ಬೆಂಗಳೂರಿನ ಹೊರವಲಯದಲ್ಲಿ 40,000 ಕೋಟಿ ರೂ. ವೆಚ್ಚದ ‘ಕ್ವೀನ್ ಸಿಟಿ’ ನಿರ್ಮಾಣಕ್ಕೆ ಚಾಲನೆ

| Published : Sep 27 2024, 01:20 AM IST / Updated: Sep 27 2024, 07:21 AM IST

ಬೆಂಗಳೂರಿನ ಹೊರವಲಯದಲ್ಲಿ 40,000 ಕೋಟಿ ರೂ. ವೆಚ್ಚದ ‘ಕ್ವೀನ್ ಸಿಟಿ’ ನಿರ್ಮಾಣಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಹೊರವಲಯದಲ್ಲಿ ಸ್ಮಾರ್ಟ್ ಲಿವಿಂಗ್ ಪರಿಕಲ್ಪನೆಯ ‘ಕ್ವೀನ್ ಸಿಟಿ’ ನಿರ್ಮಾಣವಾಗಲಿದ್ದು, ಈ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ನಗರವು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಲಿದೆ.

 ಬೆಂಗಳೂರು :  ಗುಜರಾತ್‌ನ ‘ಗಿಫ್ಟ್‌ ಸಿಟಿ’ ಮಾದರಿಯಲ್ಲಿ ಬೆಂಗಳೂರು ಹೊರವಲಯದ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವಿನ 5,800 ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಲಿವಿಂಗ್ ಪರಿಕಲ್ಪನೆಯ ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರ - ಕ್ವಿನ್ ಸಿಟಿ (ಕೆ.ಡಬ್ಲ್ಯು.ಐ.ಎನ್‌) ತಲೆ ಎತ್ತಲಿದ್ದು, ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

5 ಲಕ್ಷ ಜನವಸತಿ ಸಾಮರ್ಥ್ಯದ ಕ್ವಿನ್ ಸಿಟಿಯು ಸೋಲಾರ್ ವಿದ್ಯುತ್, ಹಸಿರು ಪರಿಕಲ್ಪನೆ, ತ್ಯಾಜ್ಯ ಪುನರ್ಬಳಕೆ ಸೇರಿದಂತೆ ಅನೇಕ ಪರಿಸರ ಸ್ನೇಹಿ ಕ್ರಮಗಳು, ಆಧುನಿಕ ಮೂಲಸೌಕರ್ಯಗಳೊಂದಿಗೆ ನಿರ್ಮಾಣವಾಗಲಿದೆ. ಈ ಸ್ಮಾರ್ಟ್ ನಗರಕ್ಕೆ ಸುಮಾರು 40,000 ಕೋಟಿ ರು. ಹೂಡಿಕೆಯಾಗಲಿದೆ. ಇದರಿಂದ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.

ಕ್ವಿನ್‌ ಸಿಟಿಯ ಶೇ.40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗಿದೆ. 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ 465 ಎಕರೆ ಜಮೀನು, ವರ್ಷಕ್ಕೆ 7 ಸಾವಿರ ಟನ್ ಹಣ್ಣು-ತರಕಾರಿ ಬೆಳೆಯಲು 200 ಎಕರೆ ಜಮೀನು, ಶೇ.50ರಿಂದ ಶೇ.70ರಷ್ಟು ಜಲ ಮರುಪೂರಣ ವ್ಯವಸ್ಥೆ ಇರಲಿದೆ. ಈ ಮೂಲಕ ಅನೇಕ ಅಗತ್ಯ ಮೂಲಸೌಕರ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಲಾಗಿದೆ.

ಜ್ಞಾನ ಜಿಲ್ಲೆ:

ಪ್ರತ್ಯೇಕ ಜ್ಞಾನ ಕೇಂದ್ರದೊಂದಿಗೆ ಆಧುನಿಕ ಪಠ್ಯಕ್ರಮ ಮತ್ತು ಉನ್ನತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಪ್ರಧಾನ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುತ್ತದೆ. 500 ಉನ್ನತ ವಿದೇಶಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳನ್ನು ತೆರೆಯಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತದೆ.

ಆರೋಗ್ಯ ಜಿಲ್ಲೆ:

ಜೀವ ವಿಜ್ಞಾನ ಪಾರ್ಕ್ ಒಳಗೊಂಡಿರುವ ಕ್ವಿನ್‌ ಸಿಟಿಯು ಏಷ್ಯಾದ ಪ್ರಮುಖ ಶೈಕ್ಷಣಿಕ ವೈದ್ಯಕೀಯ ಕೇಂದ್ರವಾಗಿ ಬೆಳೆಯಲಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳನ್ನು ಸೆಳೆಯುತ್ತದೆ. ಆರೋಗ್ಯ ಪ್ರವಾಸೋದ್ಯಮವು ಬೆಳೆಯಲಿದೆ.

ನಾವೀನ್ಯತಾ ಜಿಲ್ಲೆ:

ಕ್ವಿನ್‌ ಸಿಟಿಯು ಜೀವ ವಿಜ್ಞಾನ, ಭವಿಷ್ಯದ ಸಂಚಾರ, ಸೆಮಿ ಕಂಡಕ್ಟರ್‌, ವೈಮಾಂತರಿಕ್ಷ ಮತ್ತು ರಕ್ಷಣೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಗಳು ಸ್ಥಾಪನೆಯಾಗಲಿವೆ. ನಾವೀನ್ಯತೆ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.

ಸಂಶೋಧನಾ ಜಿಲ್ಲೆ:

ಜೈವಿಕ ಔಷಧ ಮತ್ತು ವೈಜ್ಞಾನಿಕ ಸಂಶೋಧನೆ ಹೆಚ್ಚಿಸಲು ಕ್ಲಿನಿಕಲ್ ಪ್ರಯೋಗ ಕೇಂದ್ರಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಅತ್ಯಾಧುನಿಕ ತಂತ್ರಜ್ಞಾನಗಳ ಲಭ್ಯವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಂಶೋಧನೆಗೆ ಸಂಬಂಧಿಸಿದ ಸೆಮಿನಾರ್, ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಕಲೆ, ಸಂಸ್ಕೃತಿ ಜಿಲ್ಲೆ:

ಕಲಾವಿದರು, ವಿನ್ಯಾಸಕಾರರು, ಕುಶಲಕರ್ಮಿಗಳು, ಕ್ರಿಯಾತ್ಮಕ ಕೆಲಸಗಾರರಿಗೆ ಪ್ರೋತ್ಸಾಹಿಸಲು ಪೂರಕವಾದ ಸ್ಥಳಾವಕಾಶವನ್ನು ಒದಗಿಸಲಾಗುತ್ತದೆ.

ಅತ್ಯುತ್ತಮ ರಸ್ತೆ ಸಂಪರ್ಕ, ಎಲ್ಲಾ ಮಾದರಿಯ ಸಮೂಹ ಸಾರಿಗೆ ವ್ಯವಸ್ಥೆ, ಸೈಕ್ಲಿಂಗ್, ಪಾದಚಾರಿಗಳಿಗೆ ಹೆಚ್ಚಿನ ಆದ್ಯತೆ, ಆಟದ ಮೈದಾನಗಳು, ಬಯಲು ಸ್ಥಳಗಳು ಸೇರಿದಂತೆ ಸ್ಮಾರ್ಟ್ ಸಿಟಿಯ ಪರಿಕಲ್ಪನೆಯಲ್ಲಿ ಕ್ವಿನ್ ಸಿಟಿ ಅಭಿವೃದ್ಧಿಪಡಿಸಲಾಗುತ್ತದೆ.