ಸಾರಾಂಶ
- ಸಕಾಲಕ್ಕೆ ಔಷಧೋಪಚಾರ ನಡೆಸಿದಲ್ಲಿ ರೋಗ, ಕೀಟಬಾಧೆ ನಿಯಂತ್ರಣ: ಕೃಷಿ ಇಲಾಖೆ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಲಾಭದಾಯಕ ವಾಣಿಜ್ಯ ಬೆಳೆಗಳಲ್ಲಿ ಹತ್ತಿ ಬೆಳೆ ಪ್ರಮುಖವಾದದು. ಬಿಳಿ ಬಂಗಾರ ಎಂದು ಕರೆಯುವ ಹತ್ತಿಯನ್ನು ನೂಲಿನ ರಾಜ ಎಂದೂ ಕರೆಯುತ್ತಾರೆ. ಆದರೆ, ಹತ್ತಿ ಬೆಳೆಗೆ ರೋಗ, ಕೀಟಬಾಧೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಹತ್ತಿ ಗಿಡದ ಎಲೆಗಳು ಕೆಂಪಾಗುವುದನ್ನು ಹೆಚ್ಚು ಕಾಣುತ್ತಿದ್ದೇವೆ. ಆರಂಭಿಕ ಹಂತದಲ್ಲಿಯೇ ಹತೋಟಿ ಕ್ರಮ ಕೈಗೊಂಡರೆ ಗುಣಮಟ್ಟದ ಹತ್ತಿ ಬೆಳೆಯಬಹುದು ಮತ್ತು ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಹವಾಮಾನದ ವೈಪರಿತ್ಯದಿಂದಾಗಿ ಪೋಷಕಾಂಶಗಳ ಕೊರತೆ, ತಡವಾದ ಬಿತ್ತನೆ, ಹತ್ತಿಯನ್ನು ಸತತವಾಗಿ ಒಂದೇ ಜಮೀನಿನಲ್ಲಿ ಬೆಳೆದಾಗ ಎಲೆಗಳು ಕೆಂಪಾಗಬಹುದು. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದಾಗ, ಭೂಮಿಗೆ ಸಾಕಷ್ಟು ಪೋಷಕಾಂಶಗಳನ್ನು ಕೊಟ್ಟ ಸಮಯದಲ್ಲಿ ಮಳೆ ಅಭಾವ ಉಂಟಾದಾಗಲೂ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸಸ್ಯ ಕಳೆದುಕೊಳ್ಳುತ್ತದೆ ಎಂದಿದ್ದಾರೆ.ಎಕರೆಗೆ 200-300 ಲೀ. ದ್ರಾವಣ:
ಹವಮಾನ ವೈಪರಿತ್ಯದಿಂದ ತಾಪಮಾನ ಹೆಚ್ಚಾಗಿ ಹತ್ತಿ ಬೆಳೆಯಲ್ಲಿ ಸಾರಜನಕದ ಪ್ರಮಾಣ ಕಡಿಮೆಯಾಗಿ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಸಾರಜನಕದ ಪ್ರಮಾಣ ಕಡಿಮೆ ಆದಾಗ ರಂಜಕದ ಪ್ರಮಾಣ ಕೂಡ ಇಳಿಕೆ ಆಗುವುದು. ಆದ್ದರಿಂದ ಶೇ.2ರ ಡಿಎಪಿ ದ್ರಾವಣವನ್ನು ಸಿಂಪರಣೆ ಮಾಡಬೇಕು. ಎಕರೆಗೆ 200-300 ಲೀ. ದ್ರಾವಣ ಬೇಕಾಗುತ್ತದೆ. ಎಲೆ ಕೆಂಪಾದರೆ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗಿ ಇಳುವರಿಯು ಕಡಿಮೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಪೋಷಕಾಂಶಗಳಾದ ಮೆಗ್ನೀಷಿಯಂ, ಪೊಟ್ಯಾಷಿಯಂ ಕೊರತೆಯಿಂದ ಎಲೆಗಳು ಕೆಂಪಾಗಬಹುದು. ಮಳೆಯಾಶ್ರಿತ ಬೆಳೆಯಲ್ಲಿ ಹೆಚ್ಚು ಮಳೆ ಬಂದಾಗ, ನೀರು ನಿಲ್ಲುವಂತಹ ಪ್ರದೇಶಗಳಲ್ಲಿ ಬೆಳೆಯು ಮೊದಲು ಹಳದಿಯಾಗಿ ನಂತರ ಕೆಂಪಾಗುವುದು ಎಂದು ತಿಳಿಸಿದ್ದಾರೆ.
ಡಿಎಪಿ ದ್ರಾವಣ ತಯಾರಿಕೆ ಹೇಗೆ?:ಪ್ರತಿ ಲೀ. ನೀರಿಗೆ 20 ಗ್ರಾಂ. ಡಿಎಪಿ ಅನ್ನು ನೀರಿನಲ್ಲಿ ನೆನೆಸಿ ತಯಾರಿಸಿದ ದ್ರಾವಣವನ್ನು 12-18 ಗಂಟೆಗಳ ಕಾಲ ಇರಿಸಿ, ನಂತರ ಸಿಂಪರಣೆ ಮಾಡುವುದು ಉತ್ತಮ. ಕೇವಲ ತಿಳಿ ದ್ರಾವಣವನ್ನು ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 200-300 ಲೀ. ದ್ರಾವಣ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ರೈತರಿಗೆ ಮಾಹಿತಿ ನೀಡಿದ್ದಾರೆ.
------ (ಸಾಂದರ್ಭಿಕ ಚಿತ್ರಗಳು)