ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಅಗತ್ಯ

| Published : Apr 29 2024, 01:31 AM IST

ಸಾರಾಂಶ

ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಆನೆಗಳನ್ನು ಹಿಮ್ಮೆಟ್ಟಿಸಲು ರೈತರು ನಡೆಯುತ್ತಿರುವ ಹೊರಾಟದಲ್ಲಿ ಇದುವರೆಗೂ ೧೩ ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಕಾಡಾನೆಗಳ ಉಪಟಳ ಮಿತಿಮೀರಿ ರೈತರನ್ನು ಕಾಡುತ್ತಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುವುದರಿಂದ ಮಾನವರ ಜೊತೆ ಕಾಡಾನೆಗಳ ಸಂಘರ್ಷ ನಿರಂತರವಾಗಿದೆ.

ಹಲವು ವರ್ಷಗಳಿಂದ ಕಾಡಾನೆಗಳ ಹಿಂಡು ತಮಿಳುನಾಡಿನಿಂದ ಆಹಾರಕ್ಕಾಗಿ ರಾಜ್ಯದ ಗಡಿ ಗ್ರಾಮಗಳಾದ ಬಲಮಂದೆ, ದೊಡ್ಡಪನ್ನಾಂಡಹಳ್ಳಿ, ಭೀಮಗಾನಹಳ್ಳಿ, ತೊಪ್ಪನಹಳ್ಳಿ, ಕದರಿನತ್ತ ಕಾಡಿನ ಮೂಲಕ ಪ್ರವೇಶ ಮಾಡಿ ಬಳಿಕ ಗ್ರಾಮಗಳತ್ತ ಲಗ್ಗೆ ಹಾಕುತ್ತಿವೆ. ಬರದಲ್ಲಿ ಬೆವರು ಸುರಿಸಿ ರೈತರು ಬೆಳೆದಿರುವ ಬೆಳೆಗಳು ಕಾಡಾನೆಗಳ ದಾಳಿಗೆ ನಾಶವಾಗುತ್ತಿವೆ.

ಇದುವರೆಗೆ 13 ರೈತರ ಬಲಿ

ಕಾಡಾನೆಗಳೆಂದರೆ ಗ್ರಾಮಸ್ಥರು ಮೊದಮೊದಲು ಹೆದರುತ್ತಿದ್ದರು. ಆನೆಗಳು ಗ್ರಾಮದ ಸುತ್ತಮುತ್ತ ಹೊಲಗಳಿಗೆ ಬಂದರೆ ಮನೆಯಿಂದ ಹೊರಗಡೆ ಬರಲೂ ಹೆದರುತ್ತಿದ್ದರು. ಆದರೆ ಈಗ ಇದೆಲ್ಲ ಮಾಮೂಲಾಗಿದೆ. ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಆನೆಗಳನ್ನು ಹಿಮ್ಮೆಟ್ಟಿಸಲು ರೈತರು ನಡೆಯುತ್ತಿರುವ ಹೊರಾಟದಲ್ಲಿ ಇದುವರೆಗೂ ೧೩ ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಅವರು ಆನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೆ. ಪದೇ ಪದೇ ಆನೆಗಳು ಬಂದು ಹೋಗುವುದರಿಂದ ಕಾಮಸಮುದ್ರ ಹೋಬಳಿಯ ಪ್ರದೇಶವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಬೇಕೆಂದು ರೈತರು ಸರ್ಕಾರಕ್ಕೆ ಹತ್ತು ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿದ್ದರು. ಇದನ್ನು ಮಾಡಿದರೆ ಕಾಡಿನಿಂದ ಗ್ರಾಮಗಳ ಕಡೆಗೆ ಆನೆಗಳು ಬಾರದಂತೆ ಬೇಲಿ ಅಳವಡಿಸಲಾಗುತ್ತದೆ. ಅವುಗಳಿಗೆ ಗಿಡಗಳನ್ನು ಬೆಳೆಸಿ ನೀರು ಪೂರೈಕೆ ಮಾಡುವುದು ಸೇರಿದಂತೆ ಅದಕ್ಕಾಗಿಯೇ ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ. ಈ ಕಡತ ಸಹ ಹನ್ನೊಂದು ವರ್ಷಗಳಿಂದ ಧೂಳು ತಿನ್ನುತ್ತಿದೆ.

ಶಾಸಕರರಿಗೂ ಆಸಕ್ತಿ ಇಲ್ಲ

ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಾಡಾನೆಗಳನ್ನು ಕಾಡಿನಿಂದ ನಾಡಿನತ್ತ ಬಾರದಂತೆ ಯೋಜನೆ ರೂಪಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಆದರೆ ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದರಿಂದ ನನ್ನ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದರು. ಈಗ ಅವರದ್ದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ, ಆದರೂ ಸಮಸ್ಯೆಗೆ ಮಾತ್ರ ಮುಕ್ತಿ ಸಿಗಲಿಲ್ಲ.

ರೈತರು ಸತ್ತಾಗ ಮಾತ್ರ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಹೇಳುವುದಕ್ಕೆ ಮಾತ್ರ ಜನಪ್ರತಿನಿಧಿಗಳು ಸೀಮಿತವಾಗಿದ್ದಾರೆ ವಿನಃ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂಬುದು ರೈತರ ದೂರು.ಈಗಲಾದರೂ ಕ್ರಮ ಕೈಗೊಳ್ಳಲಿ

ಅರಣ್ಯದೊಳಗಿಂದ ಆನೆಗಳು ಗ್ರಾಮಗಳತ್ತ ಬಾರದಂತೆ ತಡೆಯಲು ಸೋಲಾರ್ ಬೇಲಿ ಅಳವಡಿಸಲಾಗಿದೆ, ಆದರೆ ನಿರ್ವಹಣೆ ಇಲ್ಲದೆ ಸೋಲಾರ್ ಬ್ಯಾಟರಿಗಳು ಕಳ್ಳರ ಪಾಲಾಗಿರುವುದರಿಂದ ಆನೆಗಳು ನಾಡಿನತ್ತ ನುಗ್ಗಲು ಸಹಕಾರಿಯಾಗಿದೆ. ಈಗಲಾದರೂ ಸರ್ಕಾರ ಆನೆಗಳಿಂದ ರೈತರಿಗೆ ಮುಕ್ತಿ ಕಾಣಿಸಲು ಕಾರ್ಯೋನ್ಮುಖವಾಗಲಿ ಎಂದು ಗಡಿ ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.