇಡುವುದು ಕಷ್ಟವಾಗಿತ್ತು. ಅಲ್ಲದೇ ವಿಮಾನದಲ್ಲೂ ಸಹ ನಮ್ಮ ತೊಡೆಯ ಮೇಲೆ ಇಟ್ಟುಕೊಳ್ಳಲು ಸಹ ಸಿಬ್ಬಂದಿ ಬಿಡಲಿಲ್ಲ.
ಸೀಟಿನ ಕೆಳಗೆ ಇಟ್ಟಿದ್ದರಿಂದ ಸುಸ್ತಾಗಿ ನಾಯಿ ಅಳುತ್ತಿತ್ತು. ಕೊನೆಯ ಸೀಟಿನಲ್ಲೂ ಸಹ ನಾಯಿಗಾಗಿ ಪತ್ಯೇಕ ಸ್ಥಳ ಇರಲಿಲ್ಲ. ಈ ವಿಮಾನ ಪ್ರಯಾಣ ಅತ್ಯಂತ ಭಯಂಕರವಾಗಿತ್ತು’ ಎಂದು ಅವರು ಹೇಳಿದ್ದಾರೆ.