ಯಾದಗಿರಿ: ವೇತನ ನೀಡಲು ಒತ್ತಾಯಿಸಿ ಶಿಕ್ಷಕರ ಪ್ರತಿಭಟನೆ

| Published : Jan 31 2024, 02:16 AM IST

ಸಾರಾಂಶ

ಶಹಾಪುರ ನಗರದಲ್ಲಿ ಎಸ್ಎಸ್ಎ ಶಿಕ್ಷಕರಿಗೆ ತಕ್ಷಣ ವೇತನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಸರ್ವ ಶಿಕ್ಷಣ ಅಭಿಯಾನ ಯೋಜನೆ (ಎಸ್‌ಎಸ್‌ಎ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 150 ಜನ ಶಾಲಾ ಶಿಕ್ಷಕರು ಕಳೆದ ಎರಡು, ಮೂರು ತಿಂಗಳಿಂದ ಸೂಕ್ತ ಸಂಬಳವಿಲ್ಲದೆ ಶಿಕ್ಷಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ತಕ್ಷಣ ವೇತನ ಪಾವತಿಸುವಂತೆ ಒತ್ತಾಯಿಸಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿ, ಸರ್ವ ಶಿಕ್ಷಣ ಅಭಿಯಾನ ಯೋಜನೆ (ಎಸ್‌ಎಸ್‌ಎ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 150 ಜನ ಶಾಲಾ ಶಿಕ್ಷಕರು ಕಳೆದ ಎರಡು, ಮೂರು ತಿಂಗಳಿಂದ ಸೂಕ್ತ ಸಂಬಳವಿಲ್ಲದೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಬ್ಯಾಂಕ್‌ ಸಾಲ, ಓಡಾಟದ ಖರ್ಚು ಸೇರಿ ದಿನ ನಿತ್ಯದ ಖರ್ಚುಗಳಿಗೆ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಸಿಆರ್‌ಪಿ, ಬಿಆರ್‌ಪಿ ಹಾಗೂ ಬಿಆರ್‌ಸಿ ಸೇರಿ 150 ಜನ ಎಸ್ಎಸ್ಎ ಶಿಕ್ಷಕರಿಗೆ ಮೂರು ತಿಂಗಳಿಂದ ಸಂಬಳವಿಲ್ಲ. ಮೂರು ತಿಂಗಳಿನಿಂದ ಸಂಬಳ ಬಾರದಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕರಿಗೆ ಸಂಬಳ ಹೊರತಾಗಿ ಇತರೆ ಆದಾಯ ಇರುವುದಿಲ್ಲ. ಬದುಕಿಗೆ ಸಂಬಳವೇ ಆಧಾರವಾಗಿದೆ. ಸಂಬಳವಿಲ್ಲದೆ ಜೀವನ ಅಯೋಮಯವಾಗಿದೆ. ಮೇಲಧಿಕಾರಿಗಳ ಬೇಜವಾಬ್ದಾರಿಯಿಂದ ಶಿಕ್ಷಕರಿಗೆ ವೇತನ ನಿಂತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶಿಕ್ಷಕರ ಗೋಳು ಕೇಳದಿರುವ ಈ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಮಲ್ಲಿಕಾರ್ಜುನ್ ಹುರಸುಗುಂಡಗಿ, ವಾಸು ಕೋಗಿಲ್ಕರ್, ತಾಲೂಕು ಸಂಚಾಲಕ ಮರೆಪ್ಪ ಕ್ರಾಂತಿ, ಶರಬಣ್ಣ ದೋರನಹಳ್ಳಿ, ಶ್ರೀಮಂತ ಸಿಂಗನಹಳ್ಳಿ, ಜೈಭೀಮ್ ಸಿಂಗನಹಳ್ಳಿ, ನಾಗರಾಜ್ ಕೊಡಮನಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ, ಶಿವಪುತ್ರ ಡಾಂಗೆ ಸೇರಿದಂತೆ ಇತರರಿದ್ದರು.